ವಿಶ್ವಕಪ್: ಭಾರತ–ಪಾಕ್ ಪಂದ್ಯ ದಿನಾಂಕ ಬದಲು? ನವದೆಹಲಿ: ಅಹಮದಾಬಾದಿನಲ್ಲಿ ಆಯೋಜಿಸಲಾಗಿರುವ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯದ ದಿನಾಂಕ ಬದಲಾಗುವ ಸಾಧ್ಯತೆ ಇದೆ. ಈ ಮೊದಲು ವೇಳಾಪಟ್ಟಿಯಲ್ಲಿ ಪ್ರಕಟವಾದಂತೆ ಭಾರತ ಮತ್ತು ಪಾಕ್ ಅಕ್ಟೋಬರ್ 15ರಂದು ಮುಖಾಮುಖಿಯಾಗಲಿವೆ. ಆದರೆ ಇದೀಗ ಅ.14ರಂದೇ ಪಂದ್ಯ ನಡೆಯುವ ಸಾಧ್ಯತೆ ಇದೆ. ಈ ಬದಲಾವಣೆಯಿಂದಾಗಿ ಪಂದ್ಯ ನೋಡಲು ದೇಶ, ವಿದೇಶಗಳಿಂದ ಬರುತ್ತಿರುವ ಅಭಿಮಾನಿಗಳು ತೊಂದರೆಗೊಳಗಾಗುವ ಆತಂಕದಲ್ಲಿದ್ದಾರೆ. ವಿಶ್ವಕಪ್ ವೇಳಾಪಟ್ಟಿ ಪ್ರಕಟವಾದ ದಿನದಿಂದಲೇ ಅಹಮದಾಬಾದಿನ ಹೋಟೆಲ್ ಕೋಣೆಗಳ ದರ ಹಾಗೂ ವಿಮಾನ ಪ್ರಯಾಣದ ದರಗಳು ಗಗನಕ್ಕೇರಿವೆ. ‘ಅ. 15ರಂದು ನವರಾತ್ರಿ ಆರಂಭವಾಗುತ್ತಿದೆ. ಆದ್ದರಿಂದ ಸ್ಥಳೀಯ ಭದ್ರತಾ ಇಲಾಖೆಗಳು ಈ ಪಂದ್ಯದ ದಿನಾಂಕ ಬದಲಾವಣೆ ಮಾಡಲು ಕೇಳಿದ್ದವು. ನವರಾತ್ರಿ ಹಾಗೂ ಪಂದ್ಯಕ್ಕೆ ಭದ್ರತಾ ಸಿಬ್ಬಂದಿ ನಿಯೋಜನೆ ಕಷ್ಟವಾಗುವುದರಿಂದ ಪಂದ್ಯದ ದಿನಾಂಕ ಬದಲಿಸುವ ಪ್ರಯತ್ನಗಳು ನಡೆದಿವೆ‘ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಈ ಬಗ್ಗೆ ಐಸಿಸಿ ಮತ್ತು ಬಿಸಿಸಿಐ ಮಾತುಕತೆ ನಡೆಸಿ ನಿರ್ಧಾರ ಕೈಗೊಳ್ಳಬೇಕಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.