ದಕ್ಷಿಣ ವಲಯ ಅಜೇಯ ಸಾಧನೆ ಪುದುಚೇರಿ: ಸಾಯಿ ಸುದರ್ಶನ್‌ (132) ಅವರ ಅಜೇಯ ಶತಕದ ನೆರವಿನಿಂದ ದಕ್ಷಿಣ ವಲಯ ತಂಡ ದೇವಧರ್‌ ಟ್ರೋಫಿ ಏಕದಿನ ಕ್ರಿಕೆಟ್‌ ಟೂರ್ನಿಯ ಕೊನೆಯ ಲೀಗ್‌ ಪಂದ್ಯದಲ್ಲಿ 7 ವಿಕೆಟ್‌ಗಳಿಂದ ಕೇಂದ್ರ ವಲಯ ತಂಡವನ್ನು ಮಣಿಸಿತು. ಆಡಿದ ಐದೂ ಪಂದ್ಯಗಳನ್ನು ಗೆದ್ದು ಅಜೇಯ ಸಾಧನೆಯೊಂದಿಗೆ ಫೈನಲ್‌ ಪ್ರವೇಶಿಸಿರುವ ದಕ್ಷಿಣ ವಲಯ ತಂಡ, ಗುರುವಾರ ನಡೆಯಲಿರುವ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಪೂರ್ವ ವಲಯದ ಸವಾಲನ್ನು ಎದುರಿಸಲಿದೆ. ದಕ್ಷಿಣ ವಲಯ 20 ಪಾಯಿಂಟ್ಸ್‌ಗಳೊಂದಿಗೆ ಅಗ್ರಸ್ಥಾನ ಪಡೆದರೆ, 16 ಪಾಯಿಂಟ್ಸ್‌ ಗಳಿಸಿದ ಪೂರ್ವ ವಲಯ ಎರಡನೇ ಸ್ಥಾನ ಗಳಿಸಿತು. ಮಂಗಳವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಕೇಂದ್ರ ವಲಯ, 50 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 261 ರನ್‌ ಗಳಿಸಿತು. ದಕ್ಷಿಣ ವಲಯ ತಂಡ 48.2 ಓವರ್‌ಗಳಲ್ಲಿ ಮೂರು ವಿಕೆಟ್‌ ಕಳೆದುಕೊಂಡು ಗೆಲುವಿನ ಗುರಿ ತಲುಪಿತು. 136 ಎಸೆತಗಳನ್ನು ಎದುರಿಸಿದ ಸುದರ್ಶನ್‌, 11 ಬೌಂಡರಿ ಮತ್ತು ಒಂದು ಸಿಕ್ಸರ್‌ ಹೊಡೆದರು. ಸಾಧಾರಣ ಗುರಿ ಬೆನ್ನಟ್ಟಿದ ದಕ್ಷಿಣ ವಲಯ ತಂಡದ ನಾಯಕ ಮಯಂಕ್‌ ಅಗರವಾಲ್‌ ಖಾತೆ ತೆರೆಯುವ ಮುನ್ನವೇ ಗಾಯಗೊಂಡು ಪೆವಿಲಿಯನ್‌ಗೆ ಮರಳಿದರು. ಈ ವೇಳೆ ಜತೆಯಾದ ರೋಹನ್‌ ಕುನ್ನುಮ್ಮಲ್ (24) ಮತ್ತು ಸುದರ್ಶನ್‌ 58 ರನ್‌ ಸೇರಿಸಿದರು. ಎನ್‌.ಜಗದೀಶನ್ (19) ಬೇಗನೇ ಔಟಾದರೂ, ರೋಹಿತ್‌ ರಾಯುಡು (37) ಮತ್ತು ವಾಷಿಂಗ್ಟನ್‌ ಸುಂದರ್ (ಔಟಾಗದೆ 43) ಅವರು ಸುದರ್ಶನ್‌ಗೆ ತಕ್ಕ ಸಾಥ್‌ ನೀಡಿ ಗೆಲುವಿಗೆ ಕಾರಣರಾದರು. ಫೈನಲ್‌ಗೆ ಪೂರ್ವ ವಲಯ: ರಿಯಾನ್‌ ಪರಾಗ್ (102 ರನ್) ಅವರ ಶತಕದ ನೆರವಿನಿಂದ ಪೂರ್ವ ವಲಯ ತಂಡ ಕೊನೆಯ ಲೀಗ್‌ ಪಂದ್ಯದಲ್ಲಿ 157 ರನ್‌ಗಳಿಂದ ಪಶ್ಚಿಮ ವಲಯ ತಂಡವನ್ನು ಮಣಿಸಿ ಫೈನಲ್‌ಗೆ ಪ್ರವೇಶಿಸಿತು. ದಿನದ ಮತ್ತೊಂದು ಪಂದ್ಯದಲ್ಲಿ ಉತ್ತರ ವಲಯ 9 ವಿಕೆಟ್‌ಗಳಿಂದ ಈಶಾನ್ಯ ವಲಯ ವಿರುದ್ಧ ಗೆದ್ದಿತು. ಸಂಕ್ಷಿಪ್ತ ಸ್ಕೋರ್‌: ಕೇಂದ್ರ ವಲಯ: 50 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 261 (ಶಿವಂ ಚೌಧರಿ 34, ಯಶ್‌ ದುಬೆ 77, ರಿಂಕು ಸಿಂಗ್‌ 26, ಶಿವಂ ಮಾವಿ 38, ಮೋಹಿತ್‌ ರೆಡಕರ್‌ 51ಕ್ಕೆ 3, ವಾಸುಕಿ ಕೌಶಿಕ್‌ 15ಕ್ಕೆ 2, ಅರ್ಜುನ್‌ ತೆಂಡೂಲ್ಕರ್‌ 65ಕ್ಕೆ 2, ವೈಶಾಖ್‌ ವಿಜಯಕುಮಾರ್ 49ಕ್ಕೆ 1) ದಕ್ಷಿಣ ವಲಯ: 48.2 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 262 (ರೋಹನ್‌ ಕುನ್ನುಮ್ಮಲ್ 24, ಸಾಯಿ ಸುದರ್ಶನ್ ಔಟಾಗದೆ 132, ಎನ್‌.ಜಗದೀಶನ್ 19, ರೋಹಿತ್‌ ರಾಯುಡು 37, ವಾಷಿಂಗ್ಟನ್‌ ಸುಂದರ್ ಔಟಾಗದೆ 43) ಫಲಿತಾಂಶ: ದಕ್ಷಿಣ ವಲಯಕ್ಕೆ 7 ವಿಕೆಟ್‌ ಗೆಲುವು ಪೂರ್ವವಲಯ: 50 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 319 (ಅಭಿಮನ್ಯು ಈಶ್ವರನ್ 38, ಉತ್ಕರ್ಷ್‌ ಸಿಂಗ್‌ 50, ವಿರಾಟ್‌ ಸಿಂಗ್‌ 42, ರಿಯಾನ್‌ ಪರಾಗ್ 102, ಕುಮಾರ್‌ ಕುಶಾಗ್ರ 53, ಶಮ್ಸ್‌ ಮುಲಾನಿ 45ಕ್ಕೆ 3) ಪಶ್ಚಿಮ ವಲಯ: 34 ಓವರ್‌ಗಳಲ್ಲಿ 162 (ಹರ್ವಿಕ್‌ ದೇಸಾಯಿ 92, ಮಣಿಶಂಕರ್‌ ಮುರಸಿಂಗ್ 28ಕ್ಕೆ 5, ಉತ್ಕರ್ಷ್‌ ಸಿಂಗ್‌ 16ಕ್ಕೆ 3) ಫಲಿತಾಂಶ: ಪೂರ್ವ ವಲಯಕ್ಕೆ 157 ರನ್‌ ಗೆಲುವು ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.