ಹೋರಾಟನಿರತರಿಗೆ ಪದಕ ಸಮರ್ಪಿಸಿದ ಸಂಗೀತಾ ನವದೆಹಲಿ (ಪಿಟಿಐ): ಕುಸ್ತಿಪಟು ಸಂಗೀತಾ ಫೋಗಟ್ ಅವರು ಹಂಗರಿಯಲ್ಲಿ ನಡೆದ ಅಂತರರಾಷ್ಟ್ರೀಯ ರ‍್ಯಾಂಕಿಂಗ್ ಸರಣಿ ಕುಸ್ತಿಯಲ್ಲಿ ಗೆದ್ದ ಕಂಚಿನ ಪದಕವನ್ನು ಮಹಿಳಾ ದೌರ್ಜನ್ಯ ವಿರೋಧಿ ಹೋರಾಟಗಾರರಿಗೆ ಸಮರ್ಪಿಸಿದ್ದಾರೆ. ಭಾರತ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‌ಐ) ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂದು ಆರೋಪಿಸಿ ಖ್ಯಾತನಾಮ ಕುಸ್ತಿಪಟುಗಳು ಈಚೆಗೆ ಧರಣಿ ನಡೆಸಿದ್ದರು. ಅದರಲ್ಲಿ ಸಂಗೀತಾ ಹಾಗೂ ಅವರ ಪತಿ, ಟೋಕಿಯೊ ಒಲಿಂಪಿಕ್ಸ್ ಪದಕವಿಜೇತ ಬಜರಂಗ್ ಪೂನಿಯಾ ಕೂಡ ಮುಂಚೂಣಿಯಲ್ಲಿದ್ದರು. ‘ತಾವೆಲ್ಲರೂ ಕಳಿಸುತ್ತಿರುವ ಶುಭಸಂದೇಶಗಳಿಂದ ಸಂತೋಷವಾಗಿದೆ. ಅತ್ಯಂತ ಭಾವುಕಳಾಗಿರುವೆ. ನಿಮಗೆಲ್ಲರಿಗೂ ಧನ್ಯವಾದಗಳು. ಈ ಪದಕ ನನ್ನದಷ್ಟೇ ಅಲ್ಲ. ನಿಮಗೆಲ್ಲರಿಗೂ ಸೇರಿದ್ದು‘ ಎಂದು ಸಂಗೀತಾ ಟ್ವೀಟ್ ಮಾಡಿದ್ದಾರೆ. ‘ವಿಶ್ವದಾದ್ಯಂತ ಮಹಿಳೆಯರ ಶೋಷಣೆಗಳ ವಿರುದ್ಧ ಹೋರಾಡುತ್ತಿರುವ ಮಹಿಳೆಯರಿಗೆ ಪದಕ ಅರ್ಪಿಸಿದ್ದೇನೆ‘ ಎಂದೂ ಬರೆದಿದ್ದಾರೆ. ಶನಿವಾರ ಬುಡಾಪೆಸ್ಟ್‌ನಲ್ಲಿ ನಡೆದ ಚಾಂಪಿಯನ್‌ಷಿಪ್‌ನ ನಾನ್ ಒಲಿಂಪಿಕ್ ವಿಭಾಗದ 59 ಕೆ.ಜಿ. ವಿಭಾಗದಲ್ಲಿ ಅವರು ಕಂಚು ಜಯಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.