ಸಾಯಿ ಸುದರ್ಶನ್ ಶತಕ: ಭಾರತ ‘ಎ’ಗೆ ಮಣಿದ ಪಾಕ್ ಕೊಲಂಬೊ: ರಾಜ್ಯವರ್ಧನ್ ಹಂಗರ್ಗೇಕರ್‌ ಅವರ ಐದು ವಿಕೆಟ್‌ಗಳ ಸಾಧನೆಯ ನಂತರ ಉದಯೋನ್ಮುಖ ಬ್ಯಾಟರ್‌ ಸಾಯಿ ಸುದರ್ಶನ್‌ ಅಜೇಯ ಶತಕ ದಾಖಲಿಸಿದರು. ಇವರಿಬ್ಬರ ಅಮೋಘ ಪ್ರದರ್ಶನದ ನೆರವಿನಿಂದ ಭಾರತ ‘ಎ’ ತಂಡ ಎಮರ್ಜಿಂಗ್ ಏಷ್ಯಾಕಪ್‌ ಕ್ರಿಕೆಟ್ ಟೂರ್ನಿಯಲ್ಲಿ ಬುಧವಾರ ಪಾಕಿಸ್ತಾನ ‘ಎ’ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿತು. ಭಾರತ ಲೀಗ್‌ನಲ್ಲಿ ಆಡಿದ ಎಲ್ಲ ಪಂದ್ಯಗಳಲ್ಲೂ ಜಯಗಳಿಸಿದಂತಾಗಿದೆ. ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಪಾಕಿಸ್ತಾನ 205 ರನ್‌ಗಳಿಗೆ ಆಲೌಟ್ ಆಯಿತು. ಹಂಗರ್ಗೇಕರ್ 42 ರನ್ನಿಗೆ 5 ವಿಕೆಟ್ ಪಡೆದರು. ನಂತರ ಸುದರ್ಶನ್ 110 ಎಸೆತಗಳಲ್ಲಿ 3 ಸಿಕ್ಸರ್‌, 10 ಬೌಂಡರಿಗಳಿದ್ದ 104 ರನ್ ಬಾರಿಸಿದರು. ಭಾರತ ಈ ಸಾಧಾರಣ ಮೊತ್ತವನ್ನು 36.4 ಓವರುಗಳಲ್ಲೇ 2 ವಿಕೆಟ್‌ ಕಳೆದುಕೊಂಡು ದಾಟಿತು. ಇದು ಸುದರ್ಶನ್‌ಗೆ ಲಿಸ್ಟ್‌ ಎ ಪಂದ್ಯಗಳಲ್ಲಿ ನಾಲ್ಕನೇ ಶತಕ. ಅದನ್ನು ವೇಗದ ಬೌಲರ್‌ ಶಹನವಾಜ್ ಬೌಲಿಂಗ್‌ನಲ್ಲಿ ಬೆನ್ನು ಬೆನ್ನಿಗೆ ಎರಡು ಸಿಕ್ಸರ್‌ ಎತ್ತುವ ಮೂಲಕ ಆಚರಿಸಿದರು. ಕನ್ನಡಿಗ ನಿಕಿನ್‌ ಜೋಸ್‌ (64 ಎಸೆತಗಳಲ್ಲಿ 53) ಜೊತೆ ಸುದರ್ಶನ್ ಎರಡನೇ ವಿಕೆಟ್‌ಗೆ 99 ರನ್‌ ಸೇರಿಸಿದರು. ನಾಯಕ ಯಶ್ ಧುಲ್ (19 ಎಸೆತಗಳಲ್ಲಿ 21) ಅವರು ಸುದರ್ಶನ್‌ಗೆ ಶತಕ ದಾಟಲು ಅವಕಾಶ ನೀಡಿದರು. ಸ್ಕೋರುಗಳು: ಪಾಕಿಸ್ತಾನ ‘ಎ’: 48 ಓವರುಗಳಲ್ಲಿ 205 (ಖಾಸಿಂ ಅಕ್ರಂ 48; ರಾಜ್ಯವರ್ಧನ್ ಹಂಗರ್ಗೇಕರ್ 42ಕ್ಕೆ5, ಮಾನವ್ ಸುತಾರ್ 36ಕ್ಕೆ3); ಭಾರತ ‘ಎ’: 36.4 ಓವರುಗಳಲ್ಲಿ 2 ವಿಕೆಟ್‌ಗೆ 210 (ಸಾಯಿ ಸುದರ್ಶನ್ ಔಟಾಗದೇ 104, ನಿಕಿನ್‌ ಜೋಸ್ 53, ಯಶ್ ಧುಲ್‌ ಔಟಾಗದೇ 21). ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.