ದಿಗ್ಗಜ ಆಲ್‌ರೌಂಡರ್‌ ಗ್ಯಾರ್ಫೀಲ್ಡ್‌ ಸೋಬರ್ಸ್‌ರನ್ನು ಭೇಟಿಯಾದ ಟೀಮ್‌ ಇಂಡಿಯಾ ಆಟಗಾರರು ಬಾರ್ಬಾಡೋಸ್‌: ವೆಸ್ಟ್‌ ಇಂಡೀಸ್‌ ಪ್ರವಾಸದಲ್ಲಿರುವ ಭಾರತ ಕ್ರಿಕೆಟ್‌ ತಂಡದ ಆಟಗಾರರು ಬುಧವಾರ ದಿಗ್ಗಜ ಆಲ್‌ರೌಂಡರ್‌ ಸರ್‌ ಗ್ಯಾರ್ಫೀಲ್ಡ್‌ ಸೋಬರ್ಸ್‌ ಅವರನ್ನು ಭೇಟಿಯಾಗಿ ಅನೌಪಚಾರಿಕ ಮಾತುಕತೆ ನಡೆಸಿದರು. ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯು ಈ ಸಂಬಂಧ ವಿಡಿಯೊವೊಂದನ್ನು ಹಂಚಿಕೊಂಡಿದ್ದು, ‘ಇನ್‌ ಬಾರ್ಬಾಡೊಸ್‌ ಆ್ಯಂಡ್ ಇನ್‌ ದ ಕಂಪನಿ ಆಫ್‌ ಗ್ರೇಟ್‌ನೆಸ್‌’ ಎಂಬ ಶೀರ್ಷಿಕೆ ನೀಡಿದೆ. ಟೀಮ್‌ ಇಂಡಿಯಾ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾದ ಸರ್‌ ಗ್ಯಾರ್ಫೀಲ್ಡ್‌ ಸೋಬರ್ಸ್‌ ಅವರನ್ನು ಭೇಟಿ ಮಾಡಿದೆ ಎಂದೂ ಉಲ್ಲೇಖವಿದೆ. 86 ವರ್ಷದ ಸೋಬರ್ಸ್‌ 93 ಟೆಸ್ಟ್‌ಗಳಿಂದ 8,032 ರನ್‌ ಗಳಿಸಿದ್ದಾರೆ. ಅಲ್ಲದೇ ಎಡಗೈ ಬೌಲರ್‌ ಆಗಿ 235 ವಿಕೆಟ್‌ಗಳನ್ನೂ ಪಡೆದಿದ್ದಾರೆ. ಸೋಬರ್ಸ್ ದಂಪತಿಯನ್ನು ರೋಹಿತ್‌, ವಿರಾಟ್‌ ಕೊಹ್ಲಿ, ಶುಭಮನ್ ಗಿಲ್‌, ರವಿಚಂದ್ರನ್ ಅಶ್ವಿನ್‌ ಮತ್ತು ತಂಡದ ಕೋಚ್‌ ರಾಹುಲ್ ದ್ರಾವಿಡ್‌ ಭೇಟಿಯಾದರು. ಗಿಲ್‌ ಅವರನ್ನು ಸೋಬರ್ಸ್ ಅವರಿಗೆ ಪರಿಚಯಿಸಿದ ದ್ರಾವಿಡ್‌ ‘ನಮ್ಮ ಕಿರಿಯ ಆಕರ್ಷಕ ಆಟಗಾರ’ ಎಂದು ಹೇಳಿದರು. ರೋಹಿತ್‌ ಶರ್ಮಾ ನಾಯಕತ್ವದ ಭಾರತ ತಂಡ ಎರಡು ಪಂದ್ಯಗಳ ಟೆಸ್ಟ್‌ ಸರಣಿಯನ್ನು ಆಡಲಿದ್ದು, ಮೊದಲನೆಯದು ಜುಲೈ 12ರಂದು ಡೊಮಿನಿಕಾದಲ್ಲಿ ಆರಂಭವಾಗಲಿದೆ. ನಂತರ ಮೂರು ಏಕದಿನ ಹಾಗೂ ಐದು ಟಿ–20 ಪಂದ್ಯಗಳಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.