ಟೆಸ್ಟ್ ಕ್ರಿಕೆಟ್: ಭಾರತ ತಂಡಕ್ಕೆ ಬೃಹತ್‌ ಮುನ್ನಡೆ ರೊಸೆಯು, ಡಾಮಿನಿಕಾ: ಪದಾರ್ಪಣೆಯ ಟೆಸ್ಟ್‌ನಲ್ಲಿಯೇ ಶತಕ ಬಾರಿಸಿದ ಯಶಸ್ವಿ ಜೈಸ್ವಾಲ್ ಮತ್ತು ವಿರಾಟ್ ಕೊಹ್ಲಿ ಅವರ ಜೊತೆಯಾಟದ ಬಲದಿಂದ ಭಾರತ ತಂಡವು ವೆಸ್ಟ್ ಇಂಡೀಸ್ ಎದುರಿನ ಮೊದಲ ಟೆಸ್ಟ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಬೃಹತ್ ಮೊತ್ತ ಗಳಿಸಿತು. ಪಂದ್ಯದ ಮೂರನೇ ದಿನವಾದ ಶುಕ್ರವಾರ, ಊಟದ ವಿರಾಮದ ಬಳಿಕ ಭಾರತ ತಂಡವು 5 ವಿಕೆಟ್‌ಗಳಿಗೆ 421 ರನ್ ಗಳಿಸಿ ಡಿಕ್ಲೇರ್‌ ಮಾಡಿಕೊಂಡಿತು. ಈ ಮೂಲಕ ಒಟ್ಟು 271 ರನ್‌ಗಳ ಮುನ್ನಡೆ ಸಾಧಿಸಿತು. ಎರಡನೇ ಇನಿಂಗ್ಸ್‌ ಆರಂಭಿಸಿರುವ ವಿಂಡೀಸ್‌ ತಂಡ ಚಹಾ ವಿರಾಮಕ್ಕೆ ಅಲ್ಪ ಮುನ್ನ 11 ಓವರ್‌ಗಳಲ್ಲಿ 1 ವಿಕೆಟ್‌ಗೆ 12 ರನ್‌ ಗಳಿಸಿತ್ತು. ಇದಕ್ಕೂ ಮುನ್ನ ಜೈಸ್ವಾಲ್‌ ಮತ್ತು ವಿರಾಟ್ ಕೊಹ್ಲಿ (76 ರನ್‌, 182 ಎ. 4X5) ಅವರ ಆಟದ ನೆರವಿನಿಂದ ಭಾರತದ ಮೊದಲ ಇನಿಂಗ್ಸ್‌ ಮತ್ತಷ್ಟು ಬೆಳೆಯಿತು. ಎರಡನೇ ದಿನವಾದ ಗುರುವಾರ ಚೊಚ್ಚಲ ಶತಕ ಗಳಿಸಿದ್ದ ಜೈಸ್ವಾಲ್ ಅವರು ರೋಹಿತ್ ಶರ್ಮಾ ಜೊತೆಗೆ ಮೊದಲ ವಿಕೆಟ್‌ಗೆ 229 ರನ್ ಪೇರಿಸಿದ್ದರು. ಶುಭಮನ್ ಗಿಲ್ ಅವರು ದೊಡ್ಡ ಇನಿಂಗ್ಸ್‌ ಆಡಲು ಬೌಲರ್ ಜೊನೆಲ್ ವಾರಿಕನ್ ಅವಕಾಶವನ್ನೇ ನೀಡಲಿಲ್ಲ. 6 ರನ್ ಗಳಿಸಿದ ಗಿಲ್ ಔಟಾದರು . ಕ್ರೀಸ್‌ಗೆ ಬಂದ ವಿರಾಟ್ ಕೊಹ್ಲಿ ಅವರೂ ಯಶಸ್ವಿಗೇ ಹೆಚ್ಚು ಅವಕಾಶ ನೀಡಿದರು. ಒಂದು ಹಂತದಲ್ಲಿ ಯಶಸ್ವಿ ದ್ವಿಶತಕ ಪೂರೈಸುವ ಭರವಸೆ ಮೂಡಿಸಿದ್ದರು. ಆದರೆ, ಯಶಸ್ವಿ (171; 387ಎ, 4X16, 6X1) ಅವರಿಗೆ ಅದೃಷ್ಟ ಜೊತೆಗೂಡಲಿಲ್ಲ. ಅಲ್ಜರಿ ಜೋಸೆಫ್ ಎಸೆತವನ್ನು ಆಡುವ ಭರದಲ್ಲಿ ಅವರು ಜೊಶುವಾ ಡಿ ಸಿಲ್ವಾ ಕ್ಯಾಚಿತ್ತರು. ಯಶಸ್ವಿ ಮತ್ತು ವಿರಾಟ್ ಮೂರನೇ ವಿಕೆಟ್ ಜೊತೆಯಾಟದಲ್ಲಿ 110 ರನ್ ಸೇರಿಸಿದರು. ಯಶಸ್ವಿ ಔಟಾದ ನಂತರ ವಿರಾಟ್ ರನ್‌ ಗಳಿಕೆಯ ಹೊಣೆ ಹೊತ್ತರು. ಅನುಭವಿ ಅಜಿಂಕ್ಯ ರಹಾನೆ ಕೇವಲ ಮೂರು ರನ್ ಗಳಿಸಿ ಔಟಾದರು. ಕೊಹ್ಲಿ ಜೊತೆಗೂಡಿದ ಜಡೇಜ (ಔಟಾಗದೆ 37) ಇನಿಂಗ್ಸ್‌ಗೆ ಬಲ ತುಂಬಿದರು. ಕಾರ್ನ್‌ವಾಲ್‌ ಎಸೆತದಲ್ಲಿ ವಿರಾಟ್ ಔಟಾದರು. ಅದಾದ ಅಲ್ಪ ಸಮಯದಲ್ಲಿ ರೋಹಿತ್‌ ಅವರು ಇನಿಂಗ್ಸ್‌ ಡಿಕ್ಲೇರ್‌ ಮಾಡಿದರು. ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ವೆಸ್ಟ್ ಇಂಡೀಸ್: 64.3 ಓವರ್‌ಗಳಲ್ಲಿ 150. ಭಾರತ: 152.2 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 421 ಡಿಕ್ಲೇರ್ಡ್‌ (ಯಶಸ್ವಿ ಜೈಸ್ವಾಲ್ 171, ವಿರಾಟ್ ಕೊಹ್ಲಿ 76, ರವೀಂದ್ರ ಜಡೇಜ ಔಟಾಗದೆ 37, ಇಶಾನ್‌ ಕಿಶನ್‌ ಔಟಾಗದೆ 1, ಕೆಮಾರ್ ರೋಚ್ 50ಕ್ಕೆ1, ಅಲ್ಜರಿ ಜೋಸೆಫ್ 80ಕ್ಕೆ1) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.