2023: ಭಾರತ –ಆಸ್ಟ್ರೇಲಿಯಾ ಮುಖಾಮುಖಿ, ರೋಹಿತ್ ಪಡೆಗೆ ಶುಭಾರಂಭದ ಕನಸು ಚೆನ್ನೈ: ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾಪಟುಗಳ ‘ಪದಕ ಶತಕ‘ ಕಣ್ತುಂಬಿಕೊಂಡಿರುವ ಕ್ರೀಡಾಪ್ರೇಮಿಗಳ ಚಿತ್ತ ಈಗ ಎಂ.ಎ. ಚಿದಂಬರಂ ಕ್ರೀಡಾಂಗಣದತ್ತ ಹೊರಳಿದೆ. ಭಾನುವಾರ ಇಲ್ಲಿ ನಡೆಯಲಿರುವ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿವೆ. 12 ವರ್ಷಗಳ ನಂತರ ಆತಿಥ್ಯ ವಹಿಸುತ್ತಿರುವ ಭಾರತವು ಟೂರ್ನಿಯಲ್ಲಿ ಶುಭಾರಂಭ ಮತ್ತು ಪ್ರಶಸ್ತಿ ಗೆಲುವಿನ ಸುಖಾಂತ್ಯ ಕಾಣುವುದೇ ಎಂಬ ಕುತೂಹಲ ಗರಿಗೆದರಿದೆ. 2011ರಲ್ಲಿ ಭಾರತ ಪ್ರಶಸ್ತಿ ಜಯಿಸಿತ್ತು. ಅದರ ನಂತರ ನಡೆದ ಎರಡು ವಿಶ್ವಕಪ್‌ಗಳಲ್ಲಿ ಎಡವಿತ್ತು. ಆದರೆ ಕಳೆದ ಕೆಲವು ದಿನಗಳಲ್ಲಿ ಭಾರತ ತಂಡವು ಉತ್ತಮವಾಗಿ ಆಡಿರುವುದರಿಂದ ಕ್ರಿಕೆಟ್‌ಪ್ರೇಮಿಗಳಲ್ಲಿ ವಿಶ್ವಾಸ ಗರಿಗೆದರಿದೆ. ವಿಶ್ವಕಪ್ ಟೂರ್ನಿಗೆ ಬರುವ ಮುನ್ನ ಭಾರತ ತಂಡವು ಆಸ್ಟ್ರೇಲಿಯಾ ಎದುರಿನ ಸರಣಿಯಲ್ಲಿ ಭರ್ಜರಿ ಜಯ ಸಾಧಿಸಿತ್ತು. ಆ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಹಂಗಾಮಿ ನಾಯಕ ಕೆ.ಎಲ್. ರಾಹುಲ್ ಬಳಗವು 2–0 ಮುನ್ನಡೆ ಸಾಧಿಸಿತ್ತು. ವಿಶ್ರಾಂತಿ ಮುಗಿಸಿ ಬಂದ ರೋಹಿತ್ ಮೂರನೇ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಿದ್ದರು. ಆದರೆ ಆ ಪಂದ್ಯದಲ್ಲಿ ಭಾರತ ತಂಡವು ಸೋತಿತ್ತು. ಅದಕ್ಕೂ ಮುಂಚೆ ಏಷ್ಯಾ ಕಪ್ ಕೂಡ ಜಯಿಸಿತ್ತು. ಅದರಿಂದಾಗಿ ಭರ್ತಿ ಆತ್ಮವಿಶ್ವಾಸದಲ್ಲಿದೆ. ಆದರೆ ಶುಭಮನ್ ಗಿಲ್ ಅವರು ಡೆಂಗಿ ಜ್ವರದಿಂದ ಬಳಲುತ್ತಿರುವುದರಿಂದ ಶುಭಮನ್ ಗಿಲ್ ಬದಲಿಗೆ ಇಶಾನ್ ಕಿಶನ್ ಇನಿಂಗ್ಸ್ ಆರಂಭಿಸಬಹುದು. ಏಕದಿನ ಕ್ರಿಕೆಟ್‌ನಲ್ಲಿ ವೇಗದ ದ್ವಿಶತಕ ಬಾರಿಸಿದ ದಾಖಲೆ ಇಶಾನ್ ಅವರದ್ದು. ಕನ್ನಡಿಗ ಕೆ.ಎಲ್. ರಾಹುಲ್ ವಿಕೆಟ್‌ಕೀಪಿಂಗ್ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಹೊಣೆ ನಿಭಾಯಿಸಬೇಕಿದೆ. ಅನುಭವಿ ವಿರಾಟ್ ಕೊಹ್ಲಿ ಅವರು ತಮ್ಮ ಲಯವನ್ನು ಕಾಪಾಡಿಕೊಂಡರೆ ಸೆಮಿಫೈನಲ್ ಹಾದಿ ಸುಲಭ. ಚೆನ್ನೈನವರೇ ಆದ ಆಫ್‌ಸ್ಪಿನ್ ಆಲ್‌ರೌಂಡರ್ ಆರ್. ಅಶ್ವಿನ್ ಅವರಿಗೆ ಕಣಕ್ಕಿಳಿಯುವ ಅವಕಾಶ ಸಿಗಬಹುದು. ಆದರೆ ಐದನೇ ಕ್ರಮಾಂಕದ ಬ್ಯಾಟರ್‌ ಸ್ಥಾನಕ್ಕೆ ಶ್ರೇಯಸ್ ಅಥವಾ ಸೂರ್ಯಕುಮಾರ್ ಯಾದವ್ ಅವರಲ್ಲಿ ಯಾರಿಗೆ ಅದೃಷ್ಟ ಒಲಿಯಲಿದೆ ಎಂಬುದನ್ನು ನೋಡಬೇಕಿದೆ. ಬೌಲಿಂಗ್‌ನಲ್ಲಿ ಮೊಹಮ್ಮದ್ ಶಮಿ, ಜಸ್‌ಪ್ರೀತ್ ಬೂಮ್ರಾ ಮತ್ತು ಮೊಹಮ್ಮದ್ ಸಿರಾಜ್ ಅವರ ಆಟ ಪ್ರಮುಖವಾಗಲಿದೆ. ಸ್ಟೊಯಿನಿಸ್ ಫಿಟ್‌ನೆಸ್ ಚಿಂತೆ ಪ್ಯಾಟ್ ಕಮಿನ್ಸ್ ನಾಯಕತ್ವದ ಆಸ್ಟ್ರೇಲಿಯಾ ತಂಡವು ತನ್ನ ಸಂಪೂರ್ಣ ಸಾಮರ್ಥ್ಯ ಪಣಕ್ಕೊಡ್ಡಲು ಸಿದ್ಧವಾಗಿದೆ. ಆದರೆ ಆಲ್‌ರೌಂಡರ್ ಮಾರ್ಕಸ್ ಸ್ಟೊಯಿನಿಸ್ ಅವರು ಫಿಟ್‌ ಇಲ್ಲದಿರುವುದು ತಂಡಕ್ಕೆ ಚಿಂತೆಯ ವಿಷಯವಾಗಿದೆ. ಇದರಿಂದಾಗಿ ‘ಪವರ್‌ ಹಿಟ್ಟಿಂಗ್‌‘ ಹೊಣೆಯು ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್, ಆಲ್‌ರೌಂಡರ್‌ಗಳಾದ ಮಿಚೆಲ್ ಮಾರ್ಷ್, ಕ್ಯಾಮರಾನ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಮೇಲೆ ವಿಶ್ವಾಸವಿಟ್ಟಿದ್ದಾರೆ. ಇವರಿಗೆ ಐಪಿಎಲ್‌ನಲ್ಲಿ ಆಡಿರುವ ಅನುಭವ ಇರುವುದರಿಂದ ಭಾರತದ ವಾತಾವರಣದಲ್ಲಿ ಬೀಸಾಟವಾಡುವ ತಂತ್ರ ಕರಗತವಾಗಿದೆ. ಐದು ಬಾರಿ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ಮತ್ತೊಮ್ಮೆ ಕಪ್ ಎತ್ತಿ ಹಿಡಿಯವ ಕನಸಿನೊಂದಿಗೆ ಕಣಕ್ಕಿಳಿಯಲಿದೆ. ಅಭ್ಯಾಸದ ಸಂದರ್ಭದಲ್ಲಿ ಜಸ್‌ಪ್ರೀತ್ ಬೂಮ್ರಾ ಮತ್ತು ವಿರಾಟ್ ಕೊಹ್ಲಿ –ಪಿಟಿಐ ಚಿತ್ರ –ಪಿಟಿಐ ಚಿತ್ರ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಫೀಲ್ಡಿಂಗ್ ಅಭ್ಯಾಸ –ಎಎಫ್‌ಪಿ ಚಿತ್ರ ತಂಡಗಳು ಭಾರತ: ರೋಹಿತ್ ಶರ್ಮಾ (ನಾಯಕ) ಇಶಾನ್ ಕಿಶನ್ (ವಿಕೆಟ್‌ಕೀಪರ್) ವಿರಾಟ್ ಕೊಹ್ಲಿ ಶ್ರೇಯಸ್ ಅಯ್ಯರ್ ಕೆ.ಎಲ್. ರಾಹುಲ್ (ವಿಕೆಟ್‌ಕೀಪರ್) ಸೂರ್ಯಕುಮಾರ್ ಯಾದವ್ ಹಾರ್ದಿಕ್ ಪಾಂಡ್ಯ ರವೀಂದ್ರ ಜಡೇಜ ಆರ್. ಅಶ್ವಿನ್ ಕುಲದೀಪ್ ಯಾದವ್ ಜಸ್‌ಪ್ರೀತ್ ಬೂಮ್ರಾ ಮೊಹಮ್ಮದ್ ಸಿರಾಜ್ ಮೊಹಮ್ಮದ್ ಶಮಿ ಶಾರ್ದೂಲ್ ಠಾಕೂರ್. ಆಸ್ಟ್ರೇಲಿಯಾ: ಪ್ಯಾಟ್ ಕಮಿನ್ಸ್ (ನಾಯಕ) ಡೇವಿಡ್ ವಾರ್ನರ್ ಸ್ಟೀವ್ ಸ್ಮಿತ್ ಅಲೆಕ್ಸ್ ಕ್ಯಾರಿ ಜೋಶ್ ಇಂಗ್ಲಿಸ್ ಸೀನ್ ಅಬಾಟ್ ಆ್ಯಷ್ಟನ್ ಅಗರ್ ಕ್ಯಾಮರಾನ್ ಗ್ರೀನ್ ಜೋಶ್ ಹ್ಯಾಜಲ್‌ವುಡ್ ಟ್ರಾವಿಸ್ ಹೆಡ್ ಮಿಚೆಲ್ ಮಾರ್ಷ್ ಗ್ಲೆನ್ ಮ್ಯಾಕ್‌ವೆಲ್ ಮಾರ್ಕಸ್ ಸ್ಟೊಯಿನಿಸ್ ಆ್ಯಡಂ ಜಂಪಾ ಮಿಚೆಲ್ ಸ್ಟಾರ್ಕ್. ಪಂದ್ಯ ಆರಂಭ: ಮಧ್ಯಾಹ್ನ 2 ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಹಾಟ್‌ಸ್ಟಾರ್ ಆ್ಯಪ್ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.