ಐಸಿಸಿ ಆದಾಯದಲ್ಲಿ ಸಿಂಹಪಾಲು ಗಳಿಕೆಗೆ ಬಿಸಿಸಿಐ ಸಿದ್ಧ ನವದೆಹಲಿ: ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ ಸರ್ವಸದಸ್ಯರ ವಾರ್ಷಿಕ ಸಭೆಯು ಡರ್ಬನ್‌ನಲ್ಲಿ ಸೋಮವಾರ ಆರಂಭವಾಗಲಿದೆ. ಐಸಿಸಿಯ ಆದಾಯದಲ್ಲಿ ತನ್ನ ಪಾಲಿನ ₹ 1900 ಕೋಟಿಗೆ ಅನುಮೋದನೆ ಪಡೆಯಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸಿದ್ಧವಾಗಿದೆ. ಇದಲ್ಲದೇ ಸಭೆಯಲ್ಲಿ ಏಕದಿನ ಕ್ರಿಕೆಟ್ ಮಾದರಿಯ ಭವಿಷ್ಯ ಮತ್ತು ಟಿ20 ಫ್ರ್ಯಾಂಚೈಸಿ ಲೀಗ್‌ಗಳಲ್ಲಿ ಆಟಗಾರರ ಸ್ಪರ್ಧೆಯ ಕುರಿತ ನಿಯಮ ರೂಪಿಸುವ ಕುರಿತು ಚರ್ಚೆ ನಡೆಯಲಿವೆ. ಅಲ್ಲದೇ ಮುಂದಿನ ವರ್ಷ ವೆಸ್ಟ್ ಇಂಡೀಸ್ ಮತ್ತು ಅಮೆರಿಕ ಆತಿಥ್ಯದಲ್ಲಿ ಟಿ20 ವಿಶ್ವಕಪ್ ಟೂರ್ನಿ ಆಯೋಜನೆಯ ಕುರಿತು ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ. ಈ ಸಭೆಯಲ್ಲಿ ಐಸಿಸಿಯ ವಾರ್ಷಿಕ ಆದಾಯ ಹಂಚಿಕೆಯ ವಿಷಯವು ಚರ್ಚೆ ಆಗಲಿದೆ. ಐಸಿಸಿಯು ಗಳಿಸುವ ವಾರ್ಷಿಕ ಗಳಿಕೆಯಲ್ಲಿ ಬಿಸಿಸಿಐ ತನ್ನ ಪಾಲಿನ 38.5ರಷ್ಟು ಆದಾಯ ಪಡೆಯಲು ಅನುಮೋದನೆ ಗಳಿಸುವ ವಿಶ್ವಾಸದಲ್ಲಿದೆ. ಇದು ಉಳದೆಲ್ಲ ಸದಸ್ಯ ರಾಷ್ಟ್ರಗಳಿಗಿಂತಲೂ ಹೆಚ್ಚಿನ ಮೊತ್ತವಾಗಿದೆ. ಐಸಿಸಿಯ ಹಣಕಾಸು ಮತ್ತು ವಾಣಿಜ್ಯ ವ್ಯವಹಾರಗಳು ಸಮಿತಿಯು ಈ ಪ್ರಸ್ತಾವಕ್ಕೆ ಅನುಮೋದನೆ ನೀಡಬೇಕಿದೆ. ನಂತರ ಮಂಡಳಿಗಳ ನಿರ್ದೇಶಕರ ಸಭೆಯಲ್ಲಿ ಔಪಚಾರಿಕವಾಗಿ ಒಪ್ಪಿಗೆ ಸಿಗಲಿದೆ. ‘ ಆದಾಯದಲ್ಲಿ ಶೇಕಡಾವಾರು ಹಂಚಿಕೆಯ ನಿಯಮದಲ್ಲಿ ಭಾರತವು 38.5ರಷ್ಟು ಪಡೆಯುವುದು ಸಮಂಜಸವೆನಿಸುತ್ತಿಲ್ಲ. ಏಕೆಂದರೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ 6.89 ಮತ್ತು ಕ್ರಿಕೆಟ್ ಆಸ್ಟ್ರೇಲಿಯಾ 6.25ರಷ್ಟು ಪಾಲು ಪಡೆಯಲಿವೆ. ಈ ಆಯಾಮವನ್ನೂ ನೋಡಬೇಕು. ಪ್ರತಿಯೊಂದು ಸದಸ್ಯ ರಾಷ್ಟ್ರವೂ ಕಳೆದ ಎಂಟು ವರ್ಷಗಳಿಂದ ಒಂದೇ ಬಗೆಯ ಪಾಲು ಪಡೆಯುತ್ತಿವೆ‘ ಎಂದು ಐಸಿಸಿ ಸದಸ್ಯರೊಬ್ಬರು ಹೇಳಿದ್ದಾರೆ. ಟಿ20 ಭರಾಟೆಯಲ್ಲಿ ಕ್ಷೀಣಿಸುತ್ತಿರುವ ಏಕದಿನ ಮಾದರಿ ಕ್ರಿಕೆಟ್‌ ಆಯೋಜನೆಯ ಕುರಿತು ಚರ್ಚೆ ನಡೆಯಲಿದೆ. 2028ರ ರಿಂದ 32ರವರೆಗಿನ ವೇಳಾಪಟ್ಟಿಯಲ್ಲಿ ಈ ಮಾದರಿಯ ಪಂದ್ಯಗಳ ಆಯೋಜನೆ ಕುರಿತು ಚರ್ಚೆ ನಡೆಯಲಿದೆ. ಪಾಕಿಸ್ತಾನ ತಂಡವು ಭಾರತದಲ್ಲಿ ನಡೆಯಲಿರುವ ಏಕದಿನ ಕ್ರಿಕೆಟ್‌ ವಿಶ್ವಕಪ್‌ಗೆ ತೆರಳುವ ಕುರಿತ ವಿಷಯವೂ ಪ್ರಸ್ತಾಪವಾಗಲಿದೆ. ಪಾಕ್ ಕ್ರಿಕೆಟ್ ಮಂಡಳಿಯ ಮುಖ್ಯಸ್ಥರೂ ಈ ಸಭೆಗೆ ಹಾಜರಾಗುವರು. ಸೋಮವಾರ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳ ಸಭೆ, ಮಂಗಳವಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆ, ಬುಧವಾರ ಹಣಕಾಸು ಮತ್ತು ವಾಣಿಜ್ಯ ವ್ಯವಹಾರಗಳ ವಿಭಾಗದ ಸಭೆ ಮತ್ತು ಗುರುವಾರ ಆಡಳಿತ ಮಂಡಳಿ ನಿರ್ದೇಶಕ ಸಭೆ ಮತ್ತು ವಾರ್ಷಿಕ ಸರ್ವ ಸಾಮಾನ್ಯ ಸಭೆ ನಡೆಯಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.