ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಏಕದಿನ ಪಂದ್ಯ: ಭಾರತ ತಂಡ ಉತ್ತಮ ಆರಂಭ ಬೆಂಗಳೂರು: ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಏಕದಿನ ಪಂದ್ಯ ಟರೌಬಾದಲ್ಲಿ ಆರಂಭವಾಗಿದೆ. ಟಾಸ್ ಗೆದ್ದ ವೆಸ್ಟ್ ಇಂಡೀಸ್ ತಂಡ ಬೌಲಿಂಗ್ ಆಯ್ದುಕೊಂಡಿದೆ. ಮೊದಲು ಬ್ಯಾಟಿಂಗ್‌ಗೆ ಇಳಿದ ಇಶಾನ್ ಕಿಶನ್ ಹಾಗೂ ಶುಭಮನ್ ಗಿಲ್ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಇತ್ತೀಚಿನ ಮಾಹಿತಿ ಪ್ರಕಾರ ಭಾರತ ತಂಡ 6.3 ಓವರ್‌ಗಳಲ್ಲಿ 39 ರನ್ ಕಲೆ ಹಾಕಿದೆ. ಯಾವುದೇ ವಿಕೆಟ್ ಉರುಳಿಲ್ಲ. ಸಂಜು ಸ್ಯಾಮ್ಸನ್ ಮತ್ತು ಸೂರ್ಯಕುಮಾರ್ ಯಾದವ್ ಅವರನ್ನು ಮಧ್ಯಮಕ್ರಮಾಂಕದಲ್ಲಿ ಬ್ಯಾಟಿಂಗ್‌ ಮಾಡಿಸುವ ಪ್ರಯೋಗ ನಡೆದಿದೆ. ಸರಣಿ ಗೆಲ್ಲಬೇಕಾದರೆ ಉಭಯ ತಂಡಗಳಿಗೂ ಈ ಪಂದ್ಯದಲ್ಲಿ ಜಯಸಾಧಿಸುವ ಸವಾಲು ಇದೆ. 2006ರಿಂದ ಇಲ್ಲಿಯವರೆಗೆ ಭಾರತ ತಂಡವು ವಿಂಡೀಸ್ ಎದುರು ಫಿಫ್ಟಿ–50 ಕ್ರಿಕೆಟ್‌ನಲ್ಲಿ ಸರಣಿ ಸೋತಿಲ್ಲ. ಆದರೆ ಈ ಸರಣಿಯ ಎರಡನೇ ಪಂದ್ಯದಲ್ಲಿ ಗೆದ್ದಿರುವ ಅತಿಥೇಯ ತಂಡವು ಭರ್ತಿ ಆತ್ಮವಿಶ್ವಾಸದಲ್ಲಿದೆ. ಸರಣಿ ಸೋಲಿನ ಸರಪಣಿ ಕಳಚುವ ಛಲದಲ್ಲಿ ಶಾಯ್ ಹೋಪ್ ನಾಯಕತ್ವದ ವಿಂಡೀಸ್ ತಂಡ ಇದೆ. ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡವು ನಿರಾಯಾಸ ಗೆಲುವು ಸಾಧಿಸಿತ್ತು. ಆದರೆ ಎರಡನೇ ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರು ವಿಶ್ರಾಂತಿ ಪಡೆದಿದ್ದರು. ಯುವಪಡೆಯನ್ನು ಕಣಕ್ಕಿಳಿಸಿ ಪ್ರಯೋಗ ನಡೆಸಲಾಗಿತ್ತು. ಆದರೆ, ಬ್ಯಾಟಿಂಗ್ ವಿಭಾಗದಲ್ಲಿ ವೈಫಲ್ಯ ಕಾಡಿತ್ತು. ಅದು ಸೋಲಿಗೂ ಕಾರಣವಾಗಿತ್ತು. ವಿಂಡೀಸ್ ಬಳಗದಲ್ಲಿ ಆರಂಭಿಕ ಕೈಲ್ ಮೇಯರ್ಸ್, ಬ್ರೆಂಡನ್ ಕಿಂಗ್ ಮತ್ತು ಮಧ್ಯಮ ಕ್ರಮಾಂಕದಲ್ಲಿ ಕೀಸಿ ಕಾರ್ಟಿ ಅಮೋಘ ಲಯದಲ್ಲಿದ್ದಾರೆ. ಕಳೆದ ಪಂದ್ಯದ ಮಾದರಿಯಲ್ಲಿಯೇ ವಿಂಡೀಸ್ ಬೌಲರ್‌ಗಳು ಭಾರತದ ಬ್ಯಾಟರ್‌ಗಳನ್ನು ಕಟ್ಟಿಹಾಕಿದರೆ, ದೀರ್ಘಕಾಲದ ನಂತರ ಸರಣಿ ಗೆಲುವಿನ ಸಿಹಿ ಸವಿಯಬಹುದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.