: ಮಧುಶಂಕಾ ದಾಳಿಗೆ ನೆದರ್ಲೆಂಡ್ಸ್‌ ತತ್ತರ, ಲಂಕಾ ಜಯಭೇರಿ ಹರಾರೆ: ವೇಗದ ಬೌಲರ್ ದಿಲ್ಶಾನ್ ಮಧುಶಂಕಾ ಮತ್ತು ಮಹೀಷ್ ತೀಕ್ಷಣ ಅವರ ಅಮೋಘ ದಾಳಿಯ ಮುಂದೆ ನೆದರ್ಲೆಂಡ್ಸ್ ಕುಸಿಯಿತು. ಇಲ್ಲಿ ಭಾನುವಾರ ನಡೆದ ವಿಶ್ವಕಪ್ ಕ್ವಾಲಿಫೈಯರ್‌ ಫೈನಲ್‌ನಲ್ಲಿ ಶ್ರೀಲಂಕಾ ತಂಡವು 128 ರನ್‌ಗಳ ಜಯ ಸಾಧಿಸಿತು. ಹರಾರೆ ಸ್ಪೋರ್ಟ್ಸ್‌ ಕ್ಲಬ್‌ನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ನೆದರ್ಲೆಂಡ್ಸ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಶ್ರೀಲಂಕಾಗೆ ಉತ್ತಮ ಆರಂಭ ಲಭಿಸಲಿಲ್ಲ. ಆದರೆ, ಸಹನ್ ಅರಾಚಿಗೆ (57; 71ಎ, 4X4) ಮತ್ತು ಕುಶಾಲ ಮೆಂಡಿಸ್ (43; 52ಎ) ಅವರ ಉತ್ತಮ ಬ್ಯಾಟಿಂಗ್‌ನಿಂದಾಗಿ ತಂಡವು 47.5 ಓವರ್‌ಗಳಲ್ಲಿ 233 ರನ್‌ ಗಳಿಸಿ ಆಲೌಟ್ ಆಯಿತು. ಗುರಿ ಬೆನ್ನಟ್ಟಿದ ನೆದರ್ಲೆಂಡ್ಸ್ ತಂಡವು 23.3 ಓವರ್‌ಗಳಲ್ಲಿ 105 ರನ್‌ ಗಳಿಸಲು ಮಾತ್ರ ಶಕ್ತವಾಯಿತು. ಮಧುಶಂಕಾ (18ಕ್ಕೆ3) ಮತ್ತು ತೀಕ್ಷಣ (31ಕ್ಕೆ4) ಎದುರಾಳಿ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಿದರು. ಸ್ಪಿನ್ನರ್ ವಣಿಂದು ಹಸರಂಗಾ ಕೂಡ ಎರಡು ವಿಕೆಟ್ ಗಳಿಸಿದರು. ನೆದರ್ಲೆಂಡ್ಸ್‌ ದೇಶದ ವಿಕ್ರಮಜೀತ್ ಸಿಂಗ್ (13; 14ಎ), ಮ್ಯಾಕ್ ಒಡೌಡ್ (33; 63ಎ, 4X1, 6X1) ಮತ್ತು ಲೊಗನ್ ವ್ಯಾನ್ ಬೀಕ್ (ಔಟಾಗದೆ 20) ಅವರು ಮಾತ್ರ ಎರಡಂಕಿ ತಲುಪಿದರು. ಉಳಿದವರು ವೈಫಲ್ಯ ಅನುಭವಿಸಿದರು. ಮಧುಶಂಕಾ ದಾಳಿಗೆ ವಿಕ್ರಮಜೀತ್ ಸಿಂಗ್, ವೆಸ್ಲಿ ಬರೆಸಿ ಮತ್ತು ನೊಹ್ ಕ್ರೋಸ್ ವಿಕೆಟ್‌ ಉರುಳಿದವು. ಇದರಿಂದಾಗಿ ಅಗ್ರಕ್ರಮಾಂಕ ವಿಫಲವಾಯಿತು. ಸಂಕ್ಷಿಪ್ತ ಸ್ಕೋರು: ಶ್ರೀಲಂಕಾ: 47.5 ಓವರ್‌ಗಳಲ್ಲಿ 233 (ಕುಶಾಲ ಮೆಂಡಿಸ್ 43, ಸಹನ್ ಅರಚಾಚಿಗೆ 57, ಚರಿತ ಅಸಲಂಕಾ 36, ವಿಕ್ರಮಜೀತ್ ಸಿಂಗ್ 12ಕ್ಕೆ2, ಸಕೀಬ್ ಝುಲ್ಫೀಕರ್ 39ಕ್ಕೆ2 ವ್ಯಾನ್ ಬೀಕ್ 40ಕ್ಕೆ2, ರಿಯಾನ್ ಕ್ಲೀನ್ 42ಕ್ಕೆ2) ನೆದರ್ಲೆಂಡ್ಸ್: 23.3 ಓವರ್‌ಗಳಲ್ಲಿ 105 (ವಿಕ್ರಮಜೀತ್ ಸಿಂಗ್ 13, ಮ್ಯಾಕ್ಸ್ ಒದೌಡ್ 33, ಲೊಗನ್ ವ್ಯಾನ್ ಬೀಕ್ ಔಟಾಗದೆ 20, ದಿಲ್ಶಾನ್ ಮಧುಶಂಕಾ 18ಕ್ಕೆ3, ಮಹೀಷ್ ತೀಕ್ಷಣ 31ಕ್ಕೆ4, ವಣಿಂದು ಹಸರಂಗಾ 35ಕ್ಕೆ2) ಫಲಿತಾಂಶ: ಶ್ರೀಲಂಕಾ ತಂಡಕ್ಕೆ 128 ರನ್‌ಗಳ ಜಯ. ಪಂದ್ಯಶ್ರೇಷ್ಠ: ದಿಲ್ಶಾನ್ ಮಧುಶಂಕಾ. ಸರಣಿಶ್ರೇಷ್ಠ: ಸೀನ್ ವಿಲಿಯಮ್ಸ್. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.