| ಸಿರಾಜ್‌ಗೆ ಐದು ವಿಕೆಟ್; ಭಾರತಕ್ಕೆ ಇನಿಂಗ್ಸ್‌ ಮುನ್ನಡೆ ಪೋರ್ಟ್‌ ಆಫ್‌ ಸ್ಪೇನ್: ಐದು ವಿಕೆಟ್ ಗೊಂಚಲು ಗಳಿಸಿದ ಭಾರತದ ಮೊಹಮ್ಮದ್ ಸಿರಾಜ್ ಅವರ ದಾಳಿಗೆ ಇಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವು ಕುಸಿಯಿತು. ಮೊದಲ ಇನಿಂಗ್ಸ್‌ನಲ್ಲಿ ಭಾರತ ತಂಡವು ಗಳಿಸಿದ್ದ 438 ರನ್‌ಗಳಿಗೆ ಉತ್ತರವಾಗಿ ವಿಂಡೀಸ್ ಬಳಗಕ್ಕೆ 115.4 ಓವರ್‌ಗಳಲ್ಲಿ 255 ರನ್‌ ಗಳಿಸಲಷ್ಟೇ ಸಾಧ್ಯವಾಯಿತು. ಇದರೊಂದಿಗೆ ಭಾರತ ತಂಡವು 183 ರನ್‌ಗಳ ಮುನ್ನಡೆ ಸಾಧಿಸಿತು. ವೇಗಿ ಸಿರಾಜ್ 23.4 ಓವರ್‌ಗಳಲ್ಲಿ 60 ರನ್‌ಗಳಿಗೆ ಐದು ವಿಕೆಟ್ ಗಳಿಸಿದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಇದು ಅವರ ವೈಯಕ್ತಿಕ ಶ್ರೇಷ್ಠ ಸಾಧನೆಯಾಗಿದೆ. ಭಾನುವಾರ ಎರಡನೇ ಇನಿಂಗ್ಸ್ ಆರಂಭಿಸಿದ ಭಾರತ ತಂಡಕ್ಕೆ ನಾಯಕ ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್ ಅಮೋಘ ಆರಂಭ ನೀಡಿದರು. ಮಳೆಯಿಂದಾಗಿ ಆಟ ನಿಲ್ಲುವ ಮುನ್ನ ಭಾರತ ತಂಡವು 12 ಓವರ್‌ಗಳಲ್ಲಿ 1 ವಿಕೆಟ್‌ಗೆ 98 ರನ್ ಗಳಿಸಿತು. ರೋಹಿತ್ ತಮ್ಮ ವೃತ್ತಿಜೀವನದ ವೇಗದ ಅರ್ಧಶತಕ (35 ಎಸೆತಗಳಲ್ಲಿ 50) ದಾಖಲಿಸಿದರು. ಎರಡು ಬಾರಿ ಜೀವದಾನ ಲಭಿಸಿದ್ದನ್ನು ಸಮರ್ಥವಾಗಿ ಬಳಸಿಕೊಂಡರು. ಒಟ್ಟು 57 ರನ್ ಗಳಿಸಿ ಔಟಾದರು. ಮೊದಲ ವಿಕೆಟ್‌ ಜೊತೆಯಾಟದಲ್ಲಿ 98 ರನ್ ಸೇರಿಸಿದರು. ಜೈಸ್ವಾಲ್ 28 ಎಸೆತಗಳಲ್ಲಿ 37 ರನ್‌ ಗಳಿಸಿದರು. ತಂಡವು ಒಟ್ಟು 281 ರನ್‌ ಮುನ್ನಡೆ ಸಾಧಿಸಿದೆ. ಪಂದ್ಯದ ಮೂರನೇ ದಿನವಾದ ಶನಿವಾರ ವಿಂಡೀಸ್ ತಂಡವು 5 ವಿಕೆಟ್‌ಗಳಿಗೆ 229 ರನ್ ಗಳಿಸಿತ್ತು. ಆದರೆ ಮೂರನೇ ದಿನದಾಟದಲ್ಲಿ ಕೇವಲ 26 ರನ್‌ಗಳ ಅಂತರದಲ್ಲಿ ಐದು ವಿಕೆಟ್‌ ಕಳೆದುಕೊಂಡಿತು. ನಂತರ ಭಾರತದ ಆರಂಭಿಕ ಜೋಡಿಯು ಟಿ20 ಮಾದರಿಯಲ್ಲಿ ಬ್ಯಾಟಿಂಗ್ ಮಾಡಿತು. ನಾಲ್ಕನೇ ದಿನದಾಟದ ಊಟದ ವಿರಾಮಕ್ಕೂ ಮುನ್ನವೇ ಮಳೆ ಆರಂಭವಾಯಿತು. ಇದರಿಂದಾಗಿ ಬಹಳ ಹೊತ್ತು ಪಂದ್ಯ ಸ್ಥಗಿತವಾಯಿತು. ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಭಾರತ: 128 ಓವರ್‌ಗಳಲ್ಲಿ 438 ವೆಸ್ಟ್ ಇಂಡೀಸ್: 115.4 ಓವರ್‌ಗಳಲ್ಲಿ 255 (ಕ್ರೇಗ್‌ ಬ್ರಾತ್‌ವೇಟ್ 75, ಅಲಿಕ್ ಅತಾಂಜೆ 37, ಬ್ಲ್ಯಾಕ್‌ವುಡ್ 20, ಮೊಹಮ್ಮದ್ ಸಿರಾಜ್ 60ಕ್ಕೆ5, ಮುಕೇಶ್ ಕುಮಾರ್ 48ಕ್ಕೆ2, ರವೀಂದ್ರ ಜಡೇಜ 37ಕ್ಕೆ2, ಅಶ್ವಿನ್ 61ಕ್ಕೆ1) ಎರಡನೇ ಇನಿಂಗ್ಸ್: ಭಾರತ: 12 ಓವರ್‌ಗಳಲ್ಲಿ 1 ವಿಕೆಟ್‌ಗೆ 98 (ಯಶಸ್ವಿ ಜೈಸ್ವಾಲ್ ಬ್ಯಾಟಿಂಗ್ 37, ರೋಹಿತ್ ಶರ್ಮಾ 57) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.