ಜಿಪಿಬಿಎಲ್‌ನಲ್ಲಿ ಆಡಲು ಆಟಗಾರರಿಗೆ ಹೈಕೋರ್ಟ್ ಅನುಮತಿ ಬೆಂಗಳೂರು: ಗ್ರ್ಯಾನ್‌ ಪ್ರೀ ಬ್ಯಾಡ್ಮಿಂಟನ್ ಲೀಗ್ ಟೂರ್ನಿಯಲ್ಲಿ ಆಡಲು ಆಟಗಾರರಿಗೆ ಕರ್ನಾಟಕ ಹೈಕೋರ್ಟ್ ಅನುಮತಿ ನೀಡಿದೆ. ನೋಂದಾಯಿತ ಆಟಗಾರರು ಖಾಸಗಿ ಲೀಗ್‌ಗಳಲ್ಲಿ ಆಡುವಂತಿಲ್ಲ ಎಂದು ಆದೇಶಿಸಿದ್ದ ಭಾರತ ಬ್ಯಾಡ್ಮಿಂಟನ್ ಸಂಸ್ಥೆ (ಬಿಎಐ) ಏಪ್ರಿಲ್‌ ತಿಂಗಳಿನಲ್ಲಿ ಎಲ್ಲ ರಾಜ್ಯ ಬ್ಯಾಡ್ಮಿಂಟನ್ ಸಂಸ್ಥೆಗಳಿಗೆ ಸುತ್ತೋಲೆ ಕಳಿಸಿತ್ತು. ಇದರಿಂದಾಗಿ ಬೆಂಗಳೂರಿನಲ್ಲಿ ನಡೆಯಲಿರುವ ಎರಡನೇ ಆವೃತ್ತಿಯ ಜಿಪಿಬಿಎಲ್ ಟೂರ್ನಿಯಲ್ಲಿ ಆಡಲು ಆಟಗಾರರಿಗೆ ನಿರಾಶೆಯಾಗಿತ್ತು. ಬಿಎಐ ಸುತ್ತೋಲೆಯನ್ನು ಪ್ರಶ್ನಿಸಿ ಜಿಪಿಬಿಎಲ್ ಆಯೋಜಕರು ಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್ ಕಳೆದ 21ರಂದು ಬಿಎಐ ಸುತ್ತೋಲೆಗೆ ತಡೆಯಾಜ್ಞೆ ನೀಡಿತು. ಇದರೊಂದಿಗೆ ಜಿಪಿಬಿಎಲ್‌ನಲ್ಲಿ ಆಡುವ ಆಟಗಾರರು, ಭಾಗವಹಿಸುವ ತರಬೇತುದಾರರು, ತಾಂತ್ರಿಕ ಹಾಗೂ ಸಹಾಯಕ ಸಿಬ್ಬಂದಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ಬಿಎಐಗೆ ಸೂಚಿಸಿದೆ. ಮುಂದಿನ ತಿಂಗಳು ಜಿಪಿಬಿಎಲ್‌ ನಡೆಯಲಿದೆ. 450ಕ್ಕೂ ಹೆಚ್ಚು ಪ್ರವೇಶಪತ್ರಗಳನ್ನು ಆಟಗಾರರಿಂದ ಆಯೋಜಕರು ಸ್ವೀಕರಿಸಿದ್ದಾರೆ. ಇದರಲ್ಲಿ 56 ಮಂದಿ ಅಂತರರಾಷ್ಟ್ರೀಯ ಆಟಗಾರರು ಕಣಕ್ಕಿಳಿಯಲಿದ್ದಾರೆ. ‘ಜಿಪಿಬಿಎಲ್‌ ಸಂಘಟಿಸಲು ಮಾನದಂಡಗಳು ಮತ್ತು ಮಾನ್ಯತೆ ಕುರಿತು ಸ್ಪಷ್ಟತೆ ನೀಡುವಂತೆ ಕೋರಿ ಜಿಪಿಬಿಎಲ್‌ ಪರವಾಗಿ ಬಿಟ್‌ ಸ್ಪೋರ್ಟ್ ಕಳೆದ ಒಂದು ವರ್ಷದಲ್ಲಿ 40ಕ್ಕೂ ಹೆಚ್ಚು ಬಾರಿ ಬಿಎಐ ಸಂಪರ್ಕಿಸಿದೆ. ಇಮೇಲ್, ಪತ್ರಗಳು, ಫೋನ್‌ ಕರೆಗಳು ಮತ್ತು ಮೊಬೈಲ್ ಸಂದೇಶಗಳ ಮೂಲಕ ಸಂಪರ್ಕಿಸಲಾಗಿದೆ. ಆದರೆ ಯಾವುದಕ್ಕೂ ಪ್ರತಿಕ್ರಿಯೆಯನ್ನು ಬಿಎಐ ನೀಡಿಲ್ಲವೆಂಬುದನ್ನು ನ್ಯಾಯಾಲಯಕ್ಕೆ ಸ್ಪಷ್ಟಪಡಿಸಲಾಯಿತು‘ ಎಂದು ಜಿಪಿಬಿಎಲ್ ಮೂಲಗಳು ತಿಳಿಸಿವೆ. ‘ಟೂರ್ನಿಗೆ ಕೇವಲ ಒಂದು ತಿಂಗಳು ಬಾಕಿ ಇರುವಾಗ, ನೋಂದಾಯಿತ ಆಟಗಾರರು ಗೊಂದಲ್ಲಿದ್ದರು. ಅದಕ್ಕಾಗಿ ಶೀಘ್ರ ನಿರ್ಣಯ ಕೈಗೊಳ್ಳುವುದು ನಮ್ಮ ಉದ್ದೇಶವಾಗಿತ್ತು. ಹಾಗಾಗಿ ನ್ಯಾಯಾಲಯದ ಮೊರೆ ಹೋದೆವು. ನಾವು ಕ್ರೀಡೆಯನ್ನು ಉತ್ತೇಜಿಸಲು ಮತ್ತು ಆಟಗಾರರಿಗೆ ಆರ್ಥಿಕವಾಗಿ ಸಹಾಯ ಮಾಡುತ್ತಿದ್ದೇವೆ. ಇದರಿಂದ ಅವರು ತಮ್ಮ ವೃತ್ತಿಜೀವನವನ್ನು ಮುಂದುವರಿಸಲು ಸಾಧ್ಯವಾಗುತ್ತದೆ‘ ಎಂದು ಜಿಪಿಬಿಎಲ್ ಲೀಗ್ ಆಯುಕ್ತ ಪ್ರಶಾಂತ್ ರೆಡ್ಡಿ ಹೇಳಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.