ದುಲೀಪ್ ಟ್ರೋಫಿ ಕ್ರಿಕೆಟ್: ಮಯಂಕ್‌, ವಾಷಿಂಗ್ಟನ್‌ಗೆ ಮರಳಿ ಅರಳುವ ಸವಾಲು ಬೆಂಗಳೂರು: ಭಾರತ ಕ್ರಿಕೆಟ್ ತಂಡದಲ್ಲಿ ಅವಕಾಶ ಗಿಟ್ಟಿಸುವ ತವಕದಲ್ಲಿರುವ ಅನುಭವಿ ಮತ್ತು ಯುವ ಆಟಗಾರರು ಉದ್ಯಾನನಗರಿಯಲ್ಲಿ ಬುಧವಾರದಿಂದ ಆರಂಭವಾಗಲಿರುವ ದುಲೀಪ್ ಟ್ರೋಫಿ ನಾಲ್ಕರ ಘಟ್ಟದಲ್ಲಿ ತಮ್ಮ ಸಾಮರ್ಥ್ಯವನ್ನು ಪಣಕ್ಕೊಡ್ಡಲು ಸನ್ನದ್ಧರಾಗಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹನುಮವಿಹಾರಿ ನಾಯಕತ್ವದ ದಕ್ಷಿಣ ವಲಯ ಮತ್ತು ಜಯಂತ್ ಯಾದವ್ ಮುಂದಾಳತ್ವದ ಉತ್ತರ ವಲಯ ತಂಡಗಳು ಮುಖಾಮುಖಿಯಾಗಲಿವೆ. ದಕ್ಷಿಣ ವಲಯ ತಂಡದಲ್ಲಿ ಕರ್ನಾಟಕದ ಮಯಂಕ್ ಅಗರವಾಲ್, ಆರ್. ಸಮರ್ಥ್, ವೇಗಿಗಳಾದ ವಿದ್ವತ್ ಕಾವೇರಪ್ಪ, ವೈಶಾಖ ವಿಜಯಕುಮಾರ್ ಕಣಕ್ಕಿಳಿಯಲಿದ್ದಾರೆ. ಹನುಮ ಮತ್ತು ಮಯಂಕ್ ರಾಷ್ಟ್ರೀಯ ತಂಡಕ್ಕೆ ಮರಳುವ ಗುರಿಯಿಟ್ಟುಕೊಂಡಿದ್ದಾರೆ. ಕಳೆದ ರಣಜಿ ಋತುವಿನಲ್ಲಿ ಮಿಂಚಿದ್ದ ವಿದ್ವತ್ ಮತ್ತು ವೈಶಾಖ ಕೂಡ ಆಯ್ಕೆಗಾರರ ಗಮನ ಸೆಳೆಯುವ ಛಲದಲ್ಲಿದ್ದಾರೆ. ಇತ್ತೀಚೆಗೆ ಇಂಡಿಯನ್ ಪ್ರೀಮಿಯರ್ ಲೀಗ್‌ ಟೂರ್ನಿಯಲ್ಲಿ ಮಿಂಚಿದ್ದ ಬ್ಯಾಟರ್‌ಗಳಾದ ತಿಲಕ್ ವರ್ಮಾ ಮತ್ತು ಸಾಯಿಸುದರ್ಶನ್ ಕೂಡ ಕೆಂಪು ಚೆಂಡಿನ ಕ್ರಿಕೆಟ್‌ನಲ್ಲಿ ತಮ್ಮ ತೋಳ್ಬಲ ಮೆರೆಯಲು ಸಿದ್ಧವಾಗಿದ್ದಾರೆ. ತಂಡದಲ್ಲಿರುವ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಅವರಿಗೆ ಈ ಪಂದ್ಯವು ’ಫಿಟ್‌ನೆಸ್ ಪರೀಕ್ಷೆ‘ಯ ವೇದಿಕೆಯೂ ಆಗಲಿದೆ. ಕಳೆದ ಐಪಿಎಲ್‌ ಟೂರ್ನಿಯ ಆರಂಭಿಕ ಹಂತದಲ್ಲಿಯೇ ಸ್ನಾಯುಸೆಳೆತದ ಗಾಯ ಅನುಭವಿಸಿದ್ದ ಅವರು ದೀರ್ಘಕಾಲದಿಂದ ಕ್ರಿಕೆಟ್‌ನಿಂದ ಹೊರಗಿದ್ದರು. ಚೇತರಿಸಿಕೊಂಡ ನಂತರ ಅವರು ಈಚೆಗೆ ತಮಿಳುನಾಡು ಪ್ರೀಮಿಯರ್ ಲೀಗ್‌ನಲ್ಲಿ ಆಡಿದ್ದಾರೆ. ಪ್ರಸ್ತುತ ದೀರ್ಘ ಮಾದರಿಯ ಆಟಕ್ಕೆ ದುಲೀಪ್ ಟ್ರೋಫಿ ಟೂರ್ನಿ ಮೂಲಕ ಮರಳಲಿದ್ದಾರೆ. ಮುಂಬರುವ ಏಷ್ಯಾಕಪ್ ಮತ್ತು ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಡುವ ಭಾರತ ತಂಡದಲ್ಲಿ ಸ್ಥಾನ ಗಳಿಸಲು ವಾಷಿಂಗ್ಟನ್‌ಗೆ ಇದು ಸೂಕ್ತ ಸಮಯ. 23 ವರ್ಷದ ಆಲ್‌ರೌಂಡರ್ ವಾಷಿಂಗ್ಟನ್ ನಾಲ್ಕು ಟೆಸ್ಟ್, 16 ಏಕದಿನ ಮತ್ತು 35 ಟಿ20 ಪಂದ್ಯಗಳನ್ನು ಆಡಿರುವ ಅನುಭವಿ. ಹೋದ ಸಲ ಫೈನಲ್‌ ಪ್ರವೇಶಿಸಿದ್ದ ದಕ್ಷಿಣ ವಲಯ ತಂಡವು ಈ ಬಾರಿ ನಾಲ್ಕರ ಘಟ್ಟಕ್ಕೆ ನೇರ ಪ್ರವೇಶ ಪಡೆದಿದೆ. ಉತ್ತರ ವಲಯ ತಂಡವು ಹೋದ ವಾರ ಇದೇ ಕ್ರೀಡಾಂಗಣದಲ್ಲಿ ನಡೆದಿದ್ದ ಎಂಟರ ಘಟ್ಟದ ಪಂದ್ಯದಲ್ಲಿ ಈಶಾನ್ಯ ವಲಯದ ಎದುರು 511 ರನ್‌ಗಳ ಬೃಹತ್ ಗೆಲುವು ಸಾಧಿಸಿತ್ತು. ಧ್ರುವ್ ಶೋರೆ, ಹರ್ಷಿತ್ ರಾಣಾ ಮತ್ತು ನಿಶಾಂತ್ ಸಿಂಧು ಅವರು ಈಶಾನ್ಯ ತಂಡದ ಎದುರು ಶತಕ ಗಳಿಸಿದ್ದರು. ಅವರ ಬ್ಯಾಟಿಂಗ್ ಸಾಮರ್ಥ್ಯಕ್ಕೆ ಇಲ್ಲಿ ದಕ್ಷಿಣ ವಲಯದ ಬೌಲರ್‌ಗಳು ಸವಾಲೊಡ್ಡುವುದು ಖಚಿತ. ತಂಡಗಳು ದಕ್ಷಿಣ ವಲಯ: ಹನುಮವಿಹಾರಿ (ನಾಯಕ), ಮಯಂಕ್ ಅಗರವಾಲ್, ಆರ್. ಸಮರ್ಥ್, ವಿದ್ವತ್ ಕಾವೇರಪ್ಪ, ವೈಶಾಖ ವಿಜಯಕುಮಾರ್, ರಿಕಿ ಭುಯ್, ರವಿಶ್ರೀನಿವಾಸನ್ ಸಾಯಿಕಿಶೋರ್, ಸಚಿನ್ ಬೇಬಿ, ಎನ್. ಜಗದೀಶನ್ (ವಿಕೆಟ್‌ಕೀಪರ್), ದರ್ಶನ್ ಮಿಸಾಲ್, ಸಾಯಿ ಸುದರ್ಶನ್, ಕೆ.ವಿ. ಶಶಿಕಾಂತ್, ತಿಲಕ್ ವರ್ಮಾ, ಪ್ರದೋಷ್ ಪಾಲ್, ವಾಷಿಂಗ್ಟನ್ ಸುಂದರ್. ಉತ್ತರ ವಲಯ: ಜಯಂತ್ ಯಾದವ್ (ನಾಯಕ), ಧ್ರುವ ಶೋರೆ, ಪ್ರಶಾಂತ್ ಚೋಪ್ರಾ, ಅಂಕಿತ್ ಕಲ್ಸಿ, ಪ್ರಭಸಿಮ್ರನ್ ಸಿಂಗ್ (ವಿಕೆಟ್‌ಕೀಪರ್), ಅಂಕಿತ್ ಕುಮಾರ್, ನಿಶಾಂತ್ ಸಿಂಧು, ಪುಳ್ಕಿತ್ ನಾರಂಗ್, ಹರ್ಷಿತ್ ರಾಣಾ, ಸಿದ್ಧಾರ್ಥ್ ಕೌಲ್, ಬಲ್ತೇಜ್ ಸಿಂಗ್, ಮನದೀಪ್ ಸಿಂಗ್, ಮನನ್ ವೊಹ್ರಾ, ಅಬಿದ್ ಮುಷ್ತಾಕ್, ವೈಭವ್ ಅರೋರಾ, ಹಿಮಾಂಶು ರಾಣಾ. ಪಂದ್ಯ ಆರಂಭ: ಬೆಳಿಗ್ಗೆ 9.30ರಿಂದ ಪೂಜಾರ ಆಕರ್ಷಣೆ ವೆಸ್ಟ್ ಇಂಡೀಸ್ ಟೆಸ್ಟ್ ಸರಣಿಗೆ ತೆರಳೂತ್ತಿರುವ ಭಾರತ ತಂಡದಲ್ಲಿ ಸ್ಥಾನ ಪಡೆಯದ ಕಾರಣಕ್ಕೆ ಚರ್ಚೆಗೆ ಗ್ರಾಸವಾಗಿರುವ ಚೇತೇಶ್ವರ್ ಪೂಜಾರ್ ಮತ್ತು ಸರ್ಫರಾಜ್ ಖಾನ್ ದುಲೀಪ್ ಟ್ರೋಫಿಯಲ್ಲಿ ತಮ್ಮ ಸಾಮರ್ಥ್ಯ ಮೆರೆಯುವ ಛಲದಲ್ಲಿದ್ದಾರೆ. ನಗರ ಹೊರವಲಯದಲ್ಲಿರುವ ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯಲಿರುವ ಟೂರ್ನಿಯ ಮೊದಲ ಸೆಮಿಫೈನಲ್‌ನಲ್ಲಿ ಕೇಂದ್ರ ವಲಯ ಹಾಗೂ ಪಶ್ವಿಮ ವಲಯ ತಂಡಗಳು ಮುಖಾಮುಖಿಯಾಗಲಿವೆ. ಸೌರಾಷ್ಟ್ರದ ಪೂಜಾರ, ಮುಂಬೈ ತಂಡದ ಸರ್ಫರಾಜ್, ಪೃಥ್ವಿ ಶಾ ಮತ್ತು ಸೂರ್ಯಕುಮಾರ್ ಯಾದವ್ ಪಶ್ಚಿಮ ವಲಯ ತಂಡದಲ್ಲಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.