ಮೊದಲ ಕ್ರಿಕೆಟ್‌ ಟೆಸ್ಟ್: ಸಂಯಮದ ಆಟವಾಡಿದ ಇಮಾಂ, ಪಾಕಿಸ್ತಾನಕ್ಕೆ 4 ವಿಕೆಟ್‌ ಜಯ ಗಾಲ್, ಶ್ರೀಲಂಕಾ: ಆರಂಭ ಆಟಗಾರ ಇಮಾಂ– ಉಲ್‌– ಹಕ್‌ ಅವರ ಅಜೇಯ 50 (84 ಎಸೆತ) ರನ್‌ಗಳ ನೆರವಿನಿಂದ ಪಾಕಿಸ್ತಾನ ತಂಡ ಮೊದಲ ಕ್ರಿಕೆಟ್‌ ಟೆಸ್ಟ್ ಪಂದ್ಯದ ಅಂತಿಮ ದಿನವಾದ ಗುರುವಾರ ಶ್ರೀಲಂಕಾ ತಂಡವನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸಿತು. 3 ವಿಕೆಟ್‌ಗೆ 48 ರನ್‌ಗಳೊಡನೆ ದಿನದಾಟ ಮುಂದುವರಿಸಿದ ಪ್ರವಾಸಿ ತಂಡ, ನಾಯಕ ಬಾಬರ್‌ ಆಜಂ ಅವರ ವಿಕೆಟ್‌ ಸೇರಿದಂತೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. 25 ರನ್‌ಗಳೊಡನೆ ಆಟ ಮುಂದುವರಿಸಿದ ಇಮಾಂ ಸಂಯಮದಿಂದ ಆಟವಾಡಿದರು. ಆಜಂ ಜೊತೆ ನಾಲ್ಕನೇ ವಿಕೆಟ್‌ಗೆ 41 ಮತ್ತು ಸಾವುದ್ ಶಕೀಲ್‌ ಐದನೇ ವಿಕೆಟ್‌ಗೆ 43 ರನ್‌ಗಳ ಎರಡು ಉಪಯುಕ್ತ ಜೊತೆಯಾಟಗಳಲ್ಲಿ ಭಾಗಿಯಾದರು. ಶಕೀಲ್‌ ಮೊದಲ ಇನಿಂಗ್ಸ್‌ನಲ್ಲಿ ಅಜೇಯ 208 ರನ್ ಗಳಿಸಿದ್ದರು. ಹೊಸ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ನ ಅಭಿಯಾನ ಆರಂಭಿಸಿರುವ ಪಾಕಿಸ್ತಾನ ಈ ಗೆಲುವಿನಿಂದ 12 ಪಾಯಿಂಟ್ಸ್‌ ಪಡೆಯಿತು. ಎಡಗೈ ಸ್ಪಿನ್ನರ್‌ ಪ್ರಭಾತ್‌ ಜಯಸೂರ್ಯ ನಾಲ್ಕು ವಿಕೆಟ್‌ ಪಡೆದರು. ಎರಡನೇ ಟೆಸ್ಟ್‌ ಜುಲೈ 24 ರಿಂದ ಕೊಲಂಬೊದಲ್ಲಿ ನಡೆಯಲಿದೆ. ಸ್ಕೋರುಗಳು: ಮೊದಲ ಇನಿಂಗ್ಸ್‌: ಶ್ರೀಲಂಕಾ: 312, ಪಾಕಿಸ್ತಾನ: 461; ಎರಡನೇ ಇನಿಂಗ್ಸ್‌: ಶ್ರೀಲಂಕಾ: 279, ಪಾಕಿಸ್ತಾನ: 32.5 ಓವರುಗಳಲ್ಲಿ 6 ವಿಕೆಟ್‌ಗೆ 133 (ಇಮಾಂ–ಉಲ್‌–ಹಕ್‌ ಔಟಾಗದೇ 50, ಬಾಬರ್ ಆಜಂ 24, ಸಾವುದ್ ಶಕೀಲ್‌ 30; ಪ್ರಭಾತ್ ಜಯಸೂರ್ಯ 56ಕ್ಕೆ4). ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.