ಮಹಿಳಾ ಕ್ರಿಕೆಟ್‌: ಭಾರತ–ಬಾಂಗ್ಲಾ ಅಂತಿಮ ಪಂದ್ಯ ‘ಟೈ’ ಮೀರ್‌ಪುರ : ಕೊನೆಯಲ್ಲಿ ಬೆನ್ನುಬೆನ್ನಿಗೆ ವಿಕೆಟ್‌ಗಳನ್ನು ಕಳೆದುಕೊಂಡ ಭಾರತ ಮಹಿಳಾ ತಂಡದವರು ಬಾಂಗ್ಲಾದೇಶ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ ಗೆಲುವಿನ ಅವಕಾಶ ಕಳೆದುಕೊಂಡು, ‘ಟೈ‘ಗೆ ತೃಪ್ತಿಪಟ್ಟುಕೊಂಡರು. ಶನಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಆತಿಥೇಯ ತಂಡ 50 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 225 ರನ್‌ ಗಳಿಸಿತು. ಹರ್ಮನ್‌ಪ್ರೀತ್‌ ಕೌರ್‌ ಬಳಗ 49.3 ಓವರ್‌ಗಳಲ್ಲಿ 225 ರನ್‌ಗಳಿಗೆ ಆಲೌಟಾಯಿತು. ಇದರೊಂದಿಗೆ ಮೂರು ಪಂದ್ಯಗಳ ಸರಣಿ 1–1 ರಿಂದ ಸಮಬಲದಲ್ಲಿ ಕೊನೆಗೊಂಡಿತು. ಸ್ಮೃತಿ ಮಂದಾನ (59 ರನ್‌, 85 ಎ.) ಮತ್ತು ಹರ್ಲೀನ್‌ ಡಿಯೊಲ್ (77 ರನ್‌, 108 ಎ.) ಅವರ ಅರ್ಧಶತಕಗಳ ನೆರವಿನಿಂದ ಭಾರತ ತಂಡ ಸುಲಭ ಗೆಲುವಿನತ್ತ ಮುನ್ನಡೆದಿತ್ತು. ಆದರೆ ಕೊನೆಯಲ್ಲಿ ಒತ್ತಡಕ್ಕೆ ಒಳಗಾಗಿ ಗೆಲುವಿನ ಅವಕಾಶ ಕೈಚೆಲ್ಲಿತು. ಭಾರತದ ಗೆಲುವಿಗೆ ಅಂತಿಮ 19 ಎಸೆತಗಳಲ್ಲಿ 10 ರನ್‌ಗಳು ಬೇಕಿದ್ದವು. ಕೈಯಲ್ಲಿ ನಾಲ್ಕು ವಿಕೆಟ್‌ಗಳು ಇದ್ದವು. ಆದರೆ 16 ಎಸೆತಗಳ ಅಂತರದಲ್ಲಿ ನಾಲ್ಕೂ ವಿಕೆಟ್‌ಗಳನ್ನು ಕಳೆದುಕೊಂಡಿತು. ಜೆಮಿಮಾ ರಾಡ್ರಿಗಸ್‌ (ಅಜೇಯ 33) ನಡೆಸಿದ ಹೋರಾಟಕ್ಕೆ ಫಲ ದೊರೆಯಲಿಲ್ಲ. ಫರ್ಜಾನಾ ಹಕ್‌ ಶತಕ: ಮೊದಲು ಬ್ಯಾಟ್‌ ಮಾಡಿದ ಬಾಂಗ್ಲಾ ತಂಡದ ಪರ ಆರಂಭಿಕ ಬ್ಯಾಟರ್‌ ಫರ್ಜಾನಾ ಹಕ್ (107 ರನ್‌, 160 ಎ.) ಅವರು ಶತಕದ ಮೂಲಕ ಮಿಂಚಿದರು. ಏಕದಿನ ಕ್ರಿಕೆಟ್‌ನಲ್ಲಿ ಶತಕ ಗಳಿಸಿದ ಬಾಂಗ್ಲಾದ ಮೊದಲ ಆಟಗಾರ್ತಿ ಎಂಬ ಗೌರವ ಅವರಿಗೆ ಒಲಿಯಿತು. ಶಮೀಮಾ ಸುಲ್ತಾನಾ (52) ಮತ್ತು ಫರ್ಜಾನಾ ಅವರು ಮೊದಲ ವಿಕೆಟ್‌ಗೆ 93 ರನ್‌ ಸೇರಿಸಿ ತಂಡಕ್ಕೆ ಉತ್ತಮ ಆರಂಭ ನೀಡಿದರು. ಸಂಕ್ಷಿಪ್ತ ಸ್ಕೋರ್‌: ಬಾಂಗ್ಲಾದೇಶ 50 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 225 (ಶಮೀಮಾ ಸುಲ್ತಾನಾ 52, ಫರ್ಜಾನಾ ಹಕ್‌ 107, ನಿಗಾರ್‌ ಸುಲ್ತಾನಾ 24, ಸ್ನೇಹ ರಾಣಾ 45ಕ್ಕೆ 2) ಭಾರತ 49.3 ಓವರ್‌ಗಳಲ್ಲಿ 225 (ಸ್ಮೃತಿ ಮಂದಾನ 59, ಹರ್ಲೀನ್‌ ಡಿಯೊಲ್ 77, ಜೆಮಿಮಾ ರಾಡ್ರಿಗಸ್‌ ಔಟಾಗದೆ 33, ನಹಿದಾ ಅಖ್ತರ್‌ 37ಕ್ಕೆ 3, ಮರೂಫಾ ಅಖ್ತರ್‌ 55ಕ್ಕೆ 2) ಫಲಿತಾಂಶ: ಪಂದ್ಯ ‘ಟೈ’ ಕೆಟ್ಟ ಅಂಪೈರಿಂಗ್‌: ಹರ್ಮನ್‌ ಟೀಕೆ ಅಂತಿಮ ಏಕದಿನ ಪಂದ್ಯದಲ್ಲಿ ಅಂಪೈರಿಂಗ್‌ ತೀರಾ ಕೆಟ್ಟದಾಗಿತ್ತು ಎಂದು ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಅವರು ಅಸಮಾಧಾನ ಹೊರಹಾಕಿದ್ದಾರೆ. 'ಈ ಪಂದ್ಯದಲ್ಲಿ ಅಂ‍ಪೈರಿಂಗ್ ನಮಗೆ ತುಂಬಾ ಅಚ್ಚರಿ ಉಂಟುಮಾಡಿತು. ಮುಂದಿನ ಬಾರಿ ಬಾಂಗ್ಲಾ ಪ್ರವಾಸಕ್ಕೆ ಬರುವಾಗ ಈ ರೀತಿಯ ಅಂಪೈರಿಂಗ್‌ಅನ್ನು ಎದುರಿಸಬೇಕು ಎಂಬ ಅರಿವು ಇರಬೇಕು. ಮಾತ್ರವಲ್ಲ ಅದಕ್ಕೆ ತಕ್ಕ ಸಿದ್ಧತೆಯೊಂದಿಗೆ ಬರಬೇಕು’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳೀಯರಾದ ಮುಹಮ್ಮದ್‌ ಕಮರುಝಮಾನ್ ಮತ್ತು ತನ್ವೀರ್‌ ಅಹ್ಮದ್‌ ಅವರು ಈ ಪಂದ್ಯದಲ್ಲಿ ಅಂಪೈರ್‌ಗಳಾಗಿ ಕಾರ್ಯನಿರ್ವಹಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.