ಎಮರ್ಜಿಂಗ್ ಏಷ್ಯಾ ಕಪ್‌: ಭಾರತ ‘ಎ’ ತಂಡಕ್ಕೆ ನಿಕಿನ್‌ ಜೋಸ್ ನವದೆಹಲಿ: ಕರ್ನಾಟಕ ರಣಜಿ ತಂಡದ ಬ್ಯಾಟರ್‌ ನಿಕಿನ್‌ ಜೋಸ್‌ ಅವರು ಶ್ರೀಲಂಕಾದಲ್ಲಿ ಇದೇ 13 ರಿಂದ 23ರ ವರೆಗೆ ನಡೆಯಲಿರುವ ಎಮರ್ಜಿಂಗ್‌ ಏಷ್ಯಾ ಕಪ್‌ ಕ್ರಿಕೆಟ್‌ ಟೂರ್ನಿಗೆ ಭಾರತ ‘ಎ’ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. 23 ವರ್ಷದೊಳಗಿನ ಆಟಗಾರರನ್ನು ಒಳಗೊಂಡ ಭಾರತ ತಂಡವನ್ನು ಮಂಗಳವಾರ ಪ್ರಕಟಿಸಲಾಗಿದ್ದು. ದೆಹಲಿಯ ಯಶ್‌ ಧುಲ್‌ ಅವರು ನಾಯಕತ್ವದ ಹೊಣೆ ನಿಭಾಯಿಸಲಿದ್ದಾರೆ. ಪಂಜಾಬ್‌ ರಣಜಿ ತಂಡದ ನಾಯಕ ಅಭಿಷೇಕ್‌ ಶರ್ಮಾ ಅವರು ಉಪನಾಯಕ ಆಗಿರುವರು. ಭಾರತ ತಂಡವು ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದಿದೆ. ನೇಪಾಳ, ಯುಎಇ ‘ಎ’ ಮತ್ತು ಪಾಕಿಸ್ತಾನ ‘ಎ’ ತಂಡಗಳು ಇದೇ ಗುಂಪಿನಲ್ಲಿವೆ. ಆತಿಥೇಯ ಶ್ರೀಲಂಕಾ ‘ಎ’, ಬಾಂಗ್ಲಾದೇಶ ‘ಎ’, ಅಫ್ಗಾನಿಸ್ತಾನ ‘ಎ’ ಮತ್ತು ಒಮಾನ್‌ ‘ಎ’ ತಂಡಗಳು ‘ಎ’ ಗುಂಪಿನಲ್ಲಿವೆ. ನೇಪಾಳವು ತನ್ನ ಸೀನಿಯರ್‌ ತಂಡವನ್ನೇ ಕಣಕ್ಕಿಳಿಸಲಿದೆ. ಪ್ರತಿ ಗುಂಪಿನಲ್ಲಿ ಮೊದಲ ಎರಡು ಸ್ಥಾನಗಳನ್ನು ಪಡೆಯುವ ತಂಡಗಳು ಸೆಮಿಫೈನಲ್‌ ಪ್ರವೇಶಿಸಲಿವೆ. ಫೈನಲ್ ಪಂದ್ಯ ಜುಲೈ 23 ರಂದು ನಡೆಯಲಿದೆ. ಭಾರತ ತಂಡವು ಮೊದಲ ಪಂದ್ಯದಲ್ಲಿ ಜುಲೈ 13 ರಂದು ಯುಎಇ ‘ಎ’ ವಿರುದ್ದ ಆಡಲಿದೆ. ಜುಲೈ 15 ರಂದು ಪಾಕಿಸ್ತಾನ ‘ಎ’ ಹಾಗೂ ಜುಲೈ 18 ರಂದು ನೇಪಾಳ ತಂಡವನ್ನು ಎದುರಿಸಲಿದೆ. ಭಾರತ ‘ಎ’ ತಂಡ: ಯಶ್‌ ಧುಲ್ (ನಾಯಕ), ಅಭಿಷೇಕ್‌ ಶರ್ಮಾ (ಉಪನಾಯಕ), ಸಾಯಿ ಸುದರ್ಶನ್, ನಿಕಿನ್‌ ಜೋಸ್, ಪ್ರದೋಶ್‌ ರಂಜನ್‌ ಪಾಲ್, ರಿಯಾನ್‌ ಪರಾಗ್, ನಿಶಾಂತ್‌ ಸಿಂಧು, ಪ್ರಭಸಿಮ್ರನ್‌ ಸಿಂಗ್‌, ಧ್ರುವ್‌ ಜುರೆಲ್, ಮಾನವ್ ಸುಥಾರ್, ಯುಜರಾಜ್‌ಸಿಂಹ ಡೋಡಿಯಾ, ಹರ್ಷಿತ್‌ ರಾಣಾ, ಆಕಾಶ್‌ ಸಿಂಗ್, ನಿತೀಶ್‌ ಕುಮಾರ್‌ ರೆಡ್ಡಿ, ರಾಜವರ್ಧನ್‌ ಹಂಗರ್‌ಗೇಕರ್. ಹೆಚ್ಚುವರಿ ಆಟಗಾರರು: ಹರ್ಷ್ ದುಬೆ, ನೇಹಲ್‌ ವಧೇರಾ, ಸ್ನೆಲ್‌ ಪಟೇಲ್, ಮೋಹಿತ್‌ ರೆಡಕರ್ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.