ಏಷ್ಯನ್ ಗೇಮ್ಸ್‌ಗೆ ಕ್ರಿಕೆಟ್‌ ತಂಡ: ಬಿಸಿಸಿಐ ಅನುಮೋದನೆ ಮುಂಬೈ (ಪಿಟಿಐ): ಸೆಪ್ಟೆಂಬರ್- ಅಕ್ಟೋಬರ್‌ನಲ್ಲಿ ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ಗೆ ಪುರುಷರ ಮತ್ತು ಮಹಿಳಾ ಕ್ರಿಕೆಟ್‌ ತಂಡಗಳು ಭಾಗವಹಿಸುವುದಕ್ಕೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಶುಕ್ರವಾರ ಅನುಮೋದನೆ ನೀಡಿದೆ. ಸೆ.28ರಿಂದ ಪ್ರಾರಂಭವಾಗುವ ಪುರುಷರ ಕ್ರಿಕೆಟ್ ಟೂರ್ನಿಗೆ ಎರಡನೇ ದರ್ಜೆಯ ಭಾರತ ತಂಡವು ಭಾಗವಹಿಸಲಿದೆ. ಸೆ.19ರಿಂದ ಶುರುವಾಗುವ ಮಹಿಳೆಯ ಕ್ರಿಕೆಟ್‌ ಟೂರ್ನಿಗೂ ಬಲಿಷ್ಠವಾದ ತಂಡವನ್ನು ರವಾನಿಸಲಿದೆ. ಏಷ್ಯನ್ ಗೇಮ್ಸ್ ಇತಿಹಾಸದಲ್ಲಿ ಕೇವಲ ಮೂರು ಬಾರಿ ಕ್ರಿಕೆಟ್ ಆಯೋಜಿಸಲಾಗಿದೆ. ಕೊನೆಯ ಬಾರಿಗೆ 2014ರಲ್ಲಿ ಇಂಚಿಯಾನ್‌ನಲ್ಲಿ ಕ್ರಿಕೆಟ್‌ ಇತ್ತಾದರೂ ಅದರಲ್ಲಿ ಭಾರತ ತಂಡ ಭಾಗವಹಿಸಿರಲಿಲ್ಲ. ಅ.5ರಿಂದ ಭಾರತದ ಆತಿಥ್ಯದಲ್ಲಿ ಏಕದಿನ ವಿಶ್ವಕಪ್‌ ಟೂರ್ನಿಯು ಆರಂಭಗೊಳ್ಳಲಿದ್ದು, ಅದೇ ಸಂದರ್ಭದಲ್ಲಿ ಏಷ್ಯನ್‌ ಗೇಮ್ಸ್‌ ಆಯೋಜಿಸಿರುವುದರಿಂದ ಪುರುಷರ ತಂಡಕ್ಕೆ ಹೊಸ ಸವಾಲು ಎದುರಾಗಿದೆ. ‘ಭಾರತ ಸರ್ಕಾರದ ನಿರ್ದೇಶನಕ್ಕೆ ಅನುಗುಣವಾಗಿ ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ ತಂಡಗಳನ್ನು ಏಷ್ಯನ್‌ ಗೇಮ್ಸ್‌ಗೆ ಕಳುಹಿಸಿ ರಾಷ್ಟ್ರೀಯ ಉದ್ದೇಶಕ್ಕೆ ಕೊಡುಗೆ ನೀಡುವುದು ಮಂಡಳಿಯ ಉದ್ದೇಶವಾಗಿದೆ‘ ಎಂದು ಬಿಸಿಸಿಐ ಹೇಳಿದೆ. ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೂ ಒಪ್ಪಿಗೆ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯ 16ನೇ ಆವೃತ್ತಿಯಲ್ಲಿ ಜಾರಿಗೊಳಿಸಲಾಗಿದ್ದ ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ಅ.16ರಿಂದ ಆರಂಭವಾಗುವ ಸೈಯದ್ ಮುಷ್ತಾಕ್‌ ಅಲಿ ಟಿ20 ಟ್ರೋಫಿ ಟೂರ್ನಿಯಲ್ಲಿ ಬಳಸಲು ಬಿಸಿಸಿಐ ಅಪೆಕ್ಸ್ ಮಂಡಳಿ ಒಪ್ಪಿಗೆ ನೀಡಿದೆ. ಹೋದ ಋತುವಿನ ಸೈಯದ್ ಮುಷ್ತಾಕ್‌ ಅಲಿ ಟಿ20 ಟ್ರೋಫಿ ಟೂರ್ನಿಯಲ್ಲಿ ಇಂಪ್ಯಾಕ್ಟ್‌ ಪ್ಲೆಯರ್ ನಿಯಮ ಪರಿಚಯಿಸಲಾಗಿತ್ತು. ಆದರೆ, ನಿಯಮವನ್ನು 14ನೇ ಓವರ್‌ನ ಅಂತ್ಯದ ಮೊದಲು ಮತ್ತು ಟಾಸ್‌ಗೆ ಮೊದಲು ಬಳಸಲು ಅವಕಾಶವಿತ್ತು. ಇದು ಮುಂದಿನ ಋತುವಿನಿಂದ ಬದಲಾಗಲಿದೆ. ಐಪಿಎಲ್‌ನಂತೆ ಟಾಸ್‌ಗೆ ಮೊದಲು ಆಡುವ ಹನ್ನೊಂದರ ಹೊರತಾಗಿ ನಾಲ್ಕು ಬದಲಿ ಆಟಗಾರರನ್ನು ಹೆಸರಿಸಲು ತಂಡಗಳಿಗೆ ಅವಕಾಶ ನೀಡಲಾಗುತ್ತದೆ. ನಾಲ್ಕು ಬದಲಿ ಆಟಗಾರರಲ್ಲಿ ಒಬ್ಬರನ್ನು ಮಾತ್ರ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಳಸಬಹುದಾಗಿದೆ. ‘ಎರಡೂ ತಂಡಗಳು ಪ್ರತಿ ಪಂದ್ಯಕ್ಕೆ ಒಬ್ಬ ಇಂಪ್ಯಾಕ್ಟ್ ಪ್ಲೇಯರ್ ಅನ್ನು ಬಳಸಲು ಅನುಮತಿ ನೀಡಲಾಗುತ್ತದೆ. ಆದರೆ, ಇದು ಕಡ್ಡಾಯವಲ್ಲ’ ಎಂದೂ ತಿಳಿಸಲಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.