ಕೆರಿಬಿಯನ್ ಮಹಿಳಾ ಪ್ರೀಮಿಯರ್ ಲೀಗ್‌ಗೆ ಕನ್ನಡತಿ ಶ್ರೇಯಾಂಕ ಜಾರ್ಜ್‌ಟೌನ್ (ಗಯಾನಾ) : ಭಾರತದ ಯುವ ಆಫ್ ಸ್ಪಿನ್ನರ್, ಕನ್ನಡತಿ ಶ್ರೇಯಾಂಕ ಪಾಟೀಲ ಅವರು ಆಗಸ್ಟ್ 31ರಿಂದ ಸೆಪ್ಟೆಂಬರ್‌ 10ವರೆಗೆ ನಡೆಯಲಿರುವ ಕೆರಿಬಿಯನ್ ಮಹಿಳಾ ಪ್ರೀಮಿಯರ್ ಲೀಗ್‌ಗಾಗಿ (ಡಬ್ಲ್ಯುಸಿಪಿಎಲ್) ಗಯಾನಾ ಅಮೆಜಾನ್ ವಾರಿಯರ್ಸ್‌ ತಂಡವನ್ನು ಸೇರಿಕೊಂಡಿದ್ದಾರೆ. ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಆರ್‌ಸಿಬಿ ತಂಡದಲ್ಲಿ ಗಮನ ಸೆಳೆದಿದ್ದ ಶ್ರೇಯಾಂಕ, ತನ್ನ ಸೀನಿಯರ್‌ ಅಂತರರಾಷ್ಟ್ರೀಯ ಚೊಚ್ಚಲ ಪಂದ್ಯಕ್ಕೂ ಮುನ್ನವೇ ವಿದೇಶಿ ಲೀಗ್‌ನಲ್ಲಿ ಗುತ್ತಿಗೆ ಪಡೆದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಈಚೆಗೆ ಹಾಂಗ್‌ಕಾಂಗ್‌ನಲ್ಲಿ ನಡೆದ ಮಹಿಳಾ ಎಮರ್ಜಿಂಗ್‌ ಏಷ್ಯಾ ಕಪ್‌ ಟೂರ್ನಿಯಲ್ಲೂ ಅವರು ಉತ್ತಮ ಪ್ರದರ್ಶನ ನೀಡಿದ್ದರು. ನಾಯಕಿ ಹರ್ಮನ್‌ಪ್ರೀತ್ ಕೌರ್, ಸ್ಮೃತಿ ಮಂಧಾನ, ಜೆಮಿಮಾ ರಾಡ್ರಿಗಸ್, ಶಫಾಲಿ ವರ್ಮಾ, ದೀಪ್ತಿ ಶರ್ಮಾ ಮತ್ತು ರಿಚಾ ಘೋಷ್ ಮುಂತಾದ ಅಗ್ರ ಆಟಗಾರ್ತಿಯರಿಗೆ ವಿದೇಶಿ ಲೀಗ್‌ಗಳಲ್ಲಿ ಆಡಲು ಬಿಸಿಸಿಐ ಅನುಮತಿ ನೀಡಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.