ಕೆಎಸ್‌ಸಿಎ ಮಹಾರಾಜ ಟ್ರೋಫಿ ಟಿ20: ಕಣದಲ್ಲಿ ಮಯಂಕ್, ಮನೀಷ್ ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು ಆಯೋಜಿಸಲಿರುವ ಮಹಾರಾಜ ಟ್ರೋಫಿ ಟಿ20 ಫ್ರ್ಯಾಂಚೈಸಿ ಲೀಗ್‌ ಟೂರ್ನಿಯಲ್ಲಿ ಆಡಲು ಆಟಗಾರರ ಹರಾಜು ಪ್ರಕ್ರಿಯೆ ಶನಿವಾರ ನಡೆಯಲಿದೆ. 700 ಆಟಗಾರರು ಈ ಪ್ರಕ್ರಿಯೆಯಲ್ಲಿ ಭಾಗವಹಿಸುವರು. ಖ್ಯಾತನಾಮ ಆಟಗಾರರಾದ ಮಯಂಕ್ ಅಗರವಾಲ್, ಮನೀಷ್ ಪಾಂಡೆ, ದೇವದತ್ತ ಪಡಿಕ್ಕಲ್, ಕರುಣ್ ನಾಯರ್, ಅಭಿನವ್ ಮನೋಹರ್, ಕೆ.ಸಿ. ಕಾರ್ಯಪ್ಪ, ಅಭಿಮನ್ಯು ಮಿಥುನ್, ಪ್ರವೀಣ್ ದುಬೆ, ರೋನಿತ್ ಮೋರೆ, ಶ್ರೇಯಸ್ ಗೋಪಾಲ್, ಜೆ. ಸುಚಿತ್, ಕೆ.ಪಿ. ಅಪ್ಪಣ್ಣ ಮತ್ತು ವೈಶಾಖ ವಿಜಯಕುಮಾರ್ ಕೂಡ ಈ ಪಟ್ಟಿಯಲ್ಲಿದ್ದಾರೆ. ಆಗಸ್ಟ್ 13ರಿಂದ ಟೂರ್ನಿಯು ಆರಂಭವಾಗಲಿದೆ. ಹೋದ ವರ್ಷದ ಚಾಂಪಿಯನ್ ಗುಲ್ಬರ್ಗ ಮಿಸ್ಟಿಕ್ಸ್, ರನ್ನರ್ಸ್ ಅಪ್ ಬೆಂಗಳೂರು ಬ್ಲಾಸ್ಟರ್ಸ್, ಮೈಸೂರು ವಾರಿಯರ್ಸ್ ಮತ್ತು ಹುಬ್ಬಳ್ಳಿ ಟೈಗರ್ಸ್ ತಂಡಗಳು ಆಟಗಾರರನ್ನು ಖರೀದಿಸಲಿವೆ. ಈ ಬಾರಿ ಎರಡು ಹೊಸ ಫ್ರ್ಯಾಂಚೈಸಿಗಳಾದ ಮಂಗಳೂರು ಡ್ರ್ಯಾಗನ್ಸ್ ಮತ್ತು ಶಿವಮೊಗ್ಗ ಲಯನ್ಸ್ ಕೂಡ ಕಣದಲ್ಲಿವೆ. ಪ್ರತಿ ಫ್ರ್ಯಾಂಚೈಸಿಯೂ ಗರಿಷ್ಠ ತಲಾ ₹ 50 ಲಕ್ಷ ಥೈಲಿ ಹೊಂದಿವೆ. ಒಟ್ಟು ನಾಲ್ಕು ಗುಂಪುಗಳಲ್ಲಿ ಆಟಗಾರರನ್ನು ವಿಂಗಡಿಸಲಾಗಿದೆ. ಎ ಗುಂಪಿನಲ್ಲಿ ಭಾರತ ಮತ್ತು ಐಪಿಎಲ್‌ನಲ್ಲಿ ಆಡಿರುವ ಆಟಗಾರರು ಇದ್ದಾರೆ. ಬಿ ಗುಂಪಿನಲ್ಲಿ ಬಿಸಿಸಿಐ ಆಯೋಜಿತ ರಾಜ್ಯ ಟೂರ್ನಿಗಳಾದ ರಣಜಿ ಟ್ರೋಫಿ, ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿ ಮತ್ತು ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಗಳಲ್ಲಿ ಆಡಿದವರು ಇರುತ್ತಾರೆ. ಸಿ ಗುಂಪಿನಲ್ಲಿ ಬಿಸಿಸಿಐನ ಇನ್ನಿತರ ಟೂರ್ನಿಗಳಲ್ಲಿ ಆಡಿದ ಆಟಗಾರರು ಹಾಗೂ ಡಿ ಗುಂಪಿನಲ್ಲಿ ಕೆಎಸ್‌ಸಿಎನಲ್ಲಿ ನೋಂದಾಯಿತ ಆಟಗಾರರು ಇದ್ದಾರೆ. ಪ್ರತಿ ತಂಡವೂ ಕನಿಷ್ಠ 16 ಹಾಗೂ ಗರಿಷ್ಠ 18 ಆಟಗಾರರನ್ನು ಆಯ್ಕೆ ಮಾಡಿಕೊಳ್ಳಬೇಕು. ಇದರಲ್ಲಿ ತಂಡವು ಪ್ರತಿನಿಧಿಸುವ ಕ್ರಿಕೆಟ್ ವಲಯದ ಇಬ್ಬರು ಆಟಗಾರರು ಇರುವುದು ಕಡ್ಡಾಯ. ’ಹೋದ ವರ್ಷದ ಅವೃತ್ತಿಯು ಯಶಸ್ವಿಯಾಗಿತ್ತು. ಬಹಳಷ್ಟು ಯುವ ಆಟಗಾರರಿಗೆ ಅವಕಾಶ ಸಿಕ್ಕಿತ್ತು. ಪ್ರತಿಭಾನ್ವಿತರಿಗೆ ವೇದಿಕೆ ಒದಗಿಸುವುದೇ ಈ ಟೂರ್ನಿಯ ಪ್ರಮುಖ ಉದ್ದೇಶವಾಗಿದೆ. ಕರ್ನಾಟಕದ ಮತ್ತಷ್ಟು ಆಟಗಾರರು ಪ್ರವರ್ಧಮಾನಕ್ಕೆ ಬರಲಿ ಎಂಬ ಆಶಯ ಈ ಬಾರಿಯೂ ಇದೆ. ಈ ಬಾರಿಯ ಹರಾಜು ಪ್ರಕ್ರಿಯೆಯಯಲ್ಲಿ ಏಳನೂರು ಆಟಗಾರರು ಲಭ್ಯರಿದ್ದಾರೆ‘ ಎಂದು ಮಹಾರಾಜ ಟ್ರೋಫಿ ಟೂರ್ನಿಯ ಕಮಿಷನರ್ ಹಾಗೂ ಕೆಎಸ್‌ಸಿಎ ಉಪಾಧ್ಯಕ್ಷರೂಆಗಿರುವ ಬಿ.ಕೆ. ಸಂಪತ್ ಕುಮಾರ್ ತಿಳಿಸಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಕೆಎಸ್‌ಸಿಎ ಕರ್ನಾಟಕ ಪ್ರೀಮಿಯರ್ ಲೀಗ್ ಟೂರ್ನಿಯನ್ನು ಆಯೋಜಿಸುತ್ತಿತ್ತು. 2019ರಲ್ಲಿ ಮ್ಯಾಚ್ ಫಿಕ್ಸಿಂಗ್ ಪ್ರಕರಣ ವರದಿಯಾಗಿದ್ದವು. ಹಲವು ಆಟಗಾರರನ್ನು ಪೊಲೀಸರು ವಿಚಾರಣೆ ನಡೆಸಿದ್ದರು. ಅದರಿಂದಾಗಿ ನಂತರದ ವರ್ಷಗಳಲ್ಲಿ ಟೂರ್ನಿ ನಡೆದಿರಲಿಲ್ಲ. ಹೋದ ವರ್ಷ ಮಹಾರಾಜ ಟ್ರೋಫಿ ಟೂರ್ನಿಯನ್ನು ಆರಂಭಿಸಲಾಗಿತ್ತು. ಆಗ ಡ್ರಾಫ್ಟ್‌ ಮಾದರಿಯಲ್ಲಿ ತಂಡಗಳೂ ಮತ್ತು ಆಟಗಾರರ ಆಯ್ಕೆ ನಡೆದಿತ್ತು. ಈ ಬಾರಿ ಹರಾಜು ನಡೆಸಲಾಗುತ್ತಿದೆ. ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ಕನ್ನಡ, ಫ್ಯಾನ್‌ ಕೋಡ್ ಹರಾಜು ಪ್ರಕ್ರಿಯೆಯಲ್ಲಿ 700 ಆಟಗಾರರು ಒಟ್ಟು ಆರು ತಂಡಗಳು ಭಾಗಿಯಾಗಲಿವೆ ಆಗಸ್ಟ್ 13ರಿಂದ ಬೆಂಗಳೂರಿನಲ್ಲಿ ನಡೆಯಲಿರುವ ಟೂರ್ನಿ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.