ಐಸಿಸಿ ರ‍್ಯಾಂಕಿಂಗ್: ಹರ್ಮನ್‌ಪ್ರೀತ್, ಸ್ಮೃತಿಗೆ ಹಿನ್ನಡೆ, ಚಾಮರಿಗೆ ಅಗ್ರಸ್ಥಾನ ದುಬೈ (ಪಿಟಿಐ): ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಮತ್ತು ಉಪನಾಯಕಿ ಸ್ಮೃತಿ ಮಂದಾನ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಮಂಗಳವಾರ ಪ್ರಕಟಿಸಿರುವ ಏಕದಿನ ಕ್ರಿಕೆಟ್ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಸ್ಥಾನ ಕುಸಿತ ಕಂಡಿದ್ದಾರೆ. 716 ರೇಟಿಂಗ್ ಪಾಯಿಂಟ್ಸ್ ಹೊಂದಿರುವ ಹರ್ಮನ್‌ಪ್ರೀತ್ ಆರನೇ ಹಾಗೂ ಸ್ಮೃತಿ 714 ಅಂಕಗಳೊಂದಿಗೆ ಏಳನೇ ಸ್ಥಾನ ಪಡೆದಿದ್ದಾರೆ. ಆದರೆ ತಲಾ ಒಂದು ಸ್ಥಾನ ಕುಸಿತವಾಗಿದೆ. 758 ಅಂಕಗಳನ್ನು ಹೊಂದಿರುವ ಶ್ರೀಲಂಕಾದ ಚಾಮರಿ ಅಟಪಟ್ಟು ಅವರು ಅಗ್ರಸ್ಥಾನ ಗಳಿಸಿದ್ದಾರೆ. ಈ ಸಾಧನೆ ಮಾಡಿದ ದ್ವೀಪರಾಷ್ಟ್ರದ ಪ್ರಥಮ ಆಟಗಾರ್ತಿಯೆಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಕನ್ನಡತಿ ರಾಜೇಶ್ವರಿ ಗಾಯಕವಾಡ (617 ) ಮತ್ತು ಅನುಭವಿ ಆಫ್‌ಸ್ಪಿನ್, ಆಲ್‌ರೌಂಡರ್ ದೀಪ್ತಿ ಶರ್ಮಾ ಅವರು ಕ್ರಮವಾಗಿ ಎಂಟು ಮತ್ತು ಹತ್ತನೇ ಸ್ಥಾನ ಪಡೆದಿದ್ದಾರೆ. ಇಂಗ್ಲೆಂಡ್ ತಂಡದ ಸೋಫಿ ಎಕ್ಸೆಲ್‌ಸ್ಟೋನ್ (751) ಅಗ್ರಸ್ಥಾನ ಗಳಿಸಿದ್ದಾರೆ. ಆಲ್‌ರೌಂಡರ್‌ಗಳ ಪಟ್ಟಿಯಲ್ಲಿಯೂ ದೀಪ್ತಿ 322 ಅಂಕಗಳನ್ನು ಗಳಿಸಿ ಆರನೇ ಸ್ಥಾನ ಪಡೆದಿದ್ದಾರೆ. ಟಿ20 ಕ್ರಿಕೆಟ್ ವಿಭಾಗದಲ್ಲಿ ಭಾರತದ ಸ್ಮೃತಿ ಮಂದಾನ (722) ಮೂರನೇ ಸ್ಥಾನ ಉಳಿಸಿಕೊಂಡಿದ್ದಾರೆ. ದೀಪ್ತಿ (729) ಬೌಲಿಂಗ್‌ ವಿಭಾಗದಲ್ಲಿ ನಾಲ್ಕನೇ ಸ್ಥಾನಕ್ಕೇರಿದ್ದಾರೆ. ರೇಣುಕಾ ಸಿಂಗ್ (700) ಒಂಬತ್ತನೇ ಸ್ಥಾನದಲ್ಲಿದ್ದಾರೆ. ದೀಪ್ತಿ ಆಲ್‌ರೌಂಡರ್‌ ವಿಭಾಗದಲ್ಲಿಯೂ ಮೂರನೇ ಸ್ಥಾನ ಗಳಿಸಿದ್ದಾರೆ. ಅವರು 393 ಅಂಕಗಳನ್ನು ಪಡೆದಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.