2023 | ಏಕದಿನ ವಿಶ್ವಕಪ್‌ಗೆ ಅರ್ಹತೆ ಪಡೆಯಲು ವಿಂಡೀಸ್‌ ವಿಫಲ ಹರಾರೆ (ರಾಯಿಟರ್ಸ್‌): ಎರಡು ಬಾರಿಯ ಚಾಂಪಿಯನ್‌ ವೆಸ್ಟ್‌ ಇಂಡೀಸ್‌ ತಂಡ ಇದೇ ಮೊದಲ ಬಾರಿ ಏಕದಿನ ವಿಶ್ವಕಪ್‌ನಲ್ಲಿ ಆಡುತ್ತಿಲ್ಲ. ಅರ್ಹತಾ ಟೂರ್ನಿಯಲ್ಲಿ ಶನಿವಾರ ಸ್ಕಾಟ್ಲೆಂಡ್ ಎದುರು ಏಳು ವಿಕೆಟ್‌ಗಳಿಂದ ‌ಮುಖಭಂಗ ಅನುಭವಿಸುವ ಮೂಲಕ ವಿಶ್ವಕಪ್‌ನಲ್ಲಿ ಸ್ಥಾನ ಪಡೆಯುವ ಆ ತಂಡದ ಕನಸು ಭಗ್ನಗೊಂಡಿತು. ಟಾಸ್‌ ಗೆದ್ದ ಸ್ಕಾಟ್ಲೆಂಡ್‌, ವೆಸ್ಟ್‌ ಇಂಡೀಸ್‌ ತಂಡವನ್ನು ಬ್ಯಾಟಿಂಗಿಗೆ ಇಳಿಸಿ 43.2 ಓವರುಗಳಲ್ಲಿ 181 ರನ್‌ಗಳಿಗೆ ಕಟ್ಟಿಹಾಕಿತು. ಈ ಮೊತ್ತವನ್ನು ಸ್ಕಾಟ್ಲೆಂಡ್‌ ಇನ್ನೂ 39 ಎಸೆತಗಳಿರುವಂತೆ (3 ವಿಕೆಟ್‌ಗೆ 185) ದಾಟಿತು. ಮೂರು ವಿಕೆಟ್‌ ಪಡೆದಿದ್ದ ಮೆಕ್‌ಮುಲೆನ್‌ ಬ್ಯಾಟಿಂಗ್‌ನಲ್ಲೂ ಮಿಂಚಿ 69 ರನ್‌ ಬಾರಿಸಿದರು. ಆರಂಭ ಆಟಗಾರ ಮ್ಯಾಥ್ಯೂ ಕ್ರಾಸ್‌ 74 ರನ್‌ ಗಳಿಸಿ ಅಜೇಯರಾಗುಳಿದರು. ಅರ್ಹತಾ ಟೂರ್ನಿಯಿಂದ ಎರಡು ತಂಡಗಳಷ್ಟೇ ವಿಶ್ವಕಪ್‌ನಲ್ಲಿ ಸ್ಥಾನ ಪಡೆಯಲಿವೆ. ಅಕ್ಟೋಬರ್‌ 5 ರಿಂದ ನವೆಂಬರ್‌ 19ರವರೆಗೆ ಭಾರತದಲ್ಲಿ ವಿಶ್ವಕಪ್‌ ನಡೆಯಲಿದೆ. ಸೂಪರ್‌ ಸಿಕ್ಸ್‌ ಹಂತದಲ್ಲಿ ವೆಸ್ಟ್‌ ಇಂಡೀಸ್‌ ಮೂರು ಪಂದ್ಯಗಳಿಂದ ಒಂದೂ ಪಾಯಿಂಟ್‌ ಪಡೆದಿಲ್ಲ. ಶ್ರೀಲಂಕಾ ಮತ್ತು ಆತಿಥೇಯ ಜಿಂಬಾಬ್ವೆ ತಂಡಗಳು ಈಗಾಗಲೇ 3 ಪಂದ್ಯಗಳಿಂದ ಆರು ಪಾಯಿಂಟ್ಸ್‌ ಪಡೆದಿವೆ.‌ ಸ್ಕಾಟ್ಲೆಂಡ್‌ ಒಟ್ಟು ನಾಲ್ಕು ಪಾಯಿಂಟ್ಸ್‌ ಸಂಗ್ರಹಿಸಿದ್ದು, ಜಿಂಬಾಬ್ವೆ ಮತ್ತು ನೆದರ್ಲೆಂಡ್ಸ್ ವಿರುದ್ಧ ಪಂದ್ಯಗಳು ಬಾಕಿ ಇರುವ ಕಾರಣ ಆ ತಂಡಕ್ಕೆ ಅರ್ಹತೆಯ ಬಾಗಿಲು ಇನ್ನೂ ತೆರೆದಿದೆ. 1975 ಮತ್ತು 1979ರ ಮೊದಲ ಎರಡು ವಿಶ್ವಕಪ್‌ಗಳಲ್ಲಿ ಅಮೋಘ ರೀತಿಯಲ್ಲಿ ಗೆದ್ದ ವೆಸ್ಟ್ ಇಂಡೀಸ್‌, 1983ರಲ್ಲಿ ನಡೆದ ಮೂರನೇ ವಿಶ್ವಕಪ್‌ನ ಫೈನಲ್‌ನಲ್ಲಿ ಭಾರತಕ್ಕೆ ಸೋತಿತ್ತು. ತಂಡದ ಹೀನಾಯ ಸ್ಥಿತಿಗೆ ಕೋಚ್‌ ಡ್ಯಾರೆನ್‌ ಸಮಿ ಸ್ವತಃ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ನಾವು ಟೂರ್ನಿಯಲ್ಲೇ ಅತ್ಯಂತ ಕಳಪೆ ಫೀಲ್ಡಿಂಗ್ ತಂಡವಾಗಿದ್ದೆವು. ಶನಿವಾರದ ಪಂದ್ಯದಲ್ಲೂ ಅದು ಕಳಪೆಯಾಗೇ ಇತ್ತು’ ಎಂದಿದ್ದಾರೆ. ‘ನಾವು ಯಾವುದೇ ಪಂದ್ಯದಲ್ಲಿ ನೂರಕ್ಕೆ ನೂರರಷ್ಟು ಪ್ರಯತ್ನ ಹಾಕಲಿಲ್ಲ’ ಎಂದು ನಾಯಕ ಶಾಯಿ ಹೋಪ್‌ ಒಪ್ಪಿಕೊಂಡರು. ‌ತಂಡದ ಕೆಲವರು ಅಸ್ವಸ್ಥಗೊಂಡಿದ್ದು, ಗಾಯಾಳಾಗಿದ್ದು ವಿಂಡೀಸ್‌ನ ಈ ಪರಿಸ್ಥಿತಿಗೆ ಕೆಲಮಟ್ಟಿಗೆ ಕಾರಣವಾಗಿರಬಹುದು. ಆದರೆ ಅರ್ಹತಾ ಸುತ್ತಿನಲ್ಲಿ ತಂಡ ಗೆದ್ದಿದ್ದು ಎರಡೇ ಪಂದ್ಯಗಳನ್ನು. ಅದೂ ಇದ್ದುದರಲ್ಲಿ ದುರ್ಬಲ ಎನಿಸಿದ ನೇಪಾಳ ಮತ್ತು ಅಮೆರಿಕ ತಂಡಗಳ ವಿರುದ್ಧ ಎನ್ನುವುದು ಅದರ ದಯನೀಯ ಸ್ಥಿತಿಯನ್ನು ತೋರಿಸಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.