ದುಲೀಪ್ ಟ್ರೋಫಿ: ಕುತೂಹಲ ಘಟ್ಟದಲ್ಲಿ ಸೆಮಿಫೈನಲ್ ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸೆಮಿಫೈನಲ್ ಪಂದ್ಯ ಈಗ ಕುತೂಹಲ ಘಟ್ಟಕ್ಕೆ ಬಂದು ನಿಂತಿದೆ. ಈ ಪಂದ್ಯದಲ್ಲಿ ಉತ್ತರ ವಲಯವು ಒಡ್ಡಿರುವ 215 ರನ್‌ಗಳ ಗೆಲುವಿನ ಗುರಿಯು ದಕ್ಷಿಣ ವಲಯಕ್ಕೆ ದೊಡ್ಡ ಸವಾಲೆನಲ್ಲ ಎಂಬುದು ಮೇಲ್ನೋಟಕ್ಕೆ ಕಾಣುತ್ತದೆ. ಪಂದ್ಯದಲ್ಲಿ ಇನ್ನೂ ಎರಡು ದಿನಗಳ ಸಮಯವೂ ಇದೆ. ಆದರೆ ಈ ಅವಧಿಯಲ್ಲಿ ಮಳೆಯ ಆಟವೇ ಹೆಚ್ಚಾಗಿ ನಡೆದರೆ ಮತ್ತು ಮೊದಲ ಇನಿಂಗ್ಸ್‌ನಲ್ಲಿ ಎಡವಿದಂತೆ ಈಗಲೂ ಬ್ಯಾಟರ್‌ಗಳು ಲಯ ತಪ್ಪಿದರೆ ನಿರಾಶೆ ಖಚಿತ. ಪ್ರಥಮ ಇನಿಂಗ್ಸ್‌ನಲ್ಲಿ ಅನುಭವಿಸಿರುವ ಮೂರು ರನ್‌ಗಳ ಹಿನ್ನಡೆಯು ದಕ್ಷಿಣ ವಲಯಕ್ಕೆ ದುಬಾರಿಯಾಗಬಹುದು. ಉತ್ತರ ವಲಯಕ್ಕೆ ಈ ಪಂದ್ಯ ಡ್ರಾ ಆದರೂ ಫೈನಲ್ ಪ್ರವೇಶ ಲಭಿಸಲಿದೆ. ಆದರೆ ದಕ್ಷಿಣ ತಂಡದಲ್ಲಿ ಉತ್ತಮ ಬ್ಯಾಟರ್‌ಗಳು ಇದ್ದಾರೆ. ಎದುರಾಳಿ ಬೌಲರ್‌ಗಳನ್ನು ತಾಳ್ಮೆ ಮತ್ತು ಏಕಾಗ್ರತೆಯಿಂದ ಎದುರಿಸಿದರೆ ಮಾತ್ರ ಗುರಿ ಸಾಧನೆ ಮಾಡುವುದು ಸಾಧ್ಯವಾಗಬಹುದು. ಪಂದ್ಯದ ಮೂರನೇ ದಿನದಾಟದ ಸುಮಾರು ಒಂದೂವರೆ ಗಂಟೆಗಳ ಆಟವೂ ಮಳೆಯಿಂದಾಗಿ ನಡೆಯಲಿಲ್ಲ. ಚಹಾ ವಿರಾಮದ ನಂತರ ದಕ್ಷಿಣ ವಲಯಕ್ಕೆ ಬ್ಯಾಟಿಂಗ್ ಮುಂದುವರಿಸಲು ಸಾಧ್ಯವಾಗಲಿಲ್ಲ. ಇದರಿಂದಾಗಿ ತಂಡವು 6.3 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 21 ರನ್‌ ಗಳಿಸಿದೆ. ಸಾಯಿ ಸುದರ್ಶನ್ (ಬ್ಯಾಟಿಂಗ್ 5) ಮತ್ತು ಮಯಂಕ್ ಅಗರವಾಲ್ (ಬ್ಯಾಟಿಂಗ್ 15) ಕ್ರೀಸ್‌ನಲ್ಲಿದ್ದಾರೆ. ವೈಶಾಖಗೆ ಐದು ವಿಕೆಟ್: ಎರಡನೇ ದಿನದಾಟದಲ್ಲಿ ಎರಡು ವಿಕೆಟ್ ಕಳೆದುಕೊಂಡಿದ್ದ ಉತ್ತರ ವಲಯ ತಂಡವನ್ನು ದ್ವಿತಿಯ ಇನಿಂಗ್ಸ್‌ನಲ್ಲಿ 211 ರನ್‌ಗಳಿಗೆ ಕಟ್ಟಿಹಾಕುವಲ್ಲಿ ವೇಗಿ ವೈಶಾಖ ವಿಜಯಕುಮಾರ್ (76ಕ್ಕೆ5) ಯಶಸ್ವಿಯಾದರು. ಮೊದಲ ಇನಿಂಗ್ಸ್‌ನಲ್ಲಿ ಐದು ವಿಕೆಟ್ ಗೊಂಚಲು ಗಳಿಸಿದ್ದ ವಿದ್ವತ್ ಕಾವೇರಪ್ಪ (47ಕ್ಕೆ2) ಮತ್ತು ಎಡಗೈ ಸ್ಪಿನ್ನರ್ ಸಾಯಿಕಿಶೋರ್ (28ಕ್ಕೆ3) ಕೂಡ ವೈಶಾಖಗೆ ಉತ್ತಮ ಜೊತೆ ನೀಡಿದರು. ಇನಿಂಗ್ಸ್‌ನ ಆರಂಭದಲ್ಲಿಯೇ ಮುಗ್ಗರಿಸಿದ್ದ ಉತ್ತರ ತಂಡಕ್ಕೆ ಪ್ರಭಸಿಮ್ರನ್ ಸಿಂಗ್ (63; 93ಎ) ಮತ್ತು ಹರ್ಷಿತ್ ರಾಣಾ (38; 36ಎ) ಅವರು ತಂಡದ ಮೊತ್ತವು ಇನ್ನೂರರ ಗಡಿ ದಾಟಲು ಕಾರಣರಾದರು. ಪ್ರಭಸಿಮ್ರನ್ ಸಿಂಗ್, ನಿಶಾಂತ್ ಸಿಂಧು, ಪುಳ್ಕಿತ್ ನಾರಂಗ್ ಮತ್ತು ಜಯಂತ್ ಯಾದವ್ ವಿಕೆಟ್‌ಗಳನ್ನು ವೈಶಾಖ ಕಬಳಿಸಿದರು. ಗುರುವಾರ ಸಂಜೆ ಧ್ರುವ ಶೋರೆ ವಿಕೆಟ್ ಕೂಡ ಅವರ ಪಾಲಾಗಿತ್ತು. ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಉತ್ತರ ವಲಯ: 58.3 ಓವರ್‌ಗಳಲ್ಲಿ198. ದಕ್ಷಿಣ ವಲಯ: 54.4 ಓವರ್‌ಗಳಲ್ಲಿ195. ಎರಡನೇ ಇನಿಂಗ್ಸ್: ಉತ್ತರ ವಲಯ: 56.4 ಓವರ್‌ಗಳಲ್ಲಿ 211(ಅಂಕಿತ್ ಖಲ್ಸಿ 29, ಪ್ರಭಸಿಮ್ರನ್ ಸಿಂಗ್ 63, ಅಂಕಿತ್ ಕುಮಾರ್ 26, ಹರ್ಷಿತ್ ರಾಣಾ 38, ವಿದ್ವತ್ ಕಾವೇರಪ್ಪ 47ಕ್ಕೆ2, ವೈಶಾಖ ವಿಜಯಕುಮಾರ್ 76ಕ್ಕೆ5). ದಕ್ಷಿಣ ವಲಯ: 6.3 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 21 (ಸಾಯಿ ಸುದರ್ಶನ್ ಬ್ಯಾಟಿಂಗ್ 5, ಮಯಂಕ್ ಅಗರವಾಲ್ ಬ್ಯಾಟಿಂಗ್ 5) - ಪೂಜಾರ ಶತಕ: ಪಶ್ಚಿಮಕ್ಕೆ ಬೃಹತ್ ಮುನ್ನಡೆ ಚೇತೆಶ್ವರ್ ಪೂಜಾರ ಅಮೋಘ ಶತಕದ ಬಲದಿಂದ ಪಶ್ಚಿಮ ವಲಯ ತಂಡವು ದುಲೀಪ್ ಟ್ರೋಫಿ ಎರಡನೇ ಸೆಮಿಫೈನಲ್‌ನಲ್ಲಿ ಬೃಹತ್ ಮುನ್ನಡೆ ಗಳಿಸಿದೆ. ನಗರ ಹೊರವಲಯದ ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಶುಕ್ರವಾರ ಪಶ್ವಿಮ ವಲಯವು ಕೇಂದ್ರ ವಲಯದ ಎದುರು 384 ರನ್‌ಗಳ ಮುನ್ನಡೆ ಸಾಧಿಸಿದೆ. ಪೂಜಾರ (133; 278ಎ 4X14 6X1) ಶತಕ ದಾಖಲಿಸಿದರು. ಪಶ್ಚಿಮ ವಲಯವು ದಿನದಾಟದ ಕೊನೆಗೆ 92 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 292 ರನ್ ಗಳಿಸಿದೆ. ಗುರುವಾರ ಅರ್ಧಶತಕ ಗಳಿಸಿ ಕ್ರೀಸ್‌ನಲ್ಲಿದ್ದ ಪೂಜಾರ ಮೂರನೇ ದಿನದಾಟದಲ್ಲಿ ಬೌಲರ್‌ಗಳಿಗೆ ಕಠಿಣ ಸವಾಲೊಡ್ಡಿದರು. ಉಳಿದ ಬ್ಯಾಟರ್‌ಗಳು ಹೆಚ್ಚು ರನ್‌ ಗಳಿಸಲಿಲ್ಲ. ಆದರೆ ಒಂದು ಬದಿಯಲ್ಲಿ ವಿಕೆಟ್‌ಗಳು ಉರುಳುತ್ತಿದ್ದರೂ ಪೂಜಾರ ಮಾತ್ರ ದಿಟ್ಟವಾಗಿ ಆಡಿ ಶತಕ ಪೂರೈಸಿದರು. ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಪಶ್ಚಿಮ ವಲಯ: 92.5 ಓವರ್‌ಗಳಲ್ಲಿ 220. ಕೇಂದ್ರ ವಲಯ: 31 ಓವರ್‌ಗಳಲ್ಲಿ 128. ಎರಡನೇ ಇನಿಂಗ್ಸ್: ಪಶ್ಚಿಮವಲಯ: 92 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 292 (ಚೇತೆಶ್ವರ್ ಪೂಜಾರ 133 ಹಿತ್ ಪಟೇಲ್ 27 ಸೌರಭ್ ಕುಮಾರ್ 79ಕ್ಕೆ4 ಸಾರಾಂಶ್ ಜೈನ್ 56ಕ್ಕೆ3) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.