ದುಲೀಪ್ ಟ್ರೋಫಿ ಕ್ರಿಕೆಟ್| ಜಯಂತ್ ಯಾದವ್ ಮಿಂಚಿನ ಅರ್ಧಶತಕ: ಗೆಲುವಿನ ಸನಿಹ ಉತ್ತರ ವಲಯ ಬೆಂಗಳೂರು: ಜಯಂತ್ ಯಾದವ್ ನಾಯಕತ್ವದ ಉತ್ತರ ವಲಯ ತಂಡವು ಇಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್‌ಫೈನಲ್‌ನಲ್ಲಿ ಗೆಲುವಿನತ್ತ ದಾಪುಗಾಲಿಟ್ಟಿದೆ. ಉತ್ತರ ವಲಯವು ಈಶಾನ್ಯ ವಲಯಕ್ಕೆ 666 ರನ್‌ಗಳ ಬೃಹತ್ ಗೆಲುವಿನ ಗುರಿಯನ್ನು ನೀಡಿದೆ. ಶುಕ್ರವಾರ ದಿನದಾಟದ ಅಂತ್ಯಕ್ಕೆ ಈಶಾನ್ಯ ತಂಡವು 18 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 58 ರನ್‌ ಗಳಿಸಿದೆ. ಪಂದ್ಯದಲ್ಲಿ ಇನ್ನೂ ಎರಡು ದಿನಗಳ ಆಟ ಬಾಕಿ ಇದೆ. ಅನುಭವದ ಕೊರತೆ ಇರುವ ಈಶಾನ್ಯ ತಂಡವು ಅನುಭವಿಗಳ ದಂಡು ಉತ್ತರ ವಲಯದ ಮುಂದೆ ದೊಡ್ಡ ಇನಿಂಗ್ಸ್‌ ಆಡುವುದು ಕಷ್ಟವಾಗಲಿದೆ. ಮೊದಲ ಇನಿಂಗ್ಸ್‌ನಲ್ಲಿ ಉತ್ತರ ವಲಯವು ಗಳಿಸಿದ್ದ 540 ರನ್‌ಗಳಿಗೆ ಉತ್ತರವಾಗಿ ಈಶಾನ್ಯ ತಂಡವು 134 ರನ್‌ ಗಳಿಸಿ ಆಲೌಟ್ ಆಯಿತು. 406 ರನ್‌ಗಳ ದೊಡ್ಡ ಮೊತ್ತದ ಮುನ್ನಡೆ ಗಳಿಸಿದರೂ ಉತ್ತರ ವಲಯವು ಎದುರಾಳಿಯ ಮೇಲೆ ಫಾಲೋ ಆನ್ ಹೇರಲಿಲ್ಲ. ಬದಲಿಗೆ ಬ್ಯಾಟಿಂಗ್ ಮಾಡಿತು. ಪ್ರಭಸಿಮ್ರನ್ (59 ರನ್), ಅಂಕಿತ್ ಕುಮಾರ್ (70ರನ್) ಮತ್ತು ಜಯಂತ್ (ಅಜೇಯ 55) ಅರ್ಧಶತಕ ಬಾರಿಸಿದರು. ಚಹಾವಿರಾಮದ ಹೊತ್ತಿಗೆ 6 ವಿಕೆಟ್ ನಷ್ಟಕ್ಕೆ 259 ರನ್‌ ಗಳಿಸಿದ್ದ ತಂಡವು ಡಿಕ್ಲೇರ್ ಮಾಡಿಕೊಂಡಿತು. ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಉತ್ತರ ವಲಯ: 136 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 540. ಈಶಾನ್ಯ ವಲಯ: 39.2 ಓವರ್‌ಗಳಲ್ಲಿ 134. ಎರಡನೇ ಇನಿಂಗ್ಸ್: ಉತ್ತರ ವಲಯ: 55.1 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 259 (ಪ್ರಭಸಿಮ್ರನ್ ಸಿಂಗ್ 59, ಅಂಕಿತ್ ಕುಮಾರ್ 70, ಜಯಂತ್ ಯಾದವ್ ಔಟಾಗದೆ 55, ಕಿಶನ್ ಸಿಂಗಾ 46ಕ್ಕೆ2, ಇಮಿಲಿವತಿ ಲೆಮ್ತೂರ್ 61ಕ್ಕೆ2) ಈಶಾನ್ಯ ವಲಯ: 18 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 58 (ಕಿಶನ್ ಲಿಂಗ್ಡೊ 14, ಲ್ಯಾಂಗೊನಯಂಬಾ ಕೀಶಂಗಬಮ್ 13, ಪೈಜೋರ್ ತಮಾಂಗ್ ಬ್ಯಾಟಿಂಗ್ 13, ನಿಲೇಶ್ ಲಾಮಿಚಾನೆ ಬ್ಯಾಟಿಂಗ್ 5, ಬಲ್ತೇಜ್ ಸಿಂಗ್ 11ಕ್ಕೆ1, ಹರ್ಷಿತ್ ರಾಣಾ 19ಕ್ಕೆ1) ಆಲೂರು ಕ್ರೀಡಾಂಗಣ: ಮೊದಲ ಇನಿಂಗ್ಸ್: ಕೇಂದ್ರ ವಲಯ: 71.4 ಓವರ್‌ಗಳಲ್ಲಿ 182, ಪೂರ್ವ ವಲಯ: 42.2 ಓವರ್‌ಗಳಲ್ಲಿ 122. ಎರಡನೇ ಇನಿಂಗ್ಸ್:ಕೇಂದ್ರ ವಲಯ: 87.5 ಓವರ್‌ಗಳಲ್ಲಿ 239 (ಹಿಮಾಂಶು ಮಂತ್ರಿ 68, ವಿವೇಕ್ ಸಿಂಗ್ 56, ಸಾರಾಂಶ್ ಜೈನ್ ಔಟಾಗದೆ 32, ಆವೇಶ್ ಖಾನ್ 16, ಇಶಾನ್ ಪೊರೆಲ್ 15ಕ್ಕೆ3, ಶಾಬಾಜ್ ಅಹಮದ್ 66ಕ್ಕೆ3, ರಿಯಾನ್ ಪರಾಗ್ 51ಕ್ಕೆ2, ನದೀಂ 44ಕ್ಕೆ2) ಪೂರ್ವ ವಲಯ: 29 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 69 (ಶಂತನು ಮಿಶ್ರಾ 18, ಶಾಬಾಜ್ ಅಹಮದ್ 18, ಸೌರಭ್ ಕುಮಾರ್ 33ಕ್ಕೆ4) ಕೇಂದ್ರ ವಲಯಕ್ಕೆ ಗೆಲುವಿನ ಕನಸು ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇನ್ನೊಂದು ಕ್ವಾರ್ಟರ್‌ಫೈನಲ್‌ನಲ್ಲಿ ಕೇಂದ್ರ ವಲಯ ತಂಡವು ಪೂರ್ವ ವಲಯದ ವಿರುದ್ಧ ಜಯಗಳಿಸುವ ಕನಸು ಕಾಣುತ್ತಿದೆ. ಗೆಲುವಿಗಾಗಿ ಪೂರ್ವ ವಲಯವು 300 ರನ್‌ಗಳ ಗುರಿ ಬೆನ್ನಟ್ಟಿದ ಪೂರ್ವ ವಲಯವು ಕೇಂದ್ರ ವಲಯದ ಸೌರಭ್ ಕುಮಾರ್ (33ಕ್ಕೆ4) ದಾಳಿಗೆ ತತ್ತರಿಸಿತು. ದಿನದಾಟದ ಕೊನೆಗೆ 6 ವಿಕೆಟ್‌ಗಳಿಗೆ 69 ರನ್‌ ಗಳಿಸಿತು. ತಂಡದ ಜಯಕ್ಕೆ ಇನ್ನೂ 231 ರನ್‌ಗಳ ಅಗತ್ಯವಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.