ಕ್ರಿಕೆಟ್‌ ಟಿ–20: ಯುವ ಬ್ಯಾಟರ್‌ಗಳ ಮೇಲೆ ಒತ್ತಡ ಪ್ರಾವಿಡೆನ್ಸ್‌ (ಗಯಾನಾ): ಕ್ರಿಕೆಟ್‌ನ ಚುಟುಕು ಮಾದರಿಯಲ್ಲಿ ಭಾರತದ ಯುವ ಆಟಗಾರರಿಂದ ನಿರೀಕ್ಷಿತ ಬ್ಯಾಟಿಂಗ್‌ ಪ್ರದರ್ಶನ ಬರುತ್ತಿಲ್ಲ. ಹೀಗಾಗಿ ಅಪರೂಪ ಎಂಬಂತೆ ಭಾರತ ತಂಡ, ವೆಸ್ಟ್‌ ಇಂಡೀಸ್‌ನಲ್ಲಿ ಸರಣಿ ಸೋಲಿನ ಆತಂಕ ಎದುರಿಸುತ್ತಿದೆ. ಇದನ್ನು ತಪ್ಪಿಸಿಕೊಳ್ಳಬೇಕಾದರೆ ಮಂಗಳವಾರ ನಡೆಯುವ ಮೂರನೇ ಪಂದ್ಯವನ್ನು ಪ್ರವಾಸಿ ತಂಡ ಗೆಲ್ಲಲೇಬೇಕಿದೆ. ಇಲ್ಲಿನ ನಿಧಾನಗತಿಯ ಪಿಚ್‌ಗಳು ಬ್ಯಾಟಿಂಗ್‌ ಸ್ನೇಹಿಯಲ್ಲ. ಆದರೆ ಭಾರತದ ಆಟಗಾರರು ವಿಶ್ವಾಸದಿಂದ ಆಡುತ್ತಿಲ್ಲ. ‘ನಾವು ಇನ್ನೂ 10–20 ರನ್‌ ಹೆಚ್ಚುವರಿಯಾಗಿ ಗಳಿಸಬೇಕಿತ್ತು. ಬ್ಯಾಟರ್‌ಗಳು ಹೆಚ್ಚು ಜವಾಬ್ದಾರಿಯಿಂದ ಆಡಬೇಕಾಗಿದೆ’ ಎಂದು ನಾಯಕ ಹಾರ್ದಿಕ್‌ ಪಾಂಡ್ಯ ಭಾನುವಾರ ಎರಡನೇ ಪಂದ್ಯದ ನಂತರ ಪ್ರತಿಕ್ರಿಯಿಸಿದ್ದು ಉಲ್ಲೇಖನೀಯ. ಸ್ಪಿನ್ನರ್‌ಗಳ ಉತ್ತಮ ಪ್ರದರ್ಶನದಿಂದ, ಭಾನುವಾರ ಕೊನೆಯ 3–4 ಓವರುಗಳಲ್ಲಿ ಭಾರತವು ಆತಿಥೇಯ ತಂಡಕ್ಕೆ ತಿರುಗೇಟು ನೀಡುವಂತೆ ಕಂಡಿತ್ತು. ಕೊನೆಗೂ ಎರಡು ವಿಕೆಟ್‌ಗಳಿಂದ ಗೆದ್ದ ಆತಿಥೇಯರು ಐದು ಪಂದ್ಯಗಳ ಸರಣಿಯಲ್ಲಿ 2–0 ಮುನ್ನಡೆ ಪಡೆದರು. ಭಾರತ 2016ರಲ್ಲಿ ಕೊನೆಯ ಬಾರಿ ಟಿ–20 ಸರಣಿಯಲ್ಲಿ ಕೆರಿಬಿಯನ್‌ ತಂಡಕ್ಕೆ ಸೋತಿತ್ತು. ಟಿ–20 ಪಂದ್ಯದಲ್ಲಿ ಆರಂಭದಿಂದಲೇ ರನ್‌ ವೇಗ ಹೆಚ್ಚಿಸಬೇಕಾಗುತ್ತದೆ. ಆದರೆ ಭಾರತ ಈ ಬಾರಿ ಯಶಸ್ಸು ಕಂಡಿಲ್ಲ. ಈ ನಿಟ್ಟಿನಲ್ಲಿ ಅಗ್ರ ಬ್ಯಾಟರ್‌ಗಳಾದ ಇಶಾನ್‌ ಕಿಶನ್‌, ಶುಭಮನ್ ಗಿಲ್‌, ಸೂರ್ಯಕುಮಾರ್‌ ಯಾದವ್ ಅವರ ಮೇಲೆ ಹೆಚ್ಚಿನ ಹೊಣೆಯಿದೆ. ಇವರು ವಿಫಲರಾಗುತ್ತಿರುವ ಕಾರಣ ಸಂಜು ಸ್ಯಾಮ್ಸನ್‌ ಮತ್ತು ತಿಲಕ್ ವರ್ಮಾ ಮೇಲೆ ಒತ್ತಡ ಬೀಳುತ್ತಿದೆ. ಭಾರತ ತಂಡದಲ್ಲಿ ಬದಲಾವಣೆ ಸಾಧ್ಯತೆ ಕಡಿಮೆ. ಹೆಬ್ಬೆರಳ ನೋವಿನಿಂದ ಎರಡನೇ ಪಂದ್ಯಕ್ಕೆ ಗೈರಾಗಿದ್ದ ಕುಲದೀಪ್ ಯಾದವ್ ಮಂಗಳವಾರದ ಪಂದ್ಯಕೆ ಲಭ್ಯರಿರುವರೇ ಎಂಬುದು ಸ್ಪಷ್ಟವಾಗಿಲ್ಲ. ಚೆನ್ನಾಗಿಯೇ ಬ್ಯಾಟ್‌ ಬೀಸುತ್ತಿರುವ ನಿಕೋಲಸ್‌ ಪೂರನ್ ಅವರಿಗೆ ಬೌಲರ್‌ಗಳು, ವಿಶೇಷವಾಗಿ ಸ್ಪಿನ್ನರ್‌ಗಳು ಲಗಾಮು ಹಾಕುವ ಅಗತ್ಯವಿದೆ. ಚಾಹಲ್, ರವಿ ಬಿಷ್ಣೋಯಿ ಅವರನ್ನು ದಂಡಿಸುವಲ್ಲೂ ಈ ಎಡಗೈ ಆಟಗಾರ ಒಂದಿಷ್ಟೂ ಅಳುಕಲಿಲ್ಲ. ಎರಡನೇ ಪಂದ್ಯದಲ್ಲಿ ಅಕ್ಷರ್‌ ಪಟೇಲ್‌ ಬೌಲಿಂಗ್‌ ಮಾಡಲಿಲ್ಲ. ಹಾರ್ದಿಕ್‌, ಅರ್ಷದೀಪ್ ಉತ್ತಮವಾಗಿ ಬೌಲ್‌ ಮಾಡಿದ್ದಾರೆ. ಒಟ್ಟಾರೆ, ಸ್ಪಿನ್ನರ್‌ಗಳಲ್ಲಿ ಚಾಹಲ್‌ ಪರಿಣಾಮಕಾರಿ ಆಗಿದ್ದಾರೆ. ಬಿಷ್ಣೋಯಿ ಅವರ ಗೂಗ್ಲಿ ಎಸೆತಗಳು ಹಿಂದಿನಂತೆ ಅಪಾಯ ಒಡ್ಡುತ್ತಿಲ್ಲ. ಧಾರಾಳಿ ಆದ ಮುಕೇಶ್ ಬದಲು ಆವೇಶ್ ಖಾನ್ ಅಥವಾ ಉಮ್ರಾನ್ ಮಲಿಕ್ ಅವಕಾಶ ಪಡೆಯಬಹುದು. ಇನ್ನೊಂದೆಡೆ ವೆಸ್ಟ್‌ ಇಂಡೀಸ್‌ ಏಳು ವರ್ಷಗಳ ನಂತರ ಮೊದಲ ಬಾರಿ ಭಾರತ ವಿರುದ್ಧ ಸರಣಿಯೊಂದನ್ನು ಗೆಲ್ಲುವ ಸುವರ್ಣಾವಕಾಶ ಹೊಂದಿದೆ. ಎದುರಾಳಿ ತಂಡದ ರೀತಿಯಲ್ಲೇ ವೆಸ್ಟ್‌ ಇಂಡೀಸ್‌ ತಂಡದ ಹೆಚ್ಚಿನ ಬ್ಯಾಟರ್‌ಗಳು ವಿಫಲರಾಗಿದ್ದಾರೆ. ಆದರೆ ಪೂರನ್ ಆಟದಿಂದಾಗಿ ಗೆಲುವು ಸಾಧಿಸುತ್ತಿದೆ. ಆತಿಥೇಯ ತಂಡದ ಬೌಲರ್‌ಗಳು ಉತ್ತಮ ನಿರ್ವಹಣೆ ತೋರಿದ್ದು, ಅದನ್ನು ಮುಂದುವರಿಸುವ ಉತ್ಸಾಹದಲ್ಲಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.