ಹರ್ಮನ್‌ಪ್ರೀತ್ ನಡವಳಿಕೆಗೆ ನಾಯಕಿಗೆ ತಕ್ಕುದಲ್ಲ: ದಿಗ್ಗಜ ಕ್ರಿಕೆಟಿಗರ ಟೀಕೆ ನವದೆಹಲಿ: ಬಾಂಗ್ಲಾದೇಶ ವಿರುದ್ಧದ ಮೂರನೇ ಏಕದಿನ ಪಂದ್ಯದ ನಂತರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ತೋರಿದ ನಡವಳಿಕೆಯನ್ನು ಹಲವು ದಿಗ್ಗಜ ಕ್ರಿಕೆಟಿಗರು ಟೀಕಿಸಿದ್ದಾರೆ. 'ಆಕೆಯ (ಹರ್ಮನ್) ನಡವಳಿಕೆ ವಿಷಾದನೀಯ. ತಾವು ಔಟಾದ ಹೊತ್ತಿನಲ್ಲಿ ಅವರು ವಿರೋಧದ ನಡವಳಿಕೆ ತೋರಿದ್ದರೆ ಅದನ್ನು ಒಂದು ಹಂತದವರೆಗೆ ಒಪ್ಪಬಹುದಿತ್ತು. ಆದರೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ರೀತಿ ನಡೆದುಕೊಂಡಿದ್ದು ಕ್ರೀಡೆಯ ದೃಷ್ಟಿಯಿಂದ ಖಂಡಿತವಾಗಿಯೂ ಒಳ್ಳೆಯದಲ್ಲ. ಅವರದ್ದು ಒರಟು ವರ್ತನೆ‘ ಎಂದು ಭಾರತ ಮಹಿಳಾ ತಂಡದ ಮಾಜಿ ನಾಯಕಿ ಶಾಂತಾ ರಂಗಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಹರ್ಮನ್ ನಮ್ಮ ಉತ್ತಮ ಬ್ಯಾಟರ್ ಎಂಬುದರಲ್ಲಿ ಅನುಮಾನವೇ ಇಲ್ಲ. ಆದರೆ ಈ ರೀತಿಯ ವರ್ತನೆಯನ್ನು ಒಪ್ಪಲಾಗದು. ಇಂತಹ ನಡವಳಿಕೆಯಿಂದಾಗಿ ಕ್ರಿಕೆಟ್ ಮಂಡಳಿಗಳು ಮಾಡಿದ ಉತ್ತಮ ಕಾರ್ಯಗಳಿಗೆ ಹಿನ್ನಡೆಯಾಗುತ್ತದೆ. ಈ ವಲಯದಲ್ಲಿ ಭಾರತವು ಅಗ್ರಮಾನ್ಯ ದೇಶವಾಗಿದೆ. ಬೇರೆ ದೇಶಗಳ ಮಂಡಳಿಗಳ ಬೆಂಬಲವನ್ನೂ ಗಳಿಸುವುದು ಮುಖ್ಯ. ಹರ್ಮನ್ ಅವರು ನಮ್ಮ ದೇಶದ ರಾಯಭಾರಿಯೂ ಹೌದು. ಅದಕ್ಕೆ ತಕ್ಕಂತೆ ಉತ್ತಮವಾಗಿ ನಡೆದುಕೊಳ್ಳಬೇಕಿತ್ತು‘ ಎಂದು ಶಾಂತಾ ಹೇಳಿದ್ದಾರೆ. ಮಾಜಿ ಆಟಗಾರ್ತಿ ಡಯಾನಾ ಎಡುಲ್ಜಿ ಅವರು ಕೌರ್ ನಡವಳಿಕೆಯನ್ನು ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ತಾವು ಬರೆದ ಅಂಕಣದಲ್ಲಿ ಕಟುವಾಗಿ ಟೀಕಿಸಿದ್ದಾರೆ. ‘ಸುದೀರ್ಘ ಕಾಲದಿಂದ ಕ್ರಿಕೆಟ್ ನೋಡುತ್ತಿದ್ದೇನೆ. ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರಂತೆ ಯಾರೂ ಪಂದ್ಯದ ನಂತರ ಈ ರೀತಿಯ ವರ್ತನೆ ತೋರಿರಲಿಲ್ಲ. ಜೂನಿಯರ್ ಆಟಗಾರರಿಗೆ ಒಂದು ಕೆಟ್ಟ ಉದಾಹರಣೆಯನ್ನು ಪರಿಚಯಿಸಿದ್ದಾರೆ. ಇಂತಹ ನಡವಳಿಕೆಗಳು ಕೆಲವು ಕಾಲದ ನಂತರ ತಂಡದ ಸಂಸ್ಕೃತಿಯನ್ನು ಹದಗೆಡಿಸುತ್ತವೆ‘ ಎಂದು ಡಯಾನಾ ಬರೆದಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.