ಎಮರ್ಜಿಂಗ್ ಏಷ್ಯಾ ಕಪ್ ಸೆಮಿಫೈನಲ್ ಇಂದು: ಯಶ್ ಧುಳ್ ಬಳಗಕ್ಕೆ ಬಾಂಗ್ಲಾ ಸವಾಲು ಕೊಲಂಬೊ: ಲೀಗ್ ಹಂತದಲ್ಲಿ ಉತ್ತಮವಾಗಿ ಅಡಿರುವ ಭಾರತ ಎ ತಂಡವು ಶುಕ್ರವಾರ ನಡೆಯಲಿರುವ ಎಮರ್ಜಿಂಗ್ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ. ಬಾಂಗ್ಲಾ ತಂಡವೂ ಲೀಗ್ ಹಂತದಲ್ಲಿ ಆಲ್‌ರೌಂಡ್ ಆಟವಾಡಿದೆ. ಅದರಿಂದಾಗಿ ನಾಲ್ಕರ ಘಟ್ಟದಲ್ಲಿ ಜಿದ್ದಾಜಿದ್ದಿ ತಾರಕಕ್ಕೇರುವ ಸಾದ್ಯತೆ ಇದೆ. ಭಾರತದ ಯುವ ಮಧ್ಯಮವೇಗಿ ಹರ್ಷಿತ್ ರಾಣಾ (41ಕ್ಕೆ4) ಮತ್ತು ನಾಯಕ ಯಶ್ ಧುಳ್ (108 ರನ್) ಅವರು ಯುಎಇ ತಂಡದ ವಿರುದ್ಧ ಮಿಂಚಿದ್ದರು. ನಂತರದ ಪಂದ್ಯಗಳಲ್ಲಿ ಎಡಗೈ ಸ್ಪಿನ್ನರ್ ನಿಶಾಂತ್ ಸಿಂಧು, ಬ್ಯಾಟರ್ ಬಿ. ಸಾಯಿ ಸುದರ್ಶನ್, ಅಭಿಷೇಕ್ ಶರ್ಮಾ, ಮಧ್ಯಮವೇಗಿ ರಾಜವರ್ಧನ್ ಹಂಗರಗೆಕರ್ ಅಮೋಘ ಲಯದಲ್ಲಿದ್ದಾರೆ. ತಂಡದಲ್ಲಿರುವ ಕನ್ನಡಿಗ ನಿಕಿನ್ ಜೋಸ್ ಕೂಡ ಅರ್ಧಶತಕ ಹೊಡೆದು ಗಮನ ಸೆಳೆದಿದ್ದಾರೆ. ಬಾಂಗ್ಲಾ ತಂಡವು ಶ್ರೀಲಂಕಾ ಎದುರಿನ ಸೋಲಿನ ನಂತರ ಪುಟಿದೆದ್ದಿತು. ಒಮನ್ ಮತ್ತು ಅಫ್ಗಾನಿಸ್ತಾನದ ಎದುರೂ ಉತ್ತಮವಾಗಿ ಆಡಿ ನಾಲ್ಕರ ಘಟ್ಟಕ್ಕೆ ತಲುಪಿದೆ. ತಂಜೀದ್ ಹಸನ್ ಮತ್ತು ಮೆಹಮುದುಲ್ ಹಸನ್ ಅವರು ಶತಕ ಗಳಿಸಿ ಅಮೋಘ ಲಯದಲ್ಲಿದ್ದಾರೆ. ತಂಜೀಮ್ ಸಕೀಬ್ ಈಗಾಗಲೇ ಏಳು ವಿಕೆಟ್ ಗಳಿಸಿದ್ದಾರೆ. ಇನ್ನೊಂದು ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ಎ ತಂಡವು ಶ್ರೀಲಂಕಾ ಎ ವಿರುದ್ಧ ಸೆಣಸಲಿದೆ. ಇದರಿಂದಾಗಿ ಫೈನಲ್‌ ಪಂದ್ಯದಲ್ಲಿ ಬದ್ಧ ಎದುರಾಳಿಗಳಾದ ಭಾರತ ಎ ಮತ್ತು ಪಾಕಿಸ್ತಾನ ಎ ತಂಡಗಳು ಮುಖಾಮುಖಿಯಾಗಲಿವೆಯೇ ಎಂಬ ಕುತೂಹಲವೂ ಗರಿಗೆದರಿದೆ. ಸೆಮಿಫೈನಲ್‌ ಆರಂಭ ಶ್ರೀಲಂಕಾ ಎ– ಪಾಕಿಸ್ತಾನ ಎ: ಬೆಳಿಗ್ಗೆ 10ರಿಂದ ಭಾರತ ಎ –ಬಾಂಗ್ಲಾದೇಶ ಎ: ಮಧ್ಯಾಹ್ನ 2ರಿಂದ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.