ನಾಲ್ಕನೇ ಟೆಸ್ಟ್‌: ಮುನ್ನಡೆ ಪಡೆದ ಇಂಗ್ಲೆಂಡ್‌, ದ್ವಿಶತಕ ತಪ್ಪಿಸಿಕೊಂಡ ಕ್ರಾಲಿ ಮ್ಯಾಂಚೆಸ್ಟರ್‌: ಏಕದಿನ ಪಂದ್ಯದ ರೀತಿ ಆಡಿದ ಆರಂಭ ಆಟಗಾರ ಜಾಕ್‌ ಕ್ರಾಲಿ ಅವರ 189 ರನ್‌ಗಳ ಅಮೋಘ ಆಟದಿಂದ ಇಂಗ್ಲೆಂಡ್‌ ತಂಡ, ಆ್ಯಷಸ್‌ ಸರಣಿಯ ನಾಲ್ಕನೇ ಟೆಸ್ಟ್‌ನಲ್ಲಿ ಮೊದಲ ಇನಿಂಗ್ಸ್‌ ಮುನ್ನಡೆ ಪಡೆದಿದೆ. ಎರಡನೇ ದಿನವಾದ ಗುರುವಾರ 57 ಓವರುಗಳ ಆಟದ ನಂತರ ಇಂಗ್ಲೆಂಡ್‌ 3 ವಿಕೆಟ್‌ಗೆ 336 ರನ್‌ ಗಳಿಸಿ ಸುಸ್ಥಿತಿಯಲ್ಲಿದೆ. ಇದಕ್ಕೆ ಮೊದಲು ಆಸ್ಟ್ರೇಲಿಯಾ ತಂಡದ ಮೊದಲ ಇನಿಂಗ್ಸ್‌ 317 ರನ್‌ಗಳಿಗೆ ಕೊನೆಗೊಂಡಿತ್ತು. ಬೆನ್‌ ಡಕೆಟ್‌ (3) ಅವರನ್ನು ಬೇಗನೇ ಕಳೆದುಕೊಂಡ ಇಂಗ್ಲೆಂಡ್‌ ನಂತರ ಎರಡು ಬಿರುಸಿನ ಶತಕದ ಜೊತೆಯಾಟಗಳ ಮೂಲಕ ದಿಟ್ಟ ಉತ್ತರ ನೀಡಿತು. ಕ್ರಾಲಿ 182 ಎಸೆತಗಳನ್ನು ಎದುರಿಸಿ, 21 ಬೌಂಡರಿ, ಮೂರು ಭರ್ಜರಿ ಸಿಕ್ಸರ್‌ಗಳನ್ನು ಎತ್ತಿದರು. ಇದು ಅವರ ಮೂರನೇ ಶತಕ. ಓಲಿ ಪೋಪ್‌ ಅನುಪಸ್ಥಿತಿಯಲ್ಲಿ ಮೂರನೇ ಕ್ರಮಾಂಕಕ್ಕೆ ಬಡ್ತಿ ಪಡೆದ ಮೊಯಿನ್‌ ಅಲಿ (54) ಅವರೊಂದಿಗೆ ಕ್ರಾಲಿ ಎರಡನೇ ವಿಕೆಟ್‌ಗೆ 121 ರನ್‌ ಸೇರಿಸಿದರು. ಜೋ ರೂಟ್‌ ಅವರೊಡನೆ ಮೂರನೇ ವಿಕೆಟ್‌ ಜೊತೆಯಾಟದಲ್ಲಿ 206 ರನ್‌ಗಳು ಬಂದವು. ರೂಟ್‌ 83 ಎಸೆತಗಳಲ್ಲಿ ಒಂದು ಸಿಕ್ಸರ್‌, ಎಂಟು ಬೌಂಡರಿಗಳಿರುವ 77 ರನ್ ಗಳಿಸಿ ಆಡುತ್ತಿದ್ದರು. ಕ್ರಾಲಿ ಆರಂಭದಿಂದಲೇ ಆಕ್ರಮಣಕ್ಕಿಳಿದು 93 ಎಸೆತಗಳಲ್ಲೇ ಶತಕ ದಾಟಿದರು. ತಾತ್ಕಾಲಿಕ ಸ್ಪಿನ್ನರ್‌ಗಳಾದ ಟ್ರಾವಿಸ್‌ ಹೆಡ್‌ ಮತ್ತು ಮಿಚೆಲ್‌ ಮಾರ್ಷ್‌ ಅವರು ದಂಡನೆಗೆ ಒಳಗಾದರು. ಹೆಡ್‌ ಆರು ಓವರುಗಳಲ್ಲಿ 48 ರನ್‌ ನೀಡಿದರೆ, ಮಾರ್ಷ್‌ ಇಷ್ಟೇ ಓವರುಗಳಲ್ಲಿ 41 ರನ್ ನೀಡಿದರು. 20 ರನ್‌ಗಳಿದ್ದಾಗ ಕ್ರಾಲಿ ಅವರು ಗ್ರೀನ್‌ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯು ತೀರ್ಪು ಪಡೆದಿದ್ದರು. ಆದರೆ ಟಿವಿ ಪ್ರಸಾರದಲ್ಲಿ ಚೆಂಡು ಲೆಗ್‌ಸ್ಟಂಪ್‌ ಆಚೆ ಹೋಗುತ್ತಿರುವುದು ದೃಢಪಟ್ಟಿದ್ದರಿಂದ ಆಟ ಮುಂದುವರಿಸಿದರು. ಟೆಸ್ಟ್‌ಗೆ ನಿವೃತ್ತಿ ಘೋಷಿಸಿದ್ದು, ಈ ಸರಣಿಗೆ ಪುನರಾಗಮನ ಮಾಡಿದ್ದ ಮೊಯಿನ್‌ ಈ ಪಂದ್ಯದಲ್ಲಿ 3,000 ರನ್‌ ಪೂರೈಸಿದರು. ಅವರು ಮೂರು ಸಹಸ್ರ ರನ್ ಮತ್ತು 200 ವಿಕೆಟ್‌ ಪಡೆದ ಇಂಗ್ಲೆಂಡ್‌ನ ನಾಲ್ಕನೇ ಆಟಗಾರ ಎನಿಸಿದರು. ಇಯಾನ್‌ ಬೋಥಂ, ಆ್ಯಂಡ್ರೂ ಫ್ಲಿಂಟಾಫ್‌ ಮತ್ತು ಹಾಲಿ ಆಟಗಾರ ಸ್ಟುವರ್ಟ್‌ ಬ್ರಾಡ್‌ ಅವರು ಇತರ ಮೂವರು. ಕಮಿನ್ಸ್‌ ಬೌಲಿಂಗ್‌ನಲ್ಲಿ ಚೆಂಡು ಮೊಯಿನ್‌ ಅವರ ಬ್ಯಾಟಿನಂಚಿಗೆ ಮುತ್ತಿಕ್ಕಿ ‘ಗಲ್ಲಿ’ ಮೂಲಕ ಬೌಂಡರಿಗೆ ಧಾವಿಸುವ ಮೂಲಕ ಅವರು ಈ ಮೈಲಿಗಲ್ಲು ದಾಟಿದರು. ಇದಕ್ಕೆ ಮೊದಲು, ಬುಧವಾರ 8 ವಿಕೆಟ್‌ಗೆ 299 ರನ್‌ ಗಳಿಸಿದ್ದ ಆಸ್ಟ್ರೇಲಿಯಾ 7.2 ಓವರುಗಳ ಆಟದಲ್ಲಿ ಆಲೌಟ್‌ ಆಯಿತು. ವೇಗದ ಬೌಲರ್ ಕ್ರಿಸ್‌ ವೋಕ್ಸ್‌ 62 ರನ್ನಿಗೆ 5 ವಿಕೆಟ್‌ ಪಡೆದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.