ಭಾರತ ಸೋತಾಗ ಇಂತಹ ಪ್ರತಿಕ್ರಿಯೆ ಸಾಮಾನ್ಯ: ಜಡೇಜ ಟರೌಬಾ (ಪಿಟಿಐ): ಭಾರತ ಕ್ರಿಕೆಟ್‌ ತಂಡದ ಆಟಗಾರರ ಬಗ್ಗೆ ಮಾಜಿ ನಾಯಕ ಕಪಿಲ್‌ ದೇವ್‌ ಮಾಡಿರುವ ಟೀಕೆಗೆ ಪ್ರತಿಕ್ರಿಯಿಸಿರುವ ಆಲ್‌ರೌಂಡರ್‌ ರವೀಂದ್ರ ಜಡೇಜ, ‘ಭಾರತ ತಂಡ ಸೋತಾಗ ಈ ರೀತಿಯ ಪ್ರತಿಕ್ರಿಯೆಗಳು ಬರುವುದು ಸಾಮಾನ್ಯ’ ಎಂದಿದ್ದಾರೆ. ‘ಅಪಾರ ಹಣ ಗಳಿಸುತ್ತಿರುವ ಕ್ರಿಕೆಟಿಗರಲ್ಲಿ ದುರಹಂಕಾರ ಬೆಳೆಯುತ್ತಿದೆ. ತಮಗೆಲ್ಲವೂ ತಿಳಿದಿದೆ ಎಂದು ಧೋರಣೆ ಇದೆ’ ಎಂದು ಕಪಿಲ್‌, ಭಾರತ ತಂಡದ ಆಟಗಾರರ ಬಗ್ಗೆ ಟೀಕಿಸಿದ್ದರು. ವೆಸ್ಟ್‌ ಇಂಡೀಸ್‌ ವಿರುದ್ದದ ಮೂರನೇ ಏಕದಿನ ಪಂದ್ಯಕ್ಕೆ ಮುನ್ನ ಮಾಧ್ಯಮದವರ ಜತೆ ಮಾತನಾಡಿದ ಜಡೇಜ, ‘ಆಟಗಾರರು ತಂಡಕ್ಕೆ ಗೆಲುವು ತಂದುಕೊಡುವತ್ತ ಮಾತ್ರ ಗಮನಹರಿಸಿದ್ದಾರೆ. ಯಾರೂ ವೈಯಕ್ತಿಕ ಅಜೆಂಡಾ ಹೊಂದಿಲ್ಲ’ ಎಂದಿದ್ದಾರೆ. ‘ಪ್ರತಿಯೊಬ್ಬರಿಗೂ ತಮ್ಮದೇ ಆದ ಅಭಿಪ್ರಾಯ ಇರುತ್ತದೆ. ಮಾಜಿ ಆಟಗಾರರು ಅಭಿಪ್ರಾಯವನ್ನು ವ್ಯಕ್ತಪಡಿಸುವ ಹಕ್ಕನ್ನು ಹೊಂದಿದ್ದಾರೆ. ಆದರೆ ಈಗಿನ ತಂಡದ ಆಟಗಾರರಲ್ಲಿ ದುರಹಂಕಾರವಿದೆ ಎಂಬುನ್ನು ನಾನು ಒಪ್ಪಿಕೊಳ್ಳುವುದಿಲ್ಲ’ ಎಂದು ಹೇಳಿದ್ದಾರೆ. ‘ಪ್ರತಿಯೊಬ್ಬರೂ ಕಠಿಣ ಪರಿಶ್ರಮ ನಡೆಸುತ್ತಿದ್ದು, ತಮ್ಮ ಆಟವನ್ನು ಆನಂದಿಸುತ್ತಿದ್ದಾರೆ. ಎಲ್ಲರೂ ತಮ್ಮ ಸ್ಥಾನವನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಪ್ರತಿಬಾರಿಯೂ ಶೇ 100 ಸಾಮರ್ಥ್ಯ ತೋರುತ್ತಾರೆ’ ಎಂದು ನುಡಿದಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.