ದುಲೀಪ್ ಟ್ರೋಫಿ: ಕನ್ನಡಿಗ ವಿದ್ವತ್‌ ಕಾವೇರಪ್ಪಗೆ ಐದು ವಿಕೆಟ್ ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ಆರಂಭವಾದ ದುಲೀಪ್ ಟ್ರೋಫಿ ಸೆಮಿಫೈನಲ್ ಪಂದ್ಯದ ಮೊದಲ ದಿನವೇ 14 ವಿಕೆಟ್‌ಗಳು ಪತನವಾದವು. ಅದರಲ್ಲಿ ಎರಡು ವಿಕೆಟ್‌ಗಳು ಮಾತ್ರ ಸ್ಪಿನ್ನರ್‌ಗಳಿಗೆ ಒಲಿದವು! ದಕ್ಷಿಣ ವಲಯ ತಂಡದಲ್ಲಿ ಆಡುತ್ತಿರುವ ಕನ್ನಡಿಗ ವಿದ್ವತ್ ಕಾವೇರಪ್ಪ ಐದು ವಿಕೆಟ್ ಗೊಂಚಲು ಗಳಿಸುವುದರೊಂದಿಗೆ ಉತ್ತರ ವಲಯವನ್ನು 198 ರನ್‌ಗಳಿಗೆ ಕಟ್ಟಿಹಾಕಿದರು. ಆದರೆ, ಅದಕ್ಕುತ್ತರವಾಗಿ ಇನಿಂಗ್ಸ್ ಆರಂಭಿಸಿದ ದಕ್ಷಿಣ ವಲಯ ತಂಡ ಆಘಾತ ಅನುಭವಿಸಿತು. ಉತ್ತರ ವಲಯದ ಮಧ್ಯಮವೇಗಿಗಳಾದ ಬಲ್ತೇಜ್ ಸಿಂಗ್ ಮತ್ತು ಹರ್ಷಿತ್ ರಾಣಾ ತಲಾ ಎರಡು ವಿಕೆಟ್ ಗಳಿಸಿದರು. ಇದರಿಂದಾಗಿ ತಂಡದ ಆತ್ಮವಿಶ್ವಾಸವು ಇಮ್ಮಡಿಸಿತು. ಮಂದಬೆಳಕಿನ ಕಾರಣ ದಿನದಾಟ ಮುಕ್ತಾಯವಾದಾಗ ದಕ್ಷಿಣ ವಲಯವು 17 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 63 ರನ್‌ ಗಳಿಸಿತು. ಮಯಂಕ್ ಅಗರವಾಲ್ (37; 61ಎ, 4X4) ಮತ್ತು ತಿಲಕ್ ವರ್ಮಾ (ಬ್ಯಾಟಿಂಗ್ 12) ಕ್ರೀಸ್‌ನಲ್ಲಿದ್ದಾರೆ. ಮುನ್ನಡೆ ಪಡೆಯಲು ಇನ್ನೂ 136 ರನ್‌ ಗಳಿಸಬೇಕಿದೆ. ವಿದ್ವತ್‌ ವೇಗ: ಟಾಸ್ ಗೆದ್ದ ದಕ್ಷಿಣ ವಲಯ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಹೋದ ರಣಜಿ ಕ್ರಿಕೆಟ್‌ನಲ್ಲಿ ಗಮನ ಸೆಳೆಯುವಂತೆ ಬೌಲಿಂಗ್ ಮಾಡಿದ್ದ ಕನ್ನಡಿಗ ವಿದ್ವತ್ ಇಲ್ಲಿಯೂ ತಮ್ಮ ಸ್ವಿಂಗ್ ಕೌಶಲ ಮೆರೆದರು. ಮಳೆಗಾಲದ ಸುಳಿಗಾಳಿ ಮತ್ತು ಪಿಚ್‌ನಲ್ಲಿದ್ದ ಸತ್ವವನ್ನು ಹದವಾಗಿ ಬಳಸಿಕೊಂಡ ವಿದ್ವತ್ ಎದುರಾಳಿ ತಂಡಕ್ಕೆ ಪೆಟ್ಟುಕೊಟ್ಟರು. ಕ್ವಾರ್ಟರ್‌ಫೈನಲ್‌ನಲ್ಲಿ ಶತಕ ಬಾರಿಸಿದ್ದ ಧ್ರುವ ಶೋರೆ, ಅಂಕಿತ್ ಖಲ್ಸಿ, ನಾಯಕ ಜಯಂತ್ ಯಾದವ್, ಪುಳ್ಕಿತ್ ನಾರಂಗ್ ಹಾಗೂ ಬಲ್ತೇಜ್ ಸಿಂಗ್ ವಿಕೆಟ್‌ಗಳನ್ನು ಕಬಳಿಸಿದರು. ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಾದ ಪ್ರಭಸಿಮ್ರನ್ ಸಿಂಗ್ (49; 52ಎ) ಮತ್ತು ಅಂಕಿತ್ ಕುಮಾರ್ (33; 70ಎ) ಸ್ವಲ್ಪ ಹೋರಾಟ ನಡೆಸಿದರು. ಕೊನೆಯಲ್ಲಿ ಹರ್ಷಿತ್ (31; 22ಎ) ಮತ್ತು ವೈಭವ್ ಅರೋರಾ (ಔಟಾಗದೆ 23; 50ಎ) ಕಾಣಿಕೆ ನೀಡಿದರು. ಆದರೂ ತಂಡವು 200 ರನ್‌ಗಳ ಗಡಿ ದಾಟಲಿಲ್ಲ. ಮಯಂಕ್ ಆಸರೆ: ಮೊದಲ ಇನಿಂಗ್ಸ್ ಆರಂಭಿಸಿದ ದಕ್ಷಿಣ ವಲಯ ತಂಡಕ್ಕೆ ಕರ್ನಾಟಕದ ಮಯಂಕ್ ಅಗರವಾಲ್ ಆಸರೆಯಾದರು. ಆದರೆ, ಐಪಿಎಲ್‌ನಲ್ಲಿ ಮಿಂಚಿದ್ದ ಸಾಯಿ ಸುದರ್ಶನ್ (9 ರನ್) ಮತ್ತು ಕರ್ನಾಟಕದ ಬ್ಯಾಟರ್ ಆರ್.ಸಮರ್ಥ್ (1 ರನ್) ಒಂಬತ್ತು ಓವರ್‌ಗಳು ಮುಗಿಯುವ ಮುನ್ನವೇ ಔಟಾದರು. ನಾಯಕ ಹನುಮವಿಹಾರಿ ಮತ್ತು ರಿಕಿ ಭುಯ್ ಖಾತೆ ತೆರೆಯದೇ ನಿರ್ಗಮಿಸಿದರು. ಹರ್ಷಿತ್ ರಾಣಾ, ಹತ್ತನೇ ಓವರ್‌ನಲ್ಲಿ ಇವರಿಬ್ಬರನ್ನೂ ಸತತ ಎರಡು ಎಸೆತಗಳಲ್ಲಿ ಔಟ್ ಮಾಡಿದರು. ಮಳೆಯಿಂದ ಆಟ ಸ್ಥಗಿತ: ಮಧ್ಯಾಹ್ನ ಮೂರು ಗಂಟೆಯ ಸುಮಾರಿಗೆ ಮಳೆ ಆರಂಭವಾಗಿದ್ದರಿಂದ ಸುಮಾರು 25 ನಿಮಿಷ ಆಟ ಸ್ಥಗಿತವಾಗಿತ್ತು. ಆಗ ಉತ್ತರ ವಲಯವು 9 ವಿಕೆಟ್ ಕಳೆದುಕೊಂಡಿತ್ತು. ನಂತರ ಮತ್ತೆ ಆರಂಭವಾಯಿತು. ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ದಕ್ಷಿಣ ವಲಯ: 58.3 ಓವರ್‌ಗಳಲ್ಲಿ 198 (ಪ್ರಭಸಿಮ್ರನ್ ಸಿಂಗ್ 49, ಅಂಕಿತ್ ಕುಮಾರ್ 33, ನಿಶಾಂತ್ ಸಿಂಧು 27, ಹರ್ಷಿತ್ ರಾಣಾ 31, ವೈಭವ್ ಅರೋರಾ ಔಟಾಗದೆ 33, ವಿದ್ವತ್ ಕಾವೇರಪ್ಪ 28ಕ್ಕೆ5, ವೈಶಾಖ ವಿಜಯಕುಮಾರ್ 26ಕ್ಕೆ1, ಸಾಯಿ ಕಿಶೋರ್ 36ಕ್ಕೆ1, ಕೆ.ವಿ. ಶಶಿಕಾಂತ್ 52ಕ್ಕೆ2, ವಾಷಿಂಗ್ಟನ್ ಸುಂದರ್ 44ಕ್ಕೆ1) ಮಾವಿಗೆ ನಾಲ್ಕು ವಿಕೆಟ್: ಖ್ಯಾತನಾಮರ ವೈಫಲ್ಯ ಭಾರತ ತಂಡದ ಆಟಗಾರರಾದ ಪೃಥ್ವಿ ಶಾ, ಚೇತೇಶ್ವರ್ ಪೂಜಾರ ಮತ್ತು ಸೂರ್ಯಕುಮಾರ್ ಯಾದವ್ ನಿರಾಶೆ ಮೂಡಿಸಿದರು. ರಾಷ್ಟ್ರೀಯ ತಂಡಕ್ಕೆ ಸೇರುವ ಆಕಾಂಕ್ಷಿಯಾಗಿರುವ ಸರ್ಫರಾಜ್ ಖಾನ್ ಸೊನ್ನೆ ಸುತ್ತಿದರು. ಆದರೆ, ಬೌಲಿಂಗ್ ಆಲ್‌ರೌಂಡರ್ ಅತಿಥ್ ಶೇಟ್ ಪೂರ್ವ ವಲಯಕ್ಕೆ ಆಸರೆಯಾದರು. ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಆರಂಭವಾದ ಇನ್ನೊಂದು ಸೆಮಿಫೈನಲ್‌ನಲ್ಲಿ ಅತಿಥ್ (74; 129ಎ, 4X9) ಗಳಿಸಿದ ಅರ್ಧಶತಕದ ಬಲದಿಂದ ಪಶ್ಚಿಮ ವಲಯವು ದಿನದಾಟದ ಕೊನೆಗೆ 90 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 216 ರನ್ ಗಳಿಸಿತು. ಚಿಂತನ್ ಗಜ (ಬ್ಯಾಟಿಂಗ್ 13) ಮತ್ತು ಅರ್ಜನ್ ನಾಗಸ್ವಲ್ಲಾ (ಬ್ಯಾಟಿಂಗ್ 5) ಕ್ರೀಸ್‌ನಲ್ಲಿದ್ದಾರೆ. ಟಾಸ್ ಗೆದ್ದ ಪೂರ್ವ ವಲಯ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕ ಜೋಡಿ ಪೃಥ್ವಿ (26; 54ಎ) ಮತ್ತು ಪ್ರಿಯಾಂಕ್ ಪಾಂಚಾಲ್ (13; 44ಎ) ತಾಳ್ಮೆಯಿಂದ ಬ್ಯಾಟಿಂಗ್ ಮಾಡಿದರು. ಆದರೆ 16ನೇ ಓವರ್‌ನಲ್ಲಿ ಪೃಥ್ವಿ ವಿಕೆಟ್ ಗಳಿಸಿದ ಸೌರಭ್ ಕುಮಾರ್ ಜೊತೆಯಾಟವನ್ನು ಮುರಿದರು. ನಂತರದಲ್ಲಿ ಕೇಂದ್ರ ವಲಯದ ನಾಯಕ ಶಿವಂ ಮಾವಿ (43ಕ್ಕೆ4) ಮಿಂಚಿದರು. ಟೆಸ್‌ ಪರಿಣತ ಪೂಜಾರ, ಸೂರ್ಯಕುಮಾರ್, ಸರ್ಫರಾಜ್ ಮತ್ತು ಅತಿಥ್ ವಿಕೆಟ್‌ಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡರು. ಉಳಿದ ಬೌಲರ್‌ಗಳೂ ಅವರಿಗೆ ಉತ್ತಮ ಜೊತೆ ನೀಡಿದರು. ಇದರಿಂದಾಗಿ ತಂಡದ ರನ್‌ ಗಳಿಕೆಯ ವೇಗ ಕುಂಠಿತವಾಯಿತು. ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಪಶ್ಚಿಮ ವಲಯ: 90 ಓವರ್‌ಗಳಲ್ಲಿ 8ಕ್ಕೆ 216 (ಪೃಥ್ವಿ ಶಾ 26, ಪ್ರಿಯಾಂಕ್ ಪಾಂಚಾಲ್ 13, ಚೇತೇಶ್ವರ್ ಪೂಜಾರ 28, ಅತಿಥ್ ಶೇಟ್ 74, ಧರ್ಮೇಂದ್ರಸಿಂಹ ಜಡೇಜ 39, ಚಿಂತನ್ ಗಜ ಬ್ಯಾಟಿಂಗ್ 13, ಶಿವಂ ಮಾವಿ 43ಕ್ಕೆ4) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.