ದುಲೀಪ್‌ ಟ್ರೋಫಿ: ಈಶಾನ್ಯ ವಲಯ ವಿರುದ್ಧ 511 ರನ್‌ ಗೆಲುವು, ಸೆಮಿಫೈನಲ್‌ಗೆ ಉತ್ತರ ವಲಯ ಬೆಂಗಳೂರು: ಈಶಾನ್ಯ ವಲಯ ತಂಡದ ವಿರುದ್ಧ 511 ರನ್‌ಗಳ ಭಾರಿ ಅಂತರದ ಗೆಲುವು ಸಾಧಿಸಿದ ಉತ್ತರ ವಲಯ ತಂಡದವರು ದುಲೀಪ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಸೆಮಿಫೈನಲ್‌ ಪ್ರವೇಶಿಸಿದರು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಗೆಲುವಿಗೆ 666 ರನ್‌ಗಳ ಬೃಹತ್‌ ಗುರಿ ಬೆನ್ನಟ್ಟಿದ ಈಶಾನ್ಯ ವಲಯ, ನಾಲ್ಕನೇ ದಿನವಾದ ಶನಿವಾರ 154 ರನ್‌ಗಳಿಗೆ ಆಲೌಟಾಯಿತು. 3 ವಿಕೆಟ್‌ಗಳಿಗೆ 58 ರನ್‌ಗಳಿಂದ ದಿನದಾಟ ಮುಂದುವರಿಸಿದ್ದ ಈಶಾನ್ಯ ವಲಯ ತಂಡದ ಬ್ಯಾಟರ್‌ಗಳು, ಉತ್ತರ ವಲಯದ ಬೌಲರ್‌ಗಳ ಶಿಸ್ತಿನ ದಾಳಿಯನ್ನು ಎದುರಿಸಿ ನಿಲ್ಲಲು ವಿಫಲರಾದರು. ಪಲ್ಜೋರ್ ತಮಾಂಗ್ (40) ಮತ್ತು ನಿಲೇಶ್‌ ಲಮಿಚಾನೆ (27) ಅವರು ಬೆಳಗ್ಗಿನ ಅವದಿಯ ಕೆಲವು ಓವರ್‌ಗಳನ್ನು ಛಲದಿಂದ ಆಡಿ, ನಾಲ್ಕನೇ ವಿಕೆಟ್‌ಗೆ 57 ರನ್ ಸೇರಿಸಿದರು. ಈ ಪಂದ್ಯದಲ್ಲಿ ಈಶಾನ್ಯ ವಲಯ ತಂಡದ ಪರ ದಾಖಲಾದ ಅತಿದೊಡ್ಡ ಜತೆಯಾಟ ಇದು. ನಿಶಾಂತ್ ಸಿಂಧು ಅವರು ನಿಲೇಶ್‌ ವಿಕೆಟ್‌ ಪಡೆದು ಈ ಜತೆಯಾಟ ಮುರಿದರು. ಆ ಬಳಿಕ ಆಫ್‌ಸ್ಪಿನ್ನರ್‌ ಪುಲಕಿತ್‌ ನಾರಂಗ್‌ (43ಕ್ಕೆ 4) ಅವರ ಪರಿಣಾಮಕಾರಿ ದಾಳಿಗೆ ನಲುಗಿದ ರೊಂಗ್‌ಸೆನ್‌ ಜೊನಾಥನ್‌ ಬಳಗ, 154 ರನ್‌ಗಳಿಗೆ ಆಲೌಟಾಯಿತು. ಸೌರಭ್‌ ಕುಮಾರ್‌ಗೆ 8 ವಿಕೆಟ್‌: ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆದ ಇನ್ನೊಂದು ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಕೇಂದ್ರ ವಲಯ 170 ರನ್‌ಗಳಿಂದ ಪೂರ್ವ ವಲಯ ವಿರುದ್ಧ ಗೆದ್ದಿತು. 300 ರನ್‌ಗಳ ಗುರಿ ಬೆನ್ನಟ್ಟಿದ ಪೂರ್ವ ವಲಯ, 129 ರನ್‌ಗಳಿಗೆ ಆಲೌಟಾಯಿತು. 6 ವಿಕೆಟ್‌ಗಳಿಗೆ 69 ರನ್‌ಗಳಿಂದ ಆಟ ಮುಂದುವರಿಸಿದ ತಂಡವು ಸೌರಭ್‌ ಕುಮಾರ್‌ (64ಕ್ಕೆ 8) ಅವರ ಪರಿಣಾಮಕಾರಿ ದಾಳಿಗೆ ನಲುಗಿತು. ಮೊದಲ ಇನಿಂಗ್ಸ್‌ನಲ್ಲಿ ಮೂರು ವಿಕೆಟ್‌ ಗಳಿಸಿದ್ದ ಸೌರಭ್‌ ಒಟ್ಟು 11 ವಿಕೆಟ್‌ ಪಡೆದ ಸಾಧನೆ ಮಾಡಿದರು. ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಉತ್ತರ ವಲಯ: 136 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 540. ಈಶಾನ್ಯ ವಲಯ: 39.2 ಓವರ್‌ಗಳಲ್ಲಿ 134. ಎರಡನೇ ಇನಿಂಗ್ಸ್: ಉತ್ತರ ವಲಯ: 55.1 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 259 ಡಿಕ್ಲೇರ್ಡ್. ಈಶಾನ್ಯ ವಲಯ: 47.5 ಓವರ್‌ಗಳಲ್ಲಿ 154 (ಪಲ್ಜೋರ್ ತಮಾಂಗ್ 40, ನಿಲೇಶ್‌ ಲಮಿಚಾನೆ 27, ಪುಲಕಿತ್‌ ನಾರಂಗ್‌ 43ಕ್ಕೆ 4, ನಿಶಾಂತ್‌ ಸಿಂಧು 25ಕ್ಕೆ 2) ಫಲಿತಾಂಶ: ಉತ್ತರ ವಲಯಕ್ಕೆ 511 ರನ್‌ ಗೆಲುವು ಆಲೂರು ಕ್ರೀಡಾಂಗಣ: ಮೊದಲ ಇನಿಂಗ್ಸ್: ಕೇಂದ್ರ ವಲಯ: 71.4 ಓವರ್‌ಗಳಲ್ಲಿ 182, ಪೂರ್ವ ವಲಯ: 42.2 ಓವರ್‌ಗಳಲ್ಲಿ 122. ಎರಡನೇ ಇನಿಂಗ್ಸ್:ಕೇಂದ್ರ ವಲಯ: 87.5 ಓವರ್‌ಗಳಲ್ಲಿ 239. ಪೂರ್ವ ವಲಯ: 41.2 ಓವರ್‌ಗಳಲ್ಲಿ 129 (ಶಹಬಾಜ್‌ ನದೀಂ 14, ಆಕಾಶ್‌ ದೀಪ್‌ 14, ಸೌರಭ್‌ ಕುಮಾರ್‌ 64ಕ್ಕೆ 8) ಫಲಿತಾಂಶ: ಕೇಂದ್ರ ವಲಯಕ್ಕೆ 170 ರನ್‌ ಗೆಲುವು ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.