ಮಹಾರಾಜ ಟ್ರೋಫಿ ಹರಾಜು: ಖ್ಯಾತನಾಮರನ್ನು ಹಿಂದಿಕ್ಕಿದ ಅಭಿನವ್ ಮನೋಹರ್‌ ಬೆಂಗಳೂರು: ಬೀಸು ಹೊಡೆತಗಳ ಆಟಗಾರ ಅಭಿನವ್ ಮನೋಹರ್ ಶನಿವಾರ ನಡೆದ ಕೆಎಸ್‌ಸಿಎ ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಯ ಆಟಗಾರರ ಹರಾಜಿನಲ್ಲಿ ಖ್ಯಾತನಾಮರನ್ನು ಹಿಂದಿಕ್ಕಿ ಅತ್ಯಧಿಕ ಮೌಲ್ಯ ಗಳಿಸಿದರು. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯಲ್ಲಿ ಆಡಿರುವ ಬೆಂಗಳೂರಿನ ಅಭಿನವ್ ಅವರನ್ನು ಶಿವಮೊಗ್ಗ ಲಯನ್ಸ್ ತಂಡವು ₹ 15 ಲಕ್ಷ ಮೌಲ್ಯ ನೀಡಿ ಖರೀದಿಸಿತು. ಕಳೆದ ಐಪಿಎಲ್‌ನಲ್ಲಿ ಅವರು ಗುಜರಾತ್ ಟೈಟನ್ಸ್ ತಂಡದಲ್ಲಿ ಆಡಿದ್ದರು. 28 ವರ್ಷದ ಬಲಗೈ ಬ್ಯಾಟರ್ ಅಭಿನವ್ ಮೂರು ಲಿಸ್ಟ್ ಎ ಮತ್ತು 29 ಟಿ20 ಪಂದ್ಯಗಳನ್ನು ಆಡಿದ್ದಾರೆ. ಹರಾಜು ಪ್ರಕ್ರಿಯೆಯಲ್ಲಿ ಅಭಿನವ್ ಮನೋಹರ್ ಅವರನ್ನು ಖರೀದಿಸಲು ಶಿವಮೊಗ್ಗ ಮತ್ತು ಹುಬ್ಬಳ್ಳಿ ಟೈಗರ್ಸ್ ತಂಡಗಳ ನಡುವೆ ತುರುಸಿನ ಪೈಪೋಟಿ ನಡೆಯಿತು. ಶಿವಮೊಗ್ಗ ಮೇಲುಗೈ ಸಾಧಿಸಿತು. ಈ ಹಾದಿಯಲ್ಲಿ ಅಭಿನವ್ ಅವರು ಭಾರತ ತಂಡದ ಆರಂಭಿಕ ಬ್ಯಾಟರ್ ಆಗಿ ಆಡಿರುವ ಮಯಂಕ್ ಅಗರವಾಲ್ ಅವರನ್ನೂ ಹಿಂದಿಕ್ಕಿದರು. ಕರ್ನಾಟಕ ತಂಡದ ನಾಯಕರೂ ಆಗಿರುವ ಮಯಂಕ್ ₹ 14 ಲಕ್ಷ ಮೌಲ್ಯಕ್ಕೆ ಬೆಂಗಳೂರು ಬ್ಲಾಸ್ಟರ್ಸ್ ತಂಡಕ್ಕೆ ಸೇರ್ಪಡೆಯಾದರು. ಐಪಿಎಲ್‌ನಲ್ಲಿ ಮಿಂಚಿರುವ ದೇವದತ್ತ ಪಡಿಕ್ಕಲ್ ಅವರನ್ನು ಗುಲ್ಬರ್ಗ ಮಿಸ್ಟಿಕ್ಸ್‌ ತಂಡವು ₹ 13 ಲಕ್ಷಕ್ಕೆ ತನ್ನದಾಗಿಸಿಕೊಂಡಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಆಡಿರುವ ಮಧ್ಯಮವೇಗಿ ವೈಶಾಖ ವಿಜಯಕುಮಾರ್ (₹ 8.80ಲಕ್ಷ) ಕೂಡ ಗುಲ್ಬರ್ಗ ಸೇರಿದರು. ಮೈಸೂರು ವಾರಿಯರ್ಸ್ ತಂಡವು ಗಾಯದಿಂದ ಚೇತರಿಸಿಕೊಂಡಿರುವ ವೇಗಿ ಪ್ರಸಿದ್ಧ ಕೃಷ್ಣ (₹ 7.40 ಲಕ್ಷ), ಮೈಸೂರಿನ ಜಗದೀಶ್ ಸುಚೇತ್ (₹ 8.4 ಲಕ್ಷ) ಹಾಗೂ ಅನುಭವಿ ಬ್ಯಾಟರ್ ಕರುಣ್ ನಾಯರ್ (6.8 ಲಕ್ಷ) ಅವರನ್ನು ಖರೀದಿಸಿತು. ಮನೀಷ್ ಪಾಂಡೆ ಅವರನ್ನು ಹುಬ್ಬಳ್ಳಿ ಟೈಗರ್ಸ್ ತಂಡವು ₹ 10.6 ಲಕ್ಷ ಮೌಲ್ಯ ನೀಡಿ ತನ್ನದಾಗಿಸಿಕೊಂಡಿತು. ಆಲ್‌ರೌಂಡರ್ ಮನೋಜ್ ಬಾಂಢಗೆ ಅವರನ್ನು ಸೆಳೆದುಕೊಳ್ಳಲು ಮೈಸೂರು ಮತ್ತು ಗುಲ್ಬರ್ಗ ತಂಡಗಳ ನಡುವೆ ಅಪಾರ ಪೈಪೋಟಿ ಏರ್ಪಟ್ಟಿತ್ತು. ಕಡೆಗೂ ಮೈಸೂರು ತಂಡವು ₹ 9 ಲಕ್ಷ ಮೌಲ್ಯಕ್ಕೆ ಮನೋಜ್ ಅವರನ್ನು ತನ್ನದಾಗಿಸಿಕೊಂಡಿತು. ಕಳೆದ ಐಪಿಎಲ್‌ನಲ್ಲಿ ಮನೋಜ್ ಆರ್‌ಸಿಬಿ ತಂಡದಲ್ಲಿದ್ದರು. ಆದರೆ ಅವರು ಈ ಹರಾಜಿನಲ್ಲಿ ಬಿ ಗುಂಪಿನಲ್ಲಿದ್ದರು. ಚಿನ್ನಸ್ವಾಮಿ ಕ್ರೀಡಾಂಗಣದ ಸಭಾಭವನದಲ್ಲಿ ನಡೆದ ಹರಾಜು ಪ್ರಕ್ರಿಯೆಯನ್ನು 700 ಆಟಗಾರರು ಸ್ಪರ್ಧೆಯಲ್ಲಿದ್ದರು. ಒಟ್ಟು ಆರು ಫ್ರ್ಯಾಂಚೈಸಿಗಳು ಭಾಗವಹಿಸಿದ್ದವು. ಪ್ರತಿ ತಂಡವೂ 18 ಆಟಗಾರರನ್ನು ಖರೀದಿಸಿತು. ಒಟ್ಟು ನಾಲ್ಕು ಗುಂಪುಗಳಲ್ಲಿ ಆಟಗಾರರನ್ನು ವಿಂಗಡಿಸಲಾಗಿದೆ. ಎ ಗುಂಪಿನಲ್ಲಿ ಭಾರತ ಮತ್ತು ಐಪಿಎಲ್‌ನಲ್ಲಿ ಆಡಿರುವ ಆಟಗಾರರು ಇದ್ದರು. ಬಿ ಗುಂಪಿನಲ್ಲಿ ಬಿಸಿಸಿಐ ಆಯೋಜಿತ ರಾಜ್ಯ ಟೂರ್ನಿಗಳಾದ ರಣಜಿ ಟ್ರೋಫಿ, ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿ ಮತ್ತು ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಗಳಲ್ಲಿ ಆಡಿದವರು ಇದ್ದರು. ಸಿ ಗುಂಪಿನಲ್ಲಿ ಬಿಸಿಸಿಐನ ಇನ್ನಿತರ ಟೂರ್ನಿಗಳಲ್ಲಿ ಆಡಿದ ಆಟಗಾರರು ಹಾಗೂ ಡಿ ಗುಂಪಿನಲ್ಲಿ ಕೆಎಸ್‌ಸಿಎನಲ್ಲಿ ನೋಂದಾಯಿತ ಆಟಗಾರರು ಸ್ಥಾನ ಪಡೆದಿದ್ದರು. ಆಗಸ್ಟ್ 13 ರಿಂದ ಟೂರ್ನಿ ಆರಂಭವಾಗಲಿದೆ. ಬೆಂಗಳೂರಿನಲ್ಲಿ ಪಂದ್ಯಗಳು ನಡೆಯಲಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.