ಎನ್‌ಸಿಎ ಅಭ್ಯಾಸ ಪಂದ್ಯ ಆಡಲಿರುವ ಬೂಮ್ರಾ ಬೆಂಗಳೂರು(ಪಿಟಿಐ): ವೇಗಿ ಜಸ್‌ಪ್ರೀತ್ ಬೂಮ್ರಾ ಮುಂಬರುವ ಐರ್ಲೆಂಡ್ ಪ್ರವಾಸಕ್ಕಾಗಿ ಭಾರತ ತಂಡದಲ್ಲಿ ಆಯ್ಕೆಗೆ ಲಭ್ಯರಾಗುವ ಮುನ್ನ ಎನ್‌ಸಿಎನಲ್ಲಿ ಅಭ್ಯಾಸ ಪಂದ್ಯಗಳನ್ನು ಆಡಲಿದ್ದಾರೆ. ವಿಕೆಟ್‌ಕೀಪರ್ ರಿಷಭ್ ಪಂತ್ ಕೂಡ ಚೇತರಿಸಿಕೊಂಡಿದ್ದು ನೆಟ್ಸ್‌ನಲ್ಲಿ ಬ್ಯಾಟಿಂಗ್ ಆರಂಭಿಸಿದ್ದಾರೆ. ಕೆಳಬೆನ್ನಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಮತ್ತು ಆರೈಕೆಯಿಂದಾಗಿ ಕಳೆದ ಹತ್ತು ತಿಂಗಳುಗಳಿಂದ ಬೂಮ್ರಾ ತಂಡದಿಂದ ಹೊರಗಿದ್ದಾರೆ. ಕನ್ನಡಿಗ ಪ್ರಸಿದ್ಧ ಕೃಷ್ಣ ಕೂಡ ಅದೇ ತರಹದ ಗಾಯದ ಆರೈಕೆಗಾಗಿ ಎನ್‌ಸಿಎನಲ್ಲಿ ಬೂಮ್ರಾ ಜೊತೆಗೆ ಇದ್ದಾರೆ. ‘ಇಬ್ಬರೂ ವೇಗಿಗಳು (ಬೂಮ್ರಾ ಮತ್ತು ಕೃಷ್ಣ) ತಮ್ಮ ಪುನಶ್ಚೇತನ ಪ್ರಕ್ರಿಯೆಯ ಅಂತಿಮ ಹಂತದಲ್ಲಿದ್ದಾರೆ. ನೆಟ್ಸ್‌ನಲ್ಲಿ ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದಾರೆ. ಆದ್ದರಿಂದ ಅವರು ಈಗ ಅಭ್ಯಾಸ ಪಂದ್ಯಗಳನ್ನು ಆಡಲು ಸಿದ್ಧರಾಗಿದ್ದಾರೆ. ಎನ್‌ಸಿಎ (ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ) ಪಂದ್ಯಗಳನ್ನು ಆಯೋಜಿಸಲಿದೆ‘ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಭಾರತ ತಂಡದ ವ್ಯವಸ್ಥಾಪಕರು ಮತ್ತು ಎನ್‌ಸಿಎ ವೈದ್ಯಕೀಯ ತಂಡವು ಟಿ20 ಮಾದರಿಯ ಪಂದ್ಯಗಳಲ್ಲಿ ಬೂಮ್ರಾ ಅವರ ಬೌಲಿಂಗ್ ಮತ್ತು ದೈಹಿಕ ಕ್ಷಮತೆಯನ್ನು ಅವಲೋಕನ ಮಾಡಲಿದೆ. ನಂತರ ಏಷ್ಯಾ ಕಪ್ ಟೂರ್ನಿಯಲ್ಲಿ ಆಡಲು ಅವರ ಸಾಮರ್ಥ್ಯವನ್ನು ಕೂಡ ಪರೀಕ್ಷೆಗೊಡ್ಡಲಾಗುವುದು. ಇದರೊಂದಿಗೆ ಮುಂಬರುವ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ ಅವರನ್ನು ಪರಿಗಣಿಸುವ ಕುರಿತು ಅವಲೋಕನ ನಡೆಯಲಿದೆ. ಅಲ್ಲದೇ ಬೌಂಡರಿಲೈನ್‌ ಫೀಲ್ಡಿಂಗ್ ಸಾಮರ್ಥ್ಯದ ಬಗ್ಗೆಯೂ ಪರೀಕ್ಷೆ ನಡೆಯಲಿದೆ. ಬೂಮ್ರಾ ಅವರನ್ನು ಐರ್ಲೆಂಡ್ ಪ್ರವಾಸಕ್ಕೆ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಅಭ್ಯಾಸ ಪಂದ್ಯಗಳಲ್ಲಿ ಅವರ ಆಟ ಮುಖ್ಯವಾಗಲಿದೆ. ರಾಹುಲ್, ಅಯ್ಯರ್‌ಗೆ ಇನ್ನಷ್ಟು ಸಮಯ: ಗಾಯಗೊಂಡು ಎನ್‌ಸಿಎನಲ್ಲಿ ಆರೈಕೆ ಪಡೆಯುತ್ತಿರುವ ಕೆ.ಎಲ್. ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಅವರು ಫಿಟ್ ಆಗಲು ಇನ್ನಷ್ಟು ಕಾಲ ಬೇಕಿದೆ. ಇಬ್ಬರು ಶಸ್ತ್ರಚಿಕಿತ್ಸೆಯ ನಂತರ ಉತ್ತಮವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ನೆಟ್ಸ್‌ನಲ್ಲಿ ಬ್ಯಾಟಿಂಗ್ ಅಭ್ಯಾಸ ಕೂಡ ನಡೆಸುತ್ತಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.