ಜಿಂಬಾಬ್ವೆ ಕನಸು ಭಗ್ನಗೊಳಿಸಿದ ಸ್ಕಾಟ್ಲೆಂಡ್ ಹರಾರೆ (ಎಎಫ್‌ಪಿ): ಮೈಕೆಲ್‌ ಲೀಸ್ಕ್ (48, 33ಕ್ಕೆ2) ಅವರ ಆಲ್‌ರೌಂಡ್‌ ಆಟದ ನೆರವಿನಿಂದ ಸ್ಕಾಟ್ಲೆಂಡ್‌ ತಂಡ ವಿಶ್ವಕಪ್‌ ಅರ್ಹತಾ ಟೂರ್ನಿಯ ಸೂಪರ್‌ ಸಿಕ್ಸ್‌ ಹಂತದ ಮತ್ತೊಂದು ಅಚ್ಚರಿಯ ಫಲಿತಾಂಶದಲ್ಲಿ ಅತಿಥೇಯ ಜಿಂಬಾಬ್ವೆ ತಂಡಕ್ಕೆ 31 ರನ್‌ಗಳಿಂದ ಸೋಲುಣಿಸಿತು. ಈ ಆಘಾತದಿಂದ ವಿಶ್ವಕಪ್‌ನಲ್ಲಿ ಆಡುವ ಜಿಂಬಾಬ್ವೆ ತಂಡದ ಆಸೆ ನುಚ್ಚುನೂರಾಯಿತು. ಅರ್ಹತಾ ಟೂರ್ನಿಯಿಂದ ವಿಶ್ವಕಪ್‌ನಲ್ಲಿ ಆಡುವ ಎರಡನೇ ತಂಡ ಯಾವುದು ಎಂಬುದು ಗುರುವಾರ ಸ್ಕಾಟ್ಲೆಂಡ್ ಮತ್ತು ನೆದರ್ಲೆಂಡ್ಸ್‌ ನಡುವಣ ಅಂತಿಮ ಪಂದ್ಯದಲ್ಲಿ ನಿರ್ಧಾರ ಆಗಲಿದೆ. ಸ್ಕಾಟ್ಲೆಂಡ್ ವಿರುದ್ಧ ಗೆದ್ದಲ್ಲಿ ಎರಡನೇ ತಂಡವಾಗಿ ವಿಶ್ವಕಪ್‌ಗೆ ಅರ್ಹತೆ ಪಡೆಯುವ ಸುವರ್ಣಾವಕಾಶ ಜಿಂಬಾಬ್ವೆಗೆ ಒಲಿಯುತಿತ್ತು. ಆದರೆ ಅಗ್ರ ಬ್ಯಾಟರ್‌ಗಳು ವಿಫಲವಾಗಿ ತಂಡ ದಂಡ ತೆತ್ತಿತು. ಶ್ರೀಲಂಕಾದ ಭಾನುವಾರ ನಡೆದ ಪಂದ್ಯದಲ್ಲಿ ಜಿಂಬಾಬ್ವೆ ತಂಡವನ್ನು ಸೋಲಿಸಿ, ವಿಶ್ವಕಪ್‌ನಲ್ಲಿ ಆಡುವ ಮೊದಲ ತಂಡವಾಗಿ ಅರ್ಹತೆ ಸಂಪಾದಿಸಿತ್ತು. ಬ್ಯಾಟ್‌ ಮಾಡಲು ಕಳುಹಿಸಲ್ಪಟ್ಟ ಸ್ಕಾಟ್ಲೆಂಡ್‌ 50 ಓವರುಗಳಲ್ಲಿ 8 ವಿಕೆಟ್‌ಗೆ 234 ರನ್‌ ಗಳಿಸಿತು. ಮೈಕೆಲ್‌ ಲೀಸ್ಕ್‌ 34 ಎಸೆತಗಳಲ್ಲಿ 48 ರನ್‌ ಚಚ್ಚಿದ್ದರಿಂದ ತಂಡ 200ರ ಗೌರವಾರ್ಹ ಮೊತ್ತ ಗಳಿಸಲು ಸಾಧ್ಯವಾಯಿತು. ಎಂಟನೇ ಕ್ರಮಾಂಕದಲ್ಲಿ ಆಡಲಿಳಿದ ಅವರು ಮಾರ್ಕ್‌ ವಾಟ್‌ (ಔಟಾಗದೇ 21) ಜೊತೆ ಎಂಟನೇ ವಿಕೆಟ್‌ಗೆ ಉಪಯುಕ್ತ 46 ರನ್‌ ಸೇರಿಸಿದ್ದರು. ಇದಕ್ಕೆ ಮೊದಲು ಮ್ಯಾಥ್ಯೂ ಕ್ರಾಸ್‌ (38), ಬ್ರಾಂಡನ್‌ ಮೆಕ್‌ಮುಲೆನ್‌ (34) ಮತ್ತು ಜಾರ್ಜ್‌ ಮುನ್ಸಿ (31) ಉಪಯುಕ್ತ ಆಟವಾಡಿದ್ದರು. ಆತಿಥೇಯರ ಕಡೆ ಸೀನ್‌ ವಿಲಿಯಮ್ಸ್‌ 41 ರನ್ನಿಗೆ 3 ವಿಕೆಟ್ ಪಡೆದರು. ಈ ಮೊತ್ತ ಬೆನ್ನತ್ತಿದ ಜಿಂಬಾಬ್ವೆ ಆರಂಭದಲ್ಲೇ ತೊಂದರೆಗೆ ಸಿಲುಕಿ 37 ರನ್ನಿಗೆ 4 ವಿಕೆಟ್‌ ಕಳೆದುಕೊಂಡಿತು. ವೆಸ್ಲಿ ಮಧೆವಿಯರ್‌ (40) ಮತ್ತು ಸಿಕಂದರ್‌ ರಝಾ (34) ಪ್ರತಿಹೋರಾಟ ತೋರಿದರು. ನಂತರ ಮಧ್ಯಮ ಕ್ರಮಾಂಕದ ಆಟಗಾರ ರಯಾನ್‌ ಬರ್ಲ್ ಅವರು 84 ಎಸೆತಗಳಲ್ಲಿ 83 ರನ್‌ ಹೊಡೆದು ತಂಡದ ಆಸೆ ಚಿಗುರಿಸಿದರು. ಆದರೆ ಲೀಸ್ಕ್‌ ಆಫ್‌ಸ್ಪಿನ್ ದಾಳಿಯಲ್ಲಿ ಬರ್ಲ್ ಅವರ ವಿಕೆಟ್ ಪಡೆದರು. ಜಿಂಬಾಬ್ವೆ 42ನೇ ಓವರಿನಲ್ಲಿ 201 ರನ್‌ಗಳಿಗೆ ಆಲೌಟ್‌ ಆಯಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.