ಮಯಂಕ್ ಪಡೆಗೆ ದೇವಧರ್ ಟ್ರೋಫಿ ಪುದುಚೇರಿ: ಮಯಂಕ್ ಅಗರವಾಲ್ ನಾಯಕತ್ವದ ದಕ್ಷಿಣ ವಲಯ ತಂಡವು ದೇವಧರ್ ಟ್ರೋಫಿಗೆ ಮುತ್ತಿಕ್ಕಿತು. ಈ ಬಾರಿಯ ದೇಶಿ ಕ್ರಿಕೆಟ್ ಋತುವಿನಲ್ಲಿ ದಕ್ಷಿಣ ವಲಯ ಬಳಗವು ಜಯಿಸುತ್ತಿರುವ ಎರಡನೇ ಟ್ರೋಫಿ ಇದಾಗಿದೆ. ಒಂದು ತಿಂಗಳ ಹಿಂದೆ ಹನುಮವಿಹಾರಿ ನಾಯಕತ್ವದ ದಕ್ಷಿಣ ವಲಯವು ದುಲೀಪ್ ಟ್ರೋಫಿ ಜಯಿಸಿತ್ತು. ಆಗ ಉಪನಾಯಕರಾಗಿದ್ದ ಬೆಂಗಳೂರಿನ ಮಯಂಕ್, ಈ ಟೂರ್ನಿಯಲ್ಲಿ ತಂಡವನ್ನು ಮುನ್ನಡೆಸಿದರು. ಗುರುವಾರ ಇಲ್ಲಿ ನಡೆದ ಫೈನಲ್‌ನಲ್ಲಿ ತಂಡವು 45 ರನ್‌ಗಳಿಂದ ಪೂರ್ವ ವಲಯವನ್ನು ಮಣಿಸಿತು. ಒಟ್ಟು ಒಂಬತ್ತನೇ ಸಲ ಈ ಪ್ರಶಸ್ರಿಯನ್ನು ತನ್ನದಾಗಿಸಿಕೊಂಡಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ದಕ್ಷಿಣ ಬಳಗದ ಆರಂಭಿಕ ಬ್ಯಾಟರ್ ರೋಹನ್ ಕುನ್ನುಮ್ಮಾಳ್ (107; 75ಎ, 4X11, 6X4) ಮತ್ತು ಮಯಂಕ್ (63; 83ಎ, 4X4) ಮೊದಲ ವಿಕೆಟ್ ಜೊತೆಯಾಟದಲ್ಲಿ 181 ರನ್ ಸೇರಿಸಿದರು. ಇದರೊಂದಿಗೆ ತಂಡವು 50 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 328 ರನ್‌ ಗಳಿಸಿತು. ಇದಕ್ಕುತ್ತರವಾಗಿ ಪೂರ್ವ ವಲಯವು 46.1 ಓವರ್‌ಗಳಲ್ಲಿ 283 ರನ್‌ ಗಳಿಸಿತು. ಅಗ್ರಕ್ರಮಾಂಕದ ಬ್ಯಾಟರ್‌ಗಳು ವೈಫಲ್ಯ ಅನುಭವಿಸಿದರು. ಆದರೆ ರಿಯಾನ್ ಪರಾಗ್ (95; 65ಎ) ಮತ್ತು ಕುಮಾರ್ ಕುಶಾಗ್ರ (68; 58ಎ) ಗೆಲುವಿನ ಭರವಸೆ ಮೂಡಿಸಿದ್ದರು. ಆರನೇ ವಿಕೆಟ್ ಜೊತೆಯಾಟದಲ್ಲಿ 148 ರನ್‌ ಗಳಿಸಿದರು. ಇವರಿಬ್ಬರೂ ಕ್ರೀಸ್‌ನಲ್ಲಿರುವವರೆಗೂ ಪೂರ್ವ ತಂಡವು ಜಯದ ಕನಸು ಕಂಡಿತ್ತು. ರಿಯಾನ್ ಐದು ಸಿಕ್ಸರ್ ಸಿಡಿಸಿದರು. ಆದರೆ, 38ನೇ ಓವರ್‌ನಲ್ಲಿ ವಾಷಿಂಗ್ಟನ್ ಸುಂದರ್ ಅವರು ರಿಯಾನ್ ಪರಾಗ್ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದರು. ಜೊತೆಯಾಟ ಮುರಿಯಿತು. ಆದರೆ ಕುಶಾಗ್ರ ಸ್ವಲ್ಪ ಹೊತ್ತು ಹೋರಾಟ ಮುಂದುವರಿಸಿದರು. ಅವರು ಅರ್ಧಶತಕ ಗಳಿಸಿದರು. ಮೂರು ಸಿಕ್ಸರ್ ಮತ್ತು ಆರು ಬೌಂಡರಿಗಳನ್ನು ಹೊಡೆದರು. ಅವರಿಗೂ ವಾಷಿಂಗ್ಟನ್ ಪೆವಿಲಿಯನ್ ದಾರಿ ತೋರಿಸಿದರು. ಕರ್ನಾಟಕದ ‘ತ್ರಿವಳಿ‘ ಮಧ್ಯಮವೇಗಿಗಳಾದ ವಿದ್ವತ್ ಕಾವೇರಪ್ಪ, ವಾಸುಕಿ ಕೌಶಿಕ್ ಮತ್ತು ವೈಶಾಖ ವಿಜಯಕುಮಾರ್ ತಲಾ ಎರಡು ವಿಕೆಟ್ ಗಳಿಸಿದರು. ಇದರಿಂದಾಗಿ ಅಗ್ರ ಬ್ಯಾಟರ್‌ಗಳು ವಿಫಲರಾದರು. ಈ ಟೂರ್ನಿಯಲ್ಲಿ ಮಯಂಕ್ ಬಳಗವು ರೌಂಡ್ ರಾಬಿನ್ ಲೀಗ್‌ನಲ್ಲಿ ಎಲ್ಲ ಪಂದ್ಯಗಳನ್ನೂ ಗೆದ್ದು ಫೈನಲ್ ಪ್ರವೇಶಿಸಿತ್ತು. ಸಂಕ್ಷಿಪ್ತ ಸ್ಕೋರು: ದಕ್ಷಿಣ ವಲಯ: 50 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 328 (ರೋಹನ್ ಕುನ್ನುಮಾಳ್ 107, ಮಯಂಕ್ ಅಗರವಾಲ್ 63, ಎನ್. ಜಗದೀಶನ್ 54, ರೋಹಿತ್ ರಾಯುಡು 26, ಸಾಯಿಕಿಶೋರ್ ಔಟಾಗದೆ 24, ಶಹಬಾಜ್ ಅಹಮದ್ 55ಕ್ಕೆ2, ರಿಯಾನ್ ಪರಾಗ್ 68ಕ್ಕೆ2, ಉತ್ಕರ್ಷ್ ಸಿಂಗ್ 50ಕ್ಕೆ2) ಪೂರ್ವ ವಲಯ: 46.1 ಓವರ್‌ಗಳಲ್ಲಿ 283 (ಸುದೀಪ್ ಕುಮಾರ್ ಘರಮಿ 41, ಸೌರಭ್ ತಿವಾರಿ 28, ರಿಯಾನ್ ಪರಾಗ್ 95, ಕುಮಾರ ಕುಶಾಗ್ರ 68, ವಿದ್ವತ್ ಕಾವೇರಪ್ಪ 61ಕ್ಕೆ2, ವಿ. ಕೌಶಿಕ್ 49ಕ್ಕೆ2, ವೈಶಾಖ ವಿಜಯಕುಮಾರ್ 59ಕ್ಕೆ2, ವಾಷಿಂಗ್ಟನ್ ಸುಂದರ್ 60ಕ್ಕೆ3, ಆರ್. ಸಾಯಿಕಿಶೋರ್ 45ಕ್ಕೆ1) ಫಲಿತಾಂಶ: ದಕ್ಷಿಣ ವಲಯ ತಂಡಕ್ಕೆ 45 ರನ್‌ ಜಯ. ಒಂಬತ್ತನೇ ಬಾರಿ ಪ್ರಶಸ್ತಿ ಜಯಿಸಿದ ದಕ್ಷಿಣ ವಲಯ ಮೊದಲ ವಿಕೆಟ್‌ ಜೊತೆಯಾಟದಲ್ಲಿ 181 ರನ್ ಸೇರಿಸಿದ ಮಯಂಕ್–ರೋಹನ್ ಪ್ರಸಕ್ತ ದೇಶಿ ಋತುವಿನ ಎರಡನೇ ಪ್ರಶಸ್ತಿ ಗೆದ್ದ ದಕ್ಷಿಣ ವಲಯ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.