ಆ್ಯಷಸ್‌ ಎರಡನೇ ಟೆಸ್ಟ್‌: ಹಿಡಿತ ಬಿಗಿಗೊಳಿಸಿದ ಆಸ್ಟ್ರೇಲಿಯಾ ಲಂಡನ್‌: ಮೊದಲ ಇನಿಂಗ್ಸ್‌ನಲ್ಲಿ ಪಡೆದ 91 ರನ್‌ಗಳ ಮುನ್ನಡೆಯನ್ನು ಲಾಭ ಪಡೆದ ಆಸ್ಟ್ರೇಲಿಯಾ ತಂಡ, ಆ್ಯಷಸ್ ಸರಣಿಯ ಎರಡನೇ ಟೆಸ್ಟ್‌ನಲ್ಲಿ ಹಿಡಿತವನ್ನು ಬಿಗಿಗೊಳಿಸುತ್ತಿದೆ. ಮೂರನೇ ದಿನವಾದ ಶುಕ್ರವಾರ ಪ್ರವಾಸಿಗರು ಎರಡನೇ ಇನಿಂಗ್ಸ್‌ನಲ್ಲಿ45 ಓವರುಗಳ ಆಟದ ನಂತರ 2 ವಿಕೆಟ್‌ಗೆ 130 ರನ್‌ ಗಳಿಸಿ ಉತ್ತಮ ಸ್ಥಿತಿಯಲ್ಲಿದೆ. ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾದ ಒಟ್ಟಾರೆ ಮುನ್ನಡೆ 219 ರನ್‌ಗಳಿಗೆ ಹಿಗ್ಗಿದೆ. ಉತ್ತಮ ಲಯದಲ್ಲಿರುವ ಆರಂಭ ಆಟಗಾರ ಉಸ್ಮಾನ್‌ ಖ್ವಾಜಾ ಔಟಾಗದೇ 58 ರನ್‌ ಗಳಿಸಿದ್ದಾರೆ. ಇಂಗ್ಲೆಂಡ್‌ ಆಟಗಾರರ ವೇಗದಾಟಕ್ಕೆ ಹೋಲಿಸಿದರೆ, ಆಸ್ಟ್ರೇಲಿಯಾದ ಆರಂಭ ಆಟಗಾರರು ಮಂದಗತಿಯಲ್ಲಿ ಆಡಿದರು. ವಾರ್ನರ್‌ (25) ಮತ್ತು ಉಸ್ಮಾನ್‌ ಖ್ವಾಜಾ ಮೊದಲ ವಿಕೆಟ್‌ಗೆ 63 ರನ್‌ ಸೇರಿಸಿದರು. ಚಹಾ ನಂತರ ಲಾಬುಷೇನ್‌ (30) ಆ್ಯಂಡರ್ಸನ್‌ ಬೌಲಿಂಗ್‌ನಲ್ಲಿ ಬ್ಯಾಕ್‌ವರ್ಡ್‌ ಪಾಯಿಂಟ್‌ನಲ್ಲಿ ಬ್ರೂಕ್‌ಗೆ ಕ್ಯಾಚಿತ್ತು ನಿರ್ಗಮಿಸಿದರು. ಇದಕ್ಕೆ ಮೊದಲು, ಗುರುವಾರದ ಕೊನೆಗೆ 4 ವಿಕೆಟ್‌ಗೆ 278 ರನ್‌ ಗಳಿಸಿದ ಇಂಗ್ಲೆಂಡ್‌ ಇಂದು ನಿರೀಕ್ಷೆಗಿಂತ ಬೇಗ ಕುಸಿಯಿತು. ಕೊನೆಯ ಆರು ವಿಕೆಟ್‌ಗಳಿಂದ 47 ರನ್‌ಗಳಷ್ಟೇ ಬಂದು ತಂಡ 325ಕ್ಕೆ ಆಲೌಟ್‌ ಆಯಿತು. ಆಸ್ಟ್ರೇಲಿಯಾ ತಂಡಕ್ಕೆ ಪುನರಾಗಮನ ಮಾಡಿದ ವೇಗದ ಬೌಲರ್‌ ಮಿಚೆಲ್‌ ಸ್ಟಾರ್ಕ್ 3 ವಿಕೆಟ್‌ಗಳನ್ನು ಪಡೆದು ಕುಸಿತಕ್ಕೆ ನಾಂದಿಹಾಡಿದರು. ಸ್ಕೋರುಗಳು: ಮೊದಲ ಇನಿಂಗ್ಸ್‌: ಆಸ್ಟ್ರೇಲಿಯಾ 416; ಇಂಗ್ಲೆಂಡ್‌ 76.2 ಓವರುಗಳಲ್ಲಿ 325 (ಹ್ಯಾರಿ ಬ್ರೂಕ್‌ 50; ಸ್ಟಾರ್ಕ್‌ 88ಕ್ಕೆ3, ಹ್ಯಾಜಲ್‌ವುಡ್‌ 71ಕ್ಕೆ2, ಹೆಡ್‌ 17ಕ್ಕೆ2); ಎರಡನೇ ಇನಿಂಗ್ಸ್‌: ಆಸ್ಟ್ರೇಲಿಯಾ: 45 ಓವರುಗಳಲ್ಲಿ 2 ವಿಕೆಟ್‌ಗೆ 130 (ಉಸ್ಮಾನ್‌ ಖ್ವಾಜಾ ಔಟಾಗದೇ 58, ವಾರ್ನರ್‌ 25, ಲಾಬುಷೇನ್‌ 30). ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.