| ವಿಂಡೀಸ್‌ ಹಿನ್ನಡೆಗೆ ವಿಶ್ಲೇಷಣೆ ಕೆಲಕಾಲದಿಂದ ಕುಸಿತದ ಸಂಕೇತ: ಬ್ರಾಥ್‌ವೇಟ್‌ ಹರಾರೆ: ಏಕದಿನ ವಿಶ್ವಕಪ್‌ಗೆ ಅರ್ಹತೆ ಪಡೆಯಲು ವಿಫಲವಾಗುವ ಮೂಲಕ ವೆಸ್ಟ್‌ ಇಂಡೀಸ್‌ ತಂಡ ಅಧಃಪತನಕ್ಕೆ ಇಳಿದಿದೆ. ಆದರೆ ತಂಡ ಕುಸಿಯುತ್ತಿರುವ ಸಾಗುತ್ತಿರುವ ಸಂಕೇತಗಳು ಕೆಲವು ಸಮಯದಿಂದ ಕಂಡುಬಂದಿದ್ದವು ಎಂದು ಮಾಜಿ ನಾಯಕ ಕಾರ್ಲೊಸ್‌ ಬ್ರಾಥ್‌ವೇಟ್‌ ಹೇಳಿದ್ದಾರೆ. ಸೂಪರ್‌ಸಿಕ್ಸ್‌ ಪಂದ್ಯದಲ್ಲಿ ಶನಿವಾರ ಸ್ಕಾಟ್ಲೆಂಡ್‌ ಎದುರು ಹೀನಾಯ ಸೋಲಿನಿಂದಾಗಿ ವೆಸ್ಟ್‌ ಇಂಡೀಸ್‌ ತಂಡದ ವಿಶ್ವಕಪ್‌ ಅರ್ಹತೆ ಬಾಗಿಲು ಮುಚ್ಚಿತ್ತು. ಎರಡು ಬಾರಿ ಚಾಂಪಿಯನ್‌ ಆಗಿದ್ದು, ಮೂರನೇ ವಿಶ್ವಕಪ್‌ನಲ್ಲಿ ಫೈನಲ್‌ ತಲುಪಿದ್ದ ವೆಸ್ಟ್‌ ಇಂಡೀಸ್‌ ಇದೇ ಮೊದಲ ಸಲ ವಿಶ್ವಕಪ್‌ನಲ್ಲಿ ಸ್ಥಾನ ಪಡೆಯಲು ವಿಫಲವಾಗಿದೆ. ಲೀಗ್‌ ಹಂತದಲ್ಲಿ ಎರಡು ಪಂದ್ಯಗಳನ್ನು (ನೇಪಾಳ, ಅಮೆರಿಕ ವಿರುದ್ಧ) ಗೆದ್ದರೂ ಅವುಗಳು ಸೂಪರ್‌ಸಿಕ್ಸ್‌ಗೆ ಅರ್ಹತೆ ಪಡೆಯದ ಕಾರಣ ವೆಸ್ಟ್‌ ಇಂಡೀಸ್‌ ಪಾಯಿಂಟ್ಸ್‌ ಇಲ್ಲದೇ ಸೂಪರ್‌ ಸಿಕ್ಸ್‌ ಹಂತದಲ್ಲಿ ಆಡಬೇಕಾಗಿತ್ತು. ‘ಈ ಹಿನ್ನಡೆಯ ಸೂಚನೆಗಳು ದೀರ್ಘ ಕಾಲದಿಂದ ಕಂಡುಬಂದಿದೆ. ಕಳೆದ ವರ್ಷ ಇನ್ನೊಂದು ಮಾದರಿಯ ಟಿ–20 ವಿಶ್ವಕಪ್‌ನಲ್ಲೂ ತಂಡವು (ಸೂಪರ್‌ 12 ಹಂತಕ್ಕೇರಲು) ವಿಫಲವಾಗಿತ್ತು’ ಎಂದು ಐಸಿಸಿಯ ವೆಬ್‌ಸೈಟ್‌ನಲ್ಲಿ ಪ್ರಕಟವಾಗಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ. 2016ರಲ್ಲಿ ವೆಸ್ಟ್‌ ಇಂಡೀಸ್‌ ಟಿ–20 ವಿಶ್ವಕಪ್‌ ಗೆಲ್ಲುವಲ್ಲಿ ಬ್ರಾಥ್‌ವೇಟ್‌ ಪ್ರಮುಖ ಪಾತ್ರ ವಹಿಸಿದ್ದರು. ‘ಇದು ಅತ್ಯಂತ ಕನಿಷ್ಠ ಮಟ್ಟ’ ಎಂದಿದ್ದಾರೆ. ಹೊಸದಲ್ಲ: ಬಿಷಪ್‌ ಯುವ ಆಟಗಾರರಿರುವ ಈಗಿನ ತಂಡ ಆಡುವುದಕ್ಕಿಂತ ಬಹಳ ಹಿಂದೆಯೇ ಸಮಸ್ಯೆಗಳು ಆರಂಭವಾಗಿದ್ದವು ಎಂದು ಮಾಜಿ ವೇಗದ ಬೌಲರ್ ಇಯಾನ್‌ ಬಿಷಪ್ ಅಭಿಪ್ರಾಯಪಟ್ಟಿದ್ದಾರೆ. ‘ಸುಮಾರು ಒಂದು ದಶಕದಿಂದ ನಾವು ಏಕದಿನ ಕ್ರಿಕೆಟ್‌ನಲ್ಲಿ ಪ್ರಬಲ ಕ್ರಿಕೆಟ್‌ ರಾಷ್ಟ್ರಗಳ ವಿರುದ್ಧ ಸ್ಥಿರ ಪ್ರದರ್ಶನ ನೀಡಲು ವಿಫಲರಾಗಿದ್ದೇವೆ’ ಎಂದು ಕ್ರಿಕೆಟ್‌ ವೆಬ್‌ಸೈಟ್‌ ‘ಕ್ರಿಕ್‌ ಇನ್ಫೋ’ಗೆ ತಿಳಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.