ಟೆಸ್ಟ್‌ ಕ್ರಿಕೆಟ್: ಶಫೀಖ್ -ಮಸೂದ್‌ ಅರ್ಧಶತಕ, ಶ್ರೀಲಂಕಾ ವಿರುದ್ಧ ಪಾಕ್ ಮೇಲುಗೈ ಕೊಲಂಬೊ: ಅಬ್ದುಲ್ಲಾ ಶಫೀಖ್ ಮತ್ತು ಶಾನ್‌ ಮಸೂದ್‌ ಅವರ ಅರ್ಧಶತಕಗಳ ನೆರವಿನಿಂದ ಪಾಕಿಸ್ತಾನ, ಎರಡನೇ ಟೆಸ್ಟ್‌ ಪಂದ್ಯದ ಮೊದಲ ದಿನವಾದ ಸೋಮವಾರ ಶ್ರೀಲಂಕಾ ವಿರುದ್ಧ ಮೇಲುಗೈ ಸಾಧಿಸಿತು. ಆತಿಥೇಯರನ್ನು 165 ರನ್‌ಗಳಿಗೆ ಉರುಳಿಸಿದ ಪಾಕ್‌ ತಂಡ ದಿನದಾಟದ ಕೊನೆಗೆ 2 ವಿಕೆಟ್‌ಗೆ 145 ರನ್ ಗಳಿಸಿದ್ದು ಉತ್ತಮ ಸ್ಥಿತಿಯಲ್ಲಿದೆ. ಎರಡು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ ಸಾಧಿಸಿರುವ ಪಾಕ್, ಆಕ್ರಮಣಕಾರಿ ಮನೋಭಾವ ಪ್ರದರ್ಶಿಸಿತು. ಶಫೀಕ್‌ ಅಜೇಯ 74 ರನ್ ಗಳಿಸಿದ್ದು, ಎಡಗೈ ಬ್ಯಾಟರ್‌ ಶಾನ್‌ ಮಸೂದ್‌ (51, 47 ಎಸೆತ) ಜೊತೆ ಲಗುಬಗನೇ 108 ರನ್‌ ಸೇರಿಸಿದರು. ಇದಕ್ಕೆ ಮೊದಲು ಪ್ರವಾಸಿ ತಂಡ ಬೌಲರ್‌ಗಳು, ಶ್ರೀಲಂಕಾಕ್ಕೆ ಲಗಾಮು ಹಾಕಿದರು. ಲೆಗ್‌ ಸ್ಪಿನ್ನರ್ ಅಬ್ರಾರ್‌ ಅಹ್ಮದ್ ಮತ್ತು ವೇಗದ ಬೌಲರ್‌ ನಸೀಮ್ ಶಾ ಏಳು ವಿಕೆಟ್‌ಗಳನ್ನು ತಮ್ಮಲ್ಲಿ ಹಂಚಿಕೊಂಡು ಲಂಚ್ ಮತ್ತು ಟೀ ನಡುವೆ ಲಂಕಾ ತಂಡವನ್ನು ಆಲೌಟ್‌ ಮಾಡಿದರು. ಮಳೆಯಿಂದ ಅರ್ಧಗಂಟೆ ತಡವಾಗಿ ಆರಂಭವಾದ ಪಂದ್ಯದಲ್ಲಿ, ಟಾಸ್ ಗೆದ್ದ ಶ್ರೀಲಂಕಾ ಕೂಡ ಬೇಗನೇ ತೊಂದರೆಗೆ ಒಳಗಾಯಿತು. 36 ರನ್‌ಗಳಾಗುವಷ್ಟರಲ್ಲಿ 4 ವಿಕೆಟ್‌ಗಳು ಉರುಳಿದವು. ಮೊದಲ ಪಂದ್ಯದಲ್ಲಿ 122 ಮತ್ತು 82 ರನ್‌ ಬಾರಿಸಿದ್ದ ಧನಂಜಯ ಡಿ‘ಸಿಲ್ವ ಮತ್ತು ದಿನೇಶ್ ಚಾಂದಿಮಾಲ್‌ (34) ಅವರು ಐದನೇ ವಿಕೆಟ್‌ಗೆ 85 ರನ್‌ ಸೇರಿಸಿದ್ದರಿಂದ ಆತಿಥೇಯರು ಮುಖಭಂಗದಿಂದ ಪಾರಾದರು. ವಿಶ್ವಾಸದಿಂದ ಬ್ಯಾಟ್‌ ಬೀಸಿದ ಅವರು 68 ಎಸೆತಗಳಲ್ಲಿ ಒಂದು ಸಿಕ್ಸರ್‌, 9 ಬೌಂಡರಿಗಳಿದ್ದ 57 ರನ್ ಗಳಿಸಿದರು. ಇದು ಟೆಸ್ಟ್‌ಗಳಲ್ಲಿ ಅವರ 13ನೇ ಅರ್ಧಶತಕ. ಸ್ಕೋರುಗಳು: ಮೊದಲ ಇನಿಂಗ್ಸ್‌: ಶ್ರೀಲಂಕಾ: 48.4 ಓವರುಗಳಲ್ಲಿ 166 (ದಿನೇಶ್ ಚಾಂದಿಮಾಲ್ 34, ಧನಂಜಯ ಡಿಸಿಲ್ವ 57, ರಮೇಶ್ ಮೆಂಡಿಸ್ 27; ನಸೀಮ್ ಶಾ 41ಕ್ಕೆ3, ಅಬ್ರಾರ್‌ ಅಹ್ಮದ್ 69ಕ್ಕೆ4); ಪಾಕಿಸ್ತಾನ: 28.3 ಓವರುಗಳಲ್ಲಿ 2 ವಿಕೆಟ್‌ಗೆ 145 (ಅಬ್ದುಲ್ಲಾ ಶಫೀಖ್ ಬ್ಯಾಟಿಂಗ್ 74, ಶಾನ್ ಮಸೂದ್ 51; ಅಸಿತ ಫರ್ನಾಂಡೊ 41ಕ್ಕೆ2) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.