ಐರ್ಲೆಂಡ್‌ ವಿರುದ್ಧದ ಟಿ20 ಸರಣಿ: ಭಾರತ ತಂಡಕ್ಕೆ ಬೂಮ್ರಾ ನಾಯಕ ನವದೆಹಲಿ: ಗಾಯಗೊಂಡು ದೀರ್ಘ ಸಮಯದಿಂದ ಕ್ರಿಕೆಟ್‌ನಿಂದ ದೂರವುಳಿದಿದ್ದ ವೇಗಿ ಜಸ್‌ಪ್ರೀತ್ ಬೂಮ್ರಾ ಇದೀಗ ಭಾರತ ತಂಡದ ನಾಯಕರಾಗಿ ಮರಳುತ್ತಿದ್ದಾರೆ. ಆಗಸ್ಟ್ 18 ರಿಂದ 23ರವರೆಗೆ ಐರ್ಲೆಂಡ್‌ನಲ್ಲಿ ನಡೆಯಲಿರುವ ಟಿ20 ಕ್ರಿಕೆಟ್ ಸರಣಿಯಲ್ಲಿ ಅವರು ತಂಡವನ್ನು ಮುನ್ನಡೆಸುವರು. ಅವರ ಜೊತೆಗೆ ಕನ್ನಡಿಗ ಪ್ರಸಿದ್ಧ ಕೃಷ್ಣ ಕೂಡ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ. ಈ ಸರಣಿಯಲ್ಲಿ ಮೂರು ಪಂದ್ಯಗಳು ನಡೆಯಲಿವೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ವೇಗಿ ಮೊಹಮ್ಮದ್ ಸಿರಾಜ್ ಅವರು ಈ ತಂಡದಲ್ಲಿ ಇಲ್ಲ. ಅವರು ವಿಶ್ರಾಂತಿ ಪಡೆದಿದ್ದಾರೆ. ಋತುರಾಜ್ ಗಾಯಕವಾಡ ಅವರು ಐರ್ಲೆಂಡ್ ಪ್ರವಾಸದಲ್ಲಿ ಉಪನಾಯಕರಾಗಿ ಆಡುವರು. ಇತ್ತೀಚೆಗೆ ಟೆಸ್ಟ್ ಪದಾರ್ಪಣೆ ಮಾಡಿದ್ದ ಯಶಸ್ವಿ ಜೈಸ್ವಾಲ್, ಐಪಿಎಲ್‌ ಟೂರ್ನಿಯಲ್ಲಿ ಮಿಂಚಿದ್ದ ರಿಂಕು ಸಿಂಗ್, ಶಿವಂ ದುಬೆ ಹಾಗೂ ಅನುಭವಿ ವಿಕೆಟ್‌ಕೀಪರ್ ಸಂಜು ಸ್ಯಾಮ್ಸನ್‌ ಅವರಿಗೆ ಅವಕಾಶ ನೀಡಲಾಗಿದೆ. ಬೆನ್ನುನೋವಿನ ಸಮಸ್ಯೆಗೆ ನ್ಯೂಜಿಲೆಂಡ್‌ನಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದ ಬೂಮ್ರಾ ಸುಮಾರು ಆರು ತಿಂಗಳಿಗೂ ಹೆಚ್ಚು ಸಮಯದಿಂದ ವಿಶ್ರಾಂತಿ ಮತ್ತು ಎನ್‌ಸಿಎ ಪುನಶ್ಚೇತನ ಆರೈಕೆಯಲ್ಲಿದ್ದರು. ಇತ್ತೀಚೆಗೆ ಅವರು ಅಭ್ಯಾಸ ಆರಂಭಿಸಿದ್ದರು. ಆಲೂರು ಕ್ರೀಡಾಂಗಣದಲ್ಲಿ ಈಚೆಗೆ ಆಗಮಿಸಿದ್ದ ಮುಂಬೈ ಕ್ರಿಕೆಟ್ ತಂಡದ ಎದುರಿನ ಪಂದ್ಯದಲ್ಲಿ 10 ಓವರ್‌ಗಳ ಬೌಲಿಂಗ್ ಮಾಡಿದ್ದರು. ಅದರಿಂದಾಗಿ ಅವರನ್ನು ಫಿಟ್ ಎಂದು ಘೋಷಿಸಲಾಗಿತ್ತು. ಬಲಗೈ ಮಧ್ಯಮವೇಗಿ ಪ್ರಸಿದ್ಧಕೃಷ್ಣ ಕೂಡ ಹೋದ ವರ್ಷದ ಆಗಸ್ಟ್‌ನಲ್ಲಿ ಜಿಂಬಾಬ್ವೆ ವಿರುದ್ಧದ ಏಕದಿನ ಪಂದ್ಯ ಆಡಿದ ನಂತರ ಕಣಕ್ಕಿಳಿದಿರಲಿಲ್ಲ. ಅವರು ಮೂಳೆಮುರಿತಕ್ಕೆ ಶಸ್ತ್ರಚಿಕಿತ್ಸೆ ಪಡೆದು ಎನ್‌ಸಿಎ ಪುನಶ್ಚೇತನ ಶಿಬಿರದಲ್ಲಿ ಇದ್ದರು. ತಂಡ ಇಂತಿದೆ: ಜಸ್‌ಪ್ರೀತ್ ಬೂಮ್ರಾ (ನಾಯಕ), ಋತುರಾಜ್ ಗಾಯಕವಾಡ (ಉಪನಾಯಕ), ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ರಿಂಕು ಸಿಂಗ್, ಸಂಜು ಸ್ಯಾಮ್ಸನ್, ಜಿತೇಶ್ ಶರ್ಮಾ (ಇಬ್ಬರೂ ವಿಕೆಟ್‌ಕೀಪರ್), ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಶಹಬಾಜ್ ಅಹಮದ್, ರವಿ ಬಿಷ್ಣೋಯಿ, ಪ್ರಸಿದ್ಧಕೃಷ್ಣ, ಆರ್ಷದೀಪ್ ಸಿಂಗ್, ಮುಕೇಶ್ ಕುಮಾರ್, ಆವೇಶ್ ಖಾನ್. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.