500ನೇ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯ ಆಡಲಿರುವ ರನ್ ಮೆಷಿನ್ ವಿರಾಟ್ ಕೊಹ್ಲಿ ಪೋರ್ಟ್ ಆಫ್ ಸ್ಪೇನ್ [ಟ್ರಿನಿಡಾಡ್ ಮತ್ತು ಟೊಬಾಗೊ]: ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯ ಎರಡನೇ ಮತ್ತು ಅಂತಿಮ ಟೆಸ್ಟ್‌ನಲ್ಲಿ ಮೈದಾನಕ್ಕಿಳಿಯುತ್ತಿರುವ ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಇಂದು ಇತಿಹಾಸ ಬರೆಯಲಿದ್ದಾರೆ. ಭಾರತೀಯ ಬ್ಯಾಟಿಂಗ್ ಆಧಾರಸ್ತಂಭವಾಗಿರುವ ಅವರು, ತಮ್ಮ ಕ್ರಿಕೆಟ್ ವೃತ್ತಿಜೀವನದ 500ನೇ ಅಂತರರಾಷ್ಟ್ರೀಯ ಪಂದ್ಯವನ್ನು ಇಂದು ಆಡಲಿದ್ದಾರೆ. 2008ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಪಣೆ ಮಾಡಿದ ವಿರಾಟ್ ಆಟದ ದಂತಕಥೆಯಾಗಿ ಬೆಳೆದಿದ್ದಾರೆ. ತಮ್ಮ ನಾಯಕತ್ವದಲ್ಲಿ ಅಂಡರ್-19 ವಿಶ್ವಕಪ್ ಗೆಲ್ಲುವ ಮೂಲಕ ಛಾಪು ಮೂಡಿಸಿದ್ದ ಅವರು, ಬಳಿಕ ಕ್ರಿಕೆಟ್ ಲೋಕದ ಹೆಮ್ಮರವಾಗಿ ಬೆಳೆದಿದ್ದಾರೆ. 110 ಟೆಸ್ಟ್ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿರುವ ಅವರು, 48.88 ಸರಾಸರಿಯಲ್ಲಿ 8,555 ರನ್ ಗಳಿಸಿದ್ದಾರೆ. 28 ಶತಕ ಮತ್ತು 29 ಅರ್ಧ ಶತಕಗಳನ್ನು ಸಿಡಿಸಿದ್ದಾರೆ, ಅಜೇಯ 254 ರನ್ ಅವರ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಭಾರತದ ಐದನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದು, ಆಧುನಿಕ ಕ್ರಿಕೆಟ್‌ನ ಶ್ರೇಷ್ಠ ಆಟಗಾರರಲ್ಲಿ ಒಬ್ಬರು. ವಿರಾಟ್ ಒಟ್ಟು ಏಳು ದ್ವಿಶತಕಗಳನ್ನು ಸಿಡಿಸಿದ್ದು, ಭಾರತೀಯ ಬ್ಯಾಟರ್‌ ಗಳಿಸಿದ ಗರಿಷ್ಠ ದ್ವಿಶಕಗಳಾಗಿವೆ. ವಿಶ್ವದಲ್ಲೇ ಅತಿ ಹೆಚ್ಚು 12 ದ್ವಿಶತಕಗಳನ್ನು ಆಸ್ಟ್ರೇಲಿಯಾದ ದಂತಕಥೆ ಡಾನ್ ಬ್ರಾಡ್‌ಮನ್ ಹೊಡೆದಿದ್ದಾರೆ. ವಿರಾಟ್ ಭಾರತದ ಯಶಸ್ವಿ ಟೆಸ್ಟ್ ನಾಯಕರಲ್ಲಿ ಒಬ್ಬರು. 68 ಟೆಸ್ಟ್ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿರುವ ಅವರು 40 ಪಂದ್ಯಗಳನ್ನು ಗೆದ್ದಿದ್ದಾರೆ, ಕೇವಲ 17ರಲ್ಲಿ ಸೋತಿದ್ದಾರೆ. 11 ಪಂದ್ಯ ಡ್ರಾ ಆಗಿವೆ. ವಿರಾಟ್ ನಾಯಕತ್ವದಲ್ಲಿ ಭಾರತ ತಂಡದ ಗೆಲುವಿನ ಸರಾಸರಿ ಶೇಕಡ 58.82. 34 ವರ್ಷ ವಯಸ್ಸಿನ ಅವರು ವೆಸ್ಟ್ ಇಂಡೀಸ್ ವಿರುದ್ಧ ಅತ್ಯುತ್ತಮ ಟೆಸ್ಟ್ ದಾಖಲೆಯನ್ನು ಹೊಂದಿದ್ದಾರೆ. 15 ಪಂದ್ಯಗಳಲ್ಲಿ 44.90 ಸರಾಸರಿಯಲ್ಲಿ 898 ರನ್ ಗಳಿಸಿದ್ದಾರೆ. ಇದರಲ್ಲಿ ಎರಡು ಶತಕ ಮತ್ತು ಆರು ಅರ್ಧಶತಕಗಳಿದ್ದವು. ಗರಿಷ್ಠ ಮೊತ್ತ 200. ವೆಸ್ಟ್‌ಇಂಡಿಸ್‌ ನೆಲದಲ್ಲಿ ಆಡಿದ 10 ಟೆಸ್ಟ್‌ಗಳಲ್ಲಿ ಅವರು 38.50 ಸರಾಸರಿಯಲ್ಲಿ 539 ರನ್ ಗಳಿಸಿದ್ದಾರೆ. ಒಂದು ಶತಕ ಮತ್ತು ಮೂರು ಅರ್ಧಶತಕಗಳನ್ನು ಗಳಿಸಿದ್ದಾರೆ, 274 ಅಂತರರಾಷ್ಟ್ರೀಯ ಏಕದಿನ ಪಂದ್ಯಗಳನ್ನು ಆಡಿರುವ ಅವರು, 57.32 ಸರಾಸರಿಯಲ್ಲಿ 12,898 ರನ್ ಕಲೆ ಹಾಕಿದ್ದಾರೆ. 46 ಶತಕ ಮತ್ತು 65 ಅರ್ಧಶತಕಗಳನ್ನು ಸಿಡಿಸಿದ್ದಾರೆ. 115 ಟಿ–20 ಪಂದ್ಯಗಳಿಂದ 52.73 ಸರಾಸರಿಯಲ್ಲಿ 4,008 ರನ್ ಸಿಡಿಸಿದ್ದಾರೆ. ಇದರಲ್ಲಿ 1 ಶತಕ, 36 ಅರ್ಧಶತಕಗಳಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.