T20I ಕ್ರಿಕೆಟ್‌ನಲ್ಲಿ ಅತಿ ವೇಗದ 100 ಸಿಕ್ಸರ್;ಹಿಟ್‌ಮ್ಯಾನ್ ದಾಖಲೆ ಮುರಿದ ಸೂರ್ಯ ಗಯಾನಾ: ಬಲಗೈ ಬ್ಯಾಟರ್ ಸೂರ್ಯಕುಮಾರ್ ಯಾದವ್, ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ವೇಗದ 100 ಸಿಕ್ಸರ್ ಸಿಡಿಸಿದ ದಾಖಲೆಗೆ ಭಾಜನರಾಗಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ಗಯಾನಾದಲ್ಲಿ ನಡೆದ ಮೂರನೇ ಟ್ವೆಂಟಿ-20 ಪಂದ್ಯದಲ್ಲಿ ಸೂರ್ಯ ಸ್ಮರಣೀಯ ದಾಖಲೆ ಬರೆದಿದ್ದಾರೆ. ಈ ಮೂಲಕ ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ದಾಖಲೆಯನ್ನು ಮುರಿದಿದ್ದಾರೆ. 49ನೇ ಟಿ20 ಇನಿಂಗ್ಸ್‌ನಲ್ಲಿ ಸೂರ್ಯಕುಮಾರ್ 100 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಇದೇ ಸಾಧನೆಯನ್ನು ರೋಹಿತ್ ಶರ್ಮಾ 84 ಇನಿಂಗ್ಸ್‌ನಲ್ಲಿ ಮಾಡಿದ್ದರು. ಒಟ್ಟಾರೆಯಾಗಿ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ವೇಗದ 100 ಸಿಕ್ಸರ್ ಸಿಡಿಸಿದ ದಾಖಲೆ ವೆಸ್ಟ್ ಇಂಡೀಸ್‌ನವರೇ ಆದ ಎವಿನ್ ಲೂಯಿಸ್ (42 ಇನಿಂಗ್ಸ್) ಅವರ ಹೆಸರಲ್ಲಿದೆ. ಸೂರ್ಯಕುಮಾರ್ ಯಾದವ್ ಅವರ ಬಿರುಸಿನ ಅರ್ಧಶತಕದ ಬಲದಿಂದ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಮೂರನೇ ಪಂದ್ಯದಲ್ಲಿ ಏಳು ವಿಕೆಟ್ ಅಂತರದ ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ, ಐದು ಪಂದ್ಯಗಳ ಟಿ20 ಸರಣಿಯನ್ನು ಜೀವಂತವಾಗಿರಿಸಿಕೊಂಡಿದೆ. ಮೊದಲೆರಡು ಪಂದ್ಯಗಳಲ್ಲಿ ಭಾರತ ಸೋಲು ಅನುಭವಿಸಿತ್ತು. 44 ಎಸೆತಗಳನ್ನು ಎದುರಿಸಿದ ಸೂರ್ಯ, 10 ಬೌಂಡರಿ ಹಾಗೂ ನಾಲ್ಕು ಸಿಕ್ಸರ್ ನೆರವಿನಿಂದ 83 ರನ್ ಗಳಿಸಿದರು. ರೋಹಿತ್, ಕೊಹ್ಲಿ ಸಾಲಿಗೆ ಸೂರ್ಯ... ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಸಿಕ್ಸರ್ ಗಳಿಸುವ ಮೂಲಕ ಸೂರ್ಯಕುಮಾರ್ ಯಾದವ್ ಅವರು, ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಸಾಲಿಗೆ ಸೇರ್ಪಡೆಯಾಗಿದ್ದಾರೆ. ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಬ್ಯಾಟರ್‌ಗಳ ಪಟ್ಟಿ: ರೋಹಿತ್ ಶರ್ಮಾ: 182 ವಿರಾಟ್ ಕೊಹ್ಲಿ: 117 ಸೂರ್ಯಕುಮಾರ್ ಯಾದವ್: 101 ಕೆ.ಎಲ್. ರಾಹುಲ್: 99 ಧವನ್ ದಾಖಲೆ ಮುರಿದ ಸೂರ್ಯ... ಭಾರತದ ಪರ ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಶಿಖರ್ ಧವನ್ ದಾಖಲೆಯನ್ನು ಸೂರ್ಯಕುಮಾರ್ ಮುರಿದಿದ್ದಾರೆ. ಈ ಮೂಲಕ ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದ್ದಾರೆ. ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ ಪರ ಗರಿಷ್ಠ ರನ್ ಸರದಾರರು: ವಿರಾಟ್ ಕೊಹ್ಲಿ: 4,008 ರೋಹಿತ್ ಶರ್ಮಾ: 3,853 ಕೆ.ಎಲ್. ರಾಹುಲ್: 2,265 ಸೂರ್ಯಕುಮಾರ್ ಯಾದವ್: 1,780 ಶಿಖರ್ ಧವನ್: 1,759 ಮಹೇಂದ್ರ ಸಿಂಗ್ ಧೋನಿ: 1,617 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.