ಭಾರತದ ವನಿತೆಯರಿಗೆ ಬಾಂಗ್ಲಾ ಆಘಾತ ಮೀರಪುರ್(ಪಿಟಿಐ): ಕಳಪೆ ಬ್ಯಾಟಿಂಗ್‌ನಿಂದಾಗಿ ಭಾರತ ಮಹಿಳಾ ತಂಡವು ಬಾಂಗ್ಲಾದೇಶ ಎದುರಿನ ಏಕದಿನ ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿಯೇ ಸೋತಿತು. ಭಾನುವಾರ ಇಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡವು 40 ರನ್‌ಗಳಿಂದ ಪರಾಭವಗೊಂಡಿತು. ಮೂರು ಪಂದ್ಯಗಳ ಸರಣಿಯಲ್ಲಿ ಆತಿಥೇಯ ತಂಡವು 1–0 ಮುನ್ನಡೆ ಗಳಿಸಿತು. ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಬಾಂಗ್ಲಾ ತಂಡವು 43 ಓವರ್‌ಗಳಲ್ಲಿ 152 ರನ್‌ ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿತು. ಪದಾರ್ಪಣೆ ಪಂದ್ಯವಾಡಿದ ಮಧ್ಯಮವೇಗಿ ಅಮನ್‌ಜ್ಯೋತ್ ಕೌರ್ (31ಕ್ಕೆ4) ಬಾಂಗ್ಲಾದ ಬ್ಯಾಟಿಂಗ್ ಪಡೆಗೆ ತಡೆಯೊಡ್ಡಿದರು. ಆದರೆ ಭಾರತ ತಂಡವು ಈ ಸಾಧಾರಣ ಮೊತ್ತದ ಗುರಿಯನ್ನು ಮುಟ್ಟುವಲ್ಲಿ ಎಡವಿತು. 35.5 ಓವರ್‌ಗಳಲ್ಲಿ 113 ರನ್‌ ಗಳಿಸಲಷ್ಟೇ ತಂಡಕ್ಕೆ ಸಾಧ್ಯವಾಯಿತು. ಮಳೆ ಬಂದ ಕಾರಣ ಕೆಲಕಾಲ ಆಟ ಸ್ಥಗಿತವಾಗಿತ್ತು. ಅದರಿಂದಾಗಿ ಡಕ್ವರ್ಥ್‌ ಲೂಯಿಸ್ ನಿಯಮದ ಪ್ರಕಾರ ಗುರಿಯನ್ನು ಪರಿಷ್ಕರಿಸಲಾಯಿತು. 44 ಓವರ್‌ಗಳಲ್ಲಿ 154 ರನ್‌ ಗುರಿಯನ್ನು ನಿಗದಿಗೊಳಿಸಲಾಯಿತು. ಭಾರತದ ಬ್ಯಾಟರ್‌ಗಳು ತಮ್ಮ ಸಾಮರ್ಥ್ಯ ಹಾಗೂ ಪ್ರತಿಭೆಗೆ ತಕ್ಕಂತೆ ಆಡಲಿಲ್ಲ. ದೀಪ್ತಿ ಶರ್ಮಾ 40 ಎಸೆತಗಳಲ್ಲಿ 20 ರನ್‌ ಗಳಿಸಿದ್ದೇ ತಂಡದಲ್ಲಿ ವೈಯಕ್ತಿಕ ಗರಿಷ್ಠ ಸ್ಕೋರ್ ಆಯಿತು. ಲೆಗ್‌ಸ್ಪಿನ್ನರ್ ರಬಿಯಾ ಖಾನ್ (30ಕ್ಕೆ3) ಮತ್ತು ಮಧ್ಯಮವೇಗಿ ಮರೂಫಾ ಅಕ್ತರ್ (29ಕ್ಕೆ4) ಅವರ ಪರಿಣಾಮಕಾರಿ ದಾಳಿಯ ಮುಂದೆ ಪ್ರವಾಸಿ ಭಾರತ ತಂಡದ ಆಟ ನಡೆಯಲಿಲ್ಲ. ಸಂಕ್ಷಿಪ್ತ ಸ್ಕೋರು: ಬಾಂಗ್ಲಾದೇಶ: 43 ಓವರ್‌ಗಳಲ್ಲಿ 152 (ಫರ್ಜಾನಾ ಹಕ್ 27, ನಿಜಾರ್ ಸುಲ್ತಾನಾ 39, ಅಮನ್‌ಜ್ಯೋತ್ ಕೌರ್ 31ಕ್ಕೆ4, ದೇವಿಕಾ ವೈದ್ಯ 36ಕ್ಕೆ2) ಭಾರತ: 35.5 ಓವರ್‌ಗಳಲ್ಲಿ 113 (ಯಷ್ಟಿಕಾ ಭಾಟಿಯಾ 15, ದೀಪ್ತಿ ಶರ್ಮಾ 20, ಅಮನ್‌ಜ್ಯೋತ್ ಕೌರ್ 15, ಮರೂಫಾ ಅಕ್ತರ್ 29ಕ್ಕೆ4, ರಬಿಯಾ ಖಾನ್ 30ಕ್ಕೆ3) ಫಲಿತಾಂಶ: ಬಾಂಗ್ಲಾದೇಶ ತಂಡಕ್ಕೆ 40 ರನ್‌ ಜಯ(ಡಕ್ವರ್ಥ್‌ ಲೂಯಿಸ್ ನಿಯಮದನ್ವಯ) ಮೂರು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.