ಹರ್ಮನ್‌ಪ್ರೀತ್ ಕೌರ್‌ಗೆ ಅಮಾನತು ಶಿಕ್ಷೆ? ದುಬೈ: ಬಾಂಗ್ಲಾದೇಶ ಎದುರಿನ ಮೂರನೇ ಏಕದಿನ ಪಂದ್ಯದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಂಪೈರ್‌ಗಳನ್ನು ಟೀಕಿಸಿದ ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರಿಗೆ ಎರಡು ಪಂದ್ಯಗಳ ಅಮಾನತು ಶಿಕ್ಷೆ ವಿಧಿಸುವ ಸಾಧ್ಯತೆ ಇದೆ. ಶನಿವಾರ ನಡೆದ ಪಂದ್ಯವು ಟೈ ಆಗಿತ್ತು. ಬಾಂಗ್ಲಾದ ನಾಯಕಿ ನಿಗರ್ ಸುಲ್ತಾನಾ ಮತ್ತು ಹರ್ಮನ್‌ಪ್ರೀತ್ ಕೌರ್ ಜಂಟಿಯಾಗಿ ಟ್ರೋಫಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಹರ್ಮನ್‌, ಅಂಪೈರ್ ತೀರ್ಪು ಕಳಪೆಯಾಗಿತ್ತು ಎಂದು ಟೀಕಿಸಿದರು. ಅಲ್ಲದೇ ಅಂಪೈರ್‌ಗಳನ್ನೇ ವೇದಿಕೆಗೆ ಕರೆದು ಟ್ರೋಫಿ ನೀಡಬೇಕು ಎಂದು ವ್ಯಂಗ್ಯವಾಡಿದ್ದರು. ‘ಈ ಘಟನೆಯ ಕುರಿತು ವಿಚಾರಣೆ ನಡೆಯುತ್ತಿದೆ. ಆಟಗಾರ್ತಿಗೆ ಎರಡು ಪಂದ್ಯಗಳ ಅಮಾನತು ಮತ್ತು ಮೂರು ಅಥವಾ ನಾಲ್ಕು ಡಿಮೆರಿಟ್ ಪಾಯಿಂಟ್‌ಗಳ ದಂಡ ವಿಧಿಸುವ ಕುರಿತು ಚಿಂತನೆ ಮಾಡಲಾಗುತ್ತಿದೆ. ಇದರಿಂದಾಗಿ ಹರ್ಮನ್‌ಪ್ರೀತ್ ಅವರು ಮುಂಬರುವ ಏಷ್ಯನ್ ಕ್ರೀಡಾಕೂಟದಲ್ಲಿ ಎರಡು ಪಂದ್ಯಗಳಲ್ಲಿ ಆಡಲು ಅವಕಾಶ ಸಿಗದಿರುವ ಸಾಧ್ಯತೆ ಇದೆ ’ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.