ಮೂರನೇ ಟಿ20 ಪಂದ್ಯ: ಸೂರ್ಯ ಅಬ್ಬರ; ವಿಂಡೀಸ್‌ ತಬ್ಬಿಬ್ಬು ಗಯಾನ (ಪಿಟಿಐ): ಸೂರ್ಯಕುಮಾರ್‌ ಯಾದವ್‌ ಅವರ ಅಬ್ಬರದ ಬ್ಯಾಟಿಂಗ್‌ ನೆರವಿನಿಂದ ಮೂರನೇ ಟಿ20 ಪಂದ್ಯದಲ್ಲಿ ವೆಸ್ಟ್ಇಂಡೀಸ್‌ ತಂಡವನ್ನು ಏಳು ವಿಕೆಟ್‌ಗಳಿಂದ ಮಣಿಸಿದ ಭಾರತ, ಸರಣಿ ಜಯದ ಕನಸನ್ನು ಜೀವಂತವಾಗಿರಿಸಿಕೊಂಡಿತು. ಮಂಗಳವಾರ ನಡೆದ ‘ಮಾಡು–ಮಾಡಿ’ ‍ಪಂದ್ಯದಲ್ಲಿ ಎದುರಾಳಿ ತಂಡವನ್ನು 5 ವಿಕೆಟ್‌ಗಳಿಗೆ 159 ರನ್‌ಗಳಿಗೆ ನಿಯಂತ್ರಿಸಿದ ಭಾರತ, ಆ ಬಳಿಕ 17.5 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 164 ರನ್‌ ಗಳಿಸಿ ಗೆಲುವಿನ ನಗು ಬೀರಿತು. ಐದು ಪಂದ್ಯಗಳ ಸರಣಿಯಲ್ಲಿ ವಿಂಡೀಸ್‌ 2–1 ರಿಂದ ಮುನ್ನಡೆಯಲ್ಲಿದೆ. ಸರಣಿ ಕೈವಶ ಮಾಡಿಕೊಳ್ಳಲು ಹಾರ್ದಿಕ್‌ ಪಾಂಡ್ಯ ಬಳಗಕ್ಕೆ ಕೊನೆಯ ಎರಡೂ ಪಂದ್ಯಗಳಲ್ಲಿ ಜಯ ಅನಿವಾರ್ಯ. ಹಳೆಯ ಲಯಕ್ಕೆ ಮರಳಿದ ಸೂರ್ಯಕುಮಾರ್‌ (83 ರನ್‌) ಅವರ ಬಿರುಸಿನ ಆಟ ಭಾರತದ ಗೆಲುವಿನ ಹಾದಿಯನ್ನು ಸುಗಮಗೊಳಿಸಿದರೆ, ತಿಲಕ್‌ ವರ್ಮಾ (ಔಟಾಗದೆ 49, 37 ಎ., 4X4, 6X1) ಮತ್ತೆ ಮಿಂಚಿದರು. ಸಾಧಾರಣ ಗುರಿ ಬೆನ್ನಟ್ಟಿದ ಭಾರತದ ಆರಂಭ ಚೆನ್ನಾಗಿರಲಿಲ್ಲ. ಚೊಚ್ಚಲ ಟಿ20 ಅಂತರರಾಷ್ಟ್ರೀಯ ಪಂದ್ಯವನ್ನಾಡಿದ ಯಶಸ್ವಿ ಜೈಸ್ವಾಲ್‌ (1) ವಿಫಲರಾದರೆ, ಶುಭಮನ್‌ ಗಿಲ್‌ (6) ಕೂಡಾ ಬೇಗನೇ ಮರಳಿದರು. ಮೂರನೇ ವಿಕೆಟ್‌ಗೆ ಜತೆಯಾದ ಸೂರ್ಯಕುಮಾರ್‌ ಮತ್ತು ತಿಲಕ್‌ ಅವರು ವಿಂಡೀಸ್‌ ಬೌಲಿಂಗ್‌ ದಾಳಿಯನ್ನು ಲೀಲಾಜಾಲವಾಗಿ ಎದುರಿಸಿದರು. ಈ ಜೋಡಿ 51 ಎಸೆತಗಳಲ್ಲಿ 87 ರನ್‌ಗಳನ್ನು ಕಲೆಹಾಕಿತು. ವಿಂಡೀಸ್ ಪ್ರವಾಸದಲ್ಲಿ ಇದುವರೆಗೆ ಮಿಂಚಲು ವಿಫಲವಾಗಿದ್ದ ಸೂರ್ಯಕುಮಾರ್‌ ಮೊದಲ ಎಸೆತದಲ್ಲೇ ಬೌಂಡರಿ ಗಳಿಸಿದರು. ಆ ಬಳಿಕ ಅವರಿಗೆ ತಡೆಯೊಡ್ಡಲು ಆತಿಥೇಯ ಬೌಲರ್‌ಗಳು ವಿಫಲರಾದರು. ಶತಕದತ್ತ ದಾಪುಗಾಲಿಟ್ಟ ಸೂರ್ಯ, 13ನೇ ಓವರ್‌ನಲ್ಲಿ ಅಲ್ಝರಿ ಜೋಸೆಫ್‌ಗೆ ವಿಕೆಟ್‌ ಒಪ್ಪಿಸಿದರು. ತಿಲಕ್‌ ಮತ್ತು ಹಾರ್ದಿಕ್‌ (ಔಟಾಗದೆ 20) ಗೆಲುವಿನ ವ್ಯವಹಾರ ಪೂರ್ಣಗೊಳಿಸಿದರು. ಕುಲದೀಪ್‌ ಕೈಚಳಕ: ಇದಕ್ಕೂ ಮುನ್ನ ಕುಲದೀಪ್‌ ಯಾದವ್ (28ಕ್ಕೆ 3) ತಮ್ಮ ಕೈಚಳದ ಮೂಲಕ ವಿಂಡೀಸ್‌ ತಂಡ ಬೃಹತ್‌ ಮೊತ್ತ ಪೇರಿಸದಂತೆ ನೋಡಿಕೊಂಡಿದ್ದರು. ಬ್ರೆಂಡನ್‌ ಕಿಂಗ್‌ (42 ರನ್‌, 42 ಎ.) ಮತ್ತು ರೋವ್ಮನ್‌ ಪೊವೆಲ್ (ಔಟಾಗದೆ 40, 19 ಎ.) ಆತಿಥೇಯರ ಪರ ಗಮನ ಸೆಳೆದರು. ಆರಂಭಿಕ ಜೋಡಿ ಕಿಂಗ್ ಮತ್ತು ಕೈಲ್ ಮೇಯರ್ಸ್ (25; 20ಎ) ಮೊದಲ ವಿಕೆಟ್‌ಗೆ 55 ರನ್ ಸೇರಿಸಿದರು. ಎಂಟನೇ ಓವರ್‌ನಲ್ಲಿ ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ ಎಸೆತದಲ್ಲಿ ಕೈಲ್ ಔಟಾಗುವುದರೊಂದಿಗೆ ಜೊತೆಯಾಟ ಮುರಿಯಿತು. 11ನೇ ಓವರ್‌ನಲ್ಲಿ ಚಾರ್ಲ್ಸ್‌ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದ ಕುಲದೀಪ್ ಯಾದವ್ ಸ್ಪಿನ್ ಮೋಡಿ ಮೆರೆದರು. 15ನೇ ಓವರ್‌ನಲ್ಲಿ ಕುಲದೀಪ್ ಎಸೆತದಲ್ಲಿ ನಿಕೊಲಸ್ ಪೂರನ್ (20 ರನ್‌, 12 ಎ.) ಔಟಾದರು. ವಿಕೆಟ್‌ಕೀಪರ್ ಸಂಜು ಸ್ಯಾಮ್ಸನ್ ಮಾಡಿದ ಚುರುಕಾದ ಸ್ಟಂಪಿಂಗ್‌ಗೆ ಪೂರನ್ ಔಟಾದರು. ಇದರಿಂದಾಗಿ ಭಾರತ ತಂಡ ಸಂಭ್ರಮಿಸಿತು. ಅದೇ ಓವರ್‌ನಲ್ಲಿ ಬ್ರೆಂಡನ್ ಕಿಂಗ್ ಕ್ಯಾಚ್ ಪಡೆದ ಕುಲದೀಪ್ ಕುಣಿದಾಡಿದರು. ವಿಳಂಬ: 30 ಯಾರ್ಡ್ ವೃತ್ತದ ರೇಖೆಯನ್ನು ಗುರುತಿಸಿ ಮಾರ್ಕಿಂಗ್ ಮಾಡುವುದು ವಿಳಂಬವಾದ ಕಾರಣ ಪಂದ್ಯವು ತುಸು ತಡವಾಗಿ ಆರಂಭವಾಯಿತು. ಜೈಸ್ವಾಲ್‌ ಪದಾರ್ಪಣೆ: ಮುಂಬೈನ ಯಶಸ್ವಿ ಜೈಸ್ವಾಲ್ ಈ ಪಂದ್ಯದ ಮೂಲಕ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಅವರು ವೆಸ್ಟ್ ಇಂಡೀಸ್‌ನಲ್ಲಿಯೇ ಈಚೆಗೆ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಸಂಕ್ಷಿಪ್ತ ಸ್ಕೋರು: ವೆಸ್ಟ್ ಇಂಡೀಸ್: 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 159 (ಬ್ರೆಂಡನ್ ಕಿಂಗ್ 42, ಕೈಲ್ ಮೇಯರ್ಸ್ 25, ನಿಕೊಲಸ್ ಪೂರನ್ 20, ರೊವ್ಮನ್ ಪೊವೆಲ್ ಔಟಾಗದೆ 40, ಕುಲದೀಪ್ ಯಾದವ್ 28ಕ್ಕೆ3, ಅಕ್ಷರ್ ಪಟೇಲ್ 24ಕ್ಕೆ1) ಭಾರತ: 17.5 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 164 (ಸೂರ್ಯಕುಮಾರ್‌ ಯಾದವ್ 83, ತಿಲಕ್‌ ವರ್ಮಾ ಔಟಾಗದೆ 49, ಹಾರ್ದಿಕ್‌ ಪಾಂಡ್ಯ ಔಟಾಗದೆ 20, ಅಲ್ಝರಿ ಜೋಸೆಫ್ 25ಕ್ಕೆ 2) ಫಲಿತಾಂಶ: ಭಾರತಕ್ಕೆ 7 ವಿಕೆಟ್‌ಗಳ ಗೆಲುವು ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.