ಸನ್‌ರೈಸರ್ಸ್ ಹೈದರಾಬಾದ್‌ಗೆ ವೆಟೋರಿ ಮುಖ್ಯ ಕೋಚ್‌, ಬ್ರಯಾನ್‌ ಲಾರಾಗೆ ಕೊಕ್‌ ಹೈದರಾಬಾದ್: ಸನ್‌ರೈಸರ್ಸ್ ಹೈದರಾಬಾದ್‌ ತಂಡ ಡೇನಿಯಲ್‌ ವೆಟೋರಿ ಅವರನ್ನು ಮುಖ್ಯ ಕೋಚ್‌ ಆಗಿ ನೇಮಕ ಮಾಡಿರುವುದಾಗಿ ಸೋಮವಾರ ಪ್ರಕಟಿಸಿದೆ. ಎರಡು ವರ್ಷಗಳ ಕಾಲ ಆ ಸ್ಥಾನದಲ್ಲಿದ್ದ ಬ್ರಯಾನ್‌ ಲಾರಾ ಅವರನ್ನು ಕೈಬಿಟ್ಟಿದೆ. ನ್ಯೂಜಿಲೆಂಡ್‌ ತಂಡದ ಮಾಜಿ ನಾಯಕ ವೆಟೋರಿ ಐಪಿಎಲ್‌ನಲ್ಲಿ ಎರಡನೇ ಬಾರಿ ತಂಡವೊಂದಕ್ಕೆ ಕೋಚ್‌ ಆಗಿದ್ದಾರೆ. ಈ ಹಿಂದೆ 2014 ರಿಂದ 2018ರವರೆಗೆ ರಾಯಲ್ಸ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಕೋಚ್‌ ಆಗಿದ್ದರು. ವೆಟೋರಿ ಸಮೃದ್ಧ ಕೋಚಿಂಗ್ ಅನುಭವ ಹೊಂದಿದ್ದಾರೆ. ಇತ್ತೀಚಿನವರೆಗೂ ಆಸ್ಟ್ರೇಲಿಯಾ ತಂಡದ ಸಹಾಯಕ ಕೋಚ್‌ ಆಗಿದ್ದ ಅವರು, ಕೆಲಕಾಲ ಬಾಂಗ್ಲಾದೇಶ ತಂಡಕ್ಕೆ ಸ್ಪಿನ್‌ ಕನ್ಸಲ್ಟೆಂಟ್‌ ಆಗಿಯೂ ಕೆಲಸ ಮಾಡಿದ್ದಾರೆ. ‘ಕೀವಿ ದಂತಕತೆ ಡೇನಿಯಲ್ ವೆಟೋರಿ ‘ಆರೆಂಜ್‌ ಆರ್ಮಿ’ ಹೆಡ್‌ ಕೋಚ್‌ ಆಗಿ ಸೇರ್ಪಡೆ ಆಗುತ್ತಿದ್ದಾರೆ’ ಎಂದು ಸನ್‌ರೈಸರ್ಸ್‌ ಟ್ವಿಟರ್‌ ಹ್ಯಾಂಡಲ್‌ನಲ್ಲಿ ತಿಳಿಸಲಾಗಿದೆ. ಈ ಹಿಂದೆ ಆರ್‌ಸಿಬಿ ತಂಡಕ್ಕೆ ಕೋಚ್‌ ಆಗಿದ್ದಾಗ ಅವರು 2015ರಲ್ಲಿ ತಂಡವನ್ನು ಪ್ಲೇ ಆಫ್‌ ಹಂತಕ್ಕೆ, 2016ರಲ್ಲಿ ಫೈನಲ್‌ಗೆ ತಲುಪಿಸುವಲ್ಲಿ ಮಾರ್ಗದರ್ಶನ ಮಾಡಿದ್ದರು. ಲಾರಾ ಅವರಿಗಿಂತ ಮೊದಲು ಟಾಮ್‌ ಮೂಡಿ ಅವರು ಸನ್‌ರೈಸರ್ಸ್‌ ಹೆಡ್‌ ಕೋಚ್‌ ಆಗಿದ್ದರು. ಲಾರಾ ಅವರು ಕೋಚ್‌ ಆಗಿದ್ದ ಅವಧಿಯಲ್ಲಿ ಸನ್‌ ರೈಸರ್ಸ್‌ ಪ್ರದರ್ಶನ ನಿರಾಶಾದಾಯಕವಾಗಿದ್ದು ಆ ತಂಡ 10ನೇ ಸ್ಥಾನಕ್ಕೆ ಇಳಿದಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.