ಭಾರತ ಅಂಧ ಮಹಿಳಾ ಕ್ರಿಕೆಟ್ ತಂಡದ ನಾಯಕಿ: ಕನಸುಗಳ ವಿಮಾನದಲ್ಲಿ ವರ್ಷಾ ಪಯಣ ಬೆಂಗಳೂರು: ಚಿತ್ರದುರ್ಗ ಜಿಲ್ಲೆಯ ಆದಿಬಾಲಾ ಗ್ರಾಮದ ವರ್ಷಾ ಉಮಾಪತಿಯ ಕಂಗಳ ದೃಷ್ಟಿ ಕುಂದಿದೆ. ಆದರೆ ಕನಸುಗಳಿಗೆ ಬರವಿಲ್ಲ. ಈ ಛಲಗಾತಿ ಈಗ ಭಾರತ ಅಂಧ ಮಹಿಳಾ ಕ್ರಿಕೆಟ್ ತಂಡದ ನಾಯಕಿಯಾಗಿದ್ದಾರೆ. ಆಗಸ್ಟ್ 20 ರಿಂದ 26ರವರೆಗೆ ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುವ ಅಂತರರಾಷ್ಟ್ರೀಯ ಅಂಧರ ಕ್ರೀಡಾ ಫೆಡರೇಷನ್ (ಐಬಿಎಸ್‌ಎ) ವಿಶ್ವ ಕ್ರೀಡಾಕೂಟದಲ್ಲಿ ತಂಡವು ಆಡಲಿದೆ. ಮಹಿಳೆಯರ ತಂಡದಲ್ಲಿ ಕರ್ನಾಟಕದ ನಾಯಕಿ ವರ್ಷಾ, ಗಂಗವ್ವ ಹರಿಜನ ಮತ್ತು ಟಿ.ಸಿ. ದೀಪಿಕಾ ಇದ್ದಾರೆ. ತಮ್ಮ ಸಾಧನೆಯ ಹಾದಿಯನ್ನು ವರ್ಷಾ ‘ಪ್ರಜಾವಾಣಿ‘ಯೊಂದಿಗೆ ಹಂಚಿಕೊಂಡರು. ‘ನನಗೆ ರೆಟಿನಾ ಪಿಗ್ಮೆಂಟೊಸ ಎಂಬ ಸಮಸ್ಯೆ ಇತ್ತು. ಬಾಲ್ಯದಲ್ಲಿ ಶೇ 20ರಷ್ಟು ಮಾತ್ರ ದೃಷ್ಟಿದೋಷ ಇತ್ತು. ಪಿಯುಸಿಯವರೆಗೂ ಸೈಕಲ್, ದ್ವಿಚಕ್ರ ವಾಹನ ಓಡಿಸಿಕೊಂಡು ಇದ್ದೆ. ಆದರೂ ನಿಧಾನವಾಗಿ ಅಂಧತ್ವ ಆವರಿಸುತ್ತಿತ್ತು. ಇದರಿಂದಾಗಿ ಸಂಬಂಧಿಕರು, ನೆರೆಹೊರೆಯವರು ನನ್ನ ತಂದೆ, ತಾಯಿಗೆ ಮಗಳನ್ನು ಮನೆಯಲ್ಲಿ ಕೂರಿಸಿ. ಓದುವುದು, ಬರೆಯುವುದು ಅವಳಿಂದ ಸಾಧ್ಯವಿಲ್ಲ ಎಂದು ಹೇಳಿದ್ದರು. ಕೆಲವರಂತೂ ತೀರಾ ಅಪಮಾನ ಮಾಡಿದ್ದರು. ಆದರೆ ಅಪ್ಪ, ಅಮ್ಮ, ಬೆಂಗಳೂರಿನಲ್ಲಿರುವ ಚಿಕ್ಕಮ್ಮ ಪುಷ್ಪಾ ಮತ್ತು ಚಿಕ್ಕಪ್ಪ ರಮೇಶ್ ಬೆಂಬಲಕ್ಕೆ ನಿಂತರು. ಅದರಿಂದಾಗಿ ಇವತ್ತು ಕ್ರಿಕೆಟ್‌ನಲ್ಲಿ ಇಷ್ಟು ಬೆಳೆಯಲು ಸಾಧ್ಯವಾಯಿತು‘ ಎಂದು ವರ್ಷಾ ಭಾವುಕರಾದರು. ಕೃಷಿಕರಾಗಿರುವ ಉಮಾಪತಿ ಮತ್ತು ಯಶೋಧಾ ದಂಪತಿಯ ಏಕೈಕ ಪುತ್ರಿ ವರ್ಷಾ ಅವರಿಗೆ ಈಗ ಬಹುತೇಕ ಪೂರ್ಣ ಅಂಧತ್ವ (ಬಿ 1 ಕೆಟಗರಿ) ಆವರಿಸಿದೆ. ಆದರೆ ಕ್ರಿಕೆಟ್‌ನಲ್ಲಿ ಆಲ್‌ರೌಂಡರ್‌ ಮಿಂಚುತ್ತಿದ್ದಾರೆ. ‘ಸಣ್ಣವಳಿದ್ದಾಗಿನಿಂದಲೂ ಆಟೋಟಗಳ ಬಗ್ಗೆ ಬಹಳ ಆಸಕ್ತಿ ಇತ್ತು. ಆದರೆ ಆಡುವ ಅವಕಾಶಗಳು ಕಡಿಮೆ ಇದ್ದವು. ಅಂಧತ್ವ ಕಾಡಲು ಆರಂಭಿಸಿದಾಗ ಇನ್ನೂ ನಿರಾಶೆ ಆಗಿತ್ತು. 2019ರಲ್ಲಿ ಕ್ರಿಕೆಟ್ ಆಡಲು ಆರಂಭಿಸಿದೆ. ಕಿಣಿ..ಕಿಣಿ.. ಸದ್ದು ಮಾಡುವ ಚೆಂಡಿನಲ್ಲಿ ಕ್ರಿಕೆಟ್ ಆಡುವ ಆಸಕ್ತಿ ಮೂಡಿತು ಸಮರ್ಥನಂ ಟ್ರಸ್ಟ್‌ ನಡೆಸುವ ವಾರ್ಷಿಕ ಶಿಬಿರಕ್ಕೆ ಸೇರಿಕೊಂಡೆ. ಆರಂಭದಲ್ಲಿ ಭಯ ಆಗಿತ್ತು. ಕೋಚ್ ಶಿಖಾ ಮತ್ತು ಟ್ರಸ್ಟ್‌ನ ಎಲ್ಲರೂ ಧೈರ್ಯ ತುಂಬಿದರು. ಆಲ್‌ರೌಂಡರ್ ಆಗಿ ರೂಪುಗೊಂಡೆ. ಹೋದ ವರ್ಷ ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಂದು ಶತಕ ಹೊಡೆದೆ. 13 ಎಸೆತಗಳಲ್ಲಿ ಅರ್ಧಶತಕ ಕೂಡ ಗಳಿಸಿದೆ. ಬಲಗೈ ಮಧ್ಯಮವೇಗದ ಬೌಲಿಂಗ್ ಕೂಡ ಮಾಡುತ್ತೇನೆ. ಒಂದು ಬಾರಿ ಹ್ಯಾಟ್ರಿಕ್ ಸಾಧನೆಯನ್ನೂ ಮಾಡಿದ್ದೆ‘ ಎಂದರು. ಬಿ.ಎ ಪದವಿ ಕೂಡ ಗಳಿಸಿರುವ ವರ್ಷಾ, ಕಂಪ್ಯೂಟರ್‌ ಕೂಡ ಕಲಿತಿದ್ದಾರೆ. ಕೆಲವು ತಂತ್ರಾಂಶಗಳನ್ನೂ ಕಲಿಯುತ್ತಿದ್ದಾರಂತೆ. ‘ಇಂಗ್ಲೆಂಡ್‌ಗೆ ಮೊದಲ ಸಲ ಹೋಗುತ್ತಿರುವೆ. ವಿಮಾನದಲ್ಲಿ ಪ್ರಯಾಣ ಮಾಡುವ ಬಾಲ್ಯದ ಕನಸು ಕೈಗೂಡುತ್ತಿದೆ. ದೇಶದ ತಂಡವನ್ನು ಮುನ್ನಡೆಸುವ ಅವಕಾಶ ಲಭಿಸಿದೆ. ಪ್ರಶಸ್ತಿ ಗೆದ್ದು ತ್ರಿವರ್ಣ ಧ್ವಜದ ಗೌರವ ಹೆಚ್ಚಿಸುವುದೇ ನನ್ನ ಗುರಿ‘ ಎಂದು ವರ್ಷಾ ಆತ್ಮವಿಶ್ವಾಸ ವ್ಯಕ್ತಪಡಿಸುತ್ತಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.