| ದಕ್ಷಿಣ ಆಫ್ರಿಕಾಕ್ಕೆ ಹುಮ್ಮಸ್ಸು, ಆಸ್ಟ್ರೇಲಿಯಾಕ್ಕೆ ಒತ್ತಡ ಲಖನೌ: ಶ್ರೀಲಂಕಾ ವಿರುದ್ಧ ಮೊದಲ ಪಂದ್ಯದಲ್ಲಿ ಭರ್ಜರಿ ಜಯಗಳಿಸಿದ ಹುಮ್ಮಸ್ಸಿನಲ್ಲಿರುವ ದಕ್ಷಿಣ ಆಫ್ರಿಕಾ ತಂಡ, ವಿಶ್ವಕಪ್‌ ಪಂದ್ಯದಲ್ಲಿ ಗುರುವಾರ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಭಾರತ ವಿರುದ್ಧ ಸೋಲಿನಿಂದ ಪಾಠ ಕಲಿತಿರುವ ಆಸ್ಟ್ರೇಲಿಯಾ ಈ ಪಂದ್ಯಕ್ಕೆ ಬ್ಯಾಟಿಂಗ್ ಬಲಪಡಿಸಲು ಆಲ್‌ರೌಂಡರ್ ಮಾರ್ಕಸ್‌ ಸ್ಟೊಯಿನಿಸ್‌ ಅವರನ್ನು ಆಡಿಸುವ ಸಾಧ್ಯತೆಯಿದೆ. ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ, ವಿಶ್ವಕಪ್ ಆರಂಭವನ್ನು ನಿರೀಕ್ಷಿಸದ ರೀತಿ ಆರು ವಿಕೆಟ್‌ ಸೋಲಿನೊಡನೆ ಆರಂಭಿಸಿದೆ. ಬ್ಯಾಟಿಂಗ್‌ನಲ್ಲಿ ಯಾರೂ ಆಕ್ರಮಣಕಾರಿ ಮನೋಭಾವ ತೋರಲಿಲ್ಲ. ಹಿರಿಯ ಬ್ಯಾಟರ್‌ಗಳಾದ ಡೇವಿಡ್‌ ವಾರ್ನರ್ ಮತ್ತು ಸ್ಟೀವ್ ಸ್ಮಿತ್ ಅವರನ್ನು ಬಿಟ್ಟರೆ ಉಳಿದವರು 30 ರನ್‌ಗಳ ಗಡಿ ಕೂಡ ದಾಟಲಿಲ್ಲ. ತಂಡ ಸೋತ ರೀತಿ ‘ಚಿಂತಕರ ಚಾವಡಿ’ಯ ಕಳವಳಕ್ಕೆ ಕಾರಣವಾಗಿದೆ. ಚೆನ್ನೈ ಪಿಚ್‌ನಲ್ಲಿ ಭಾರತದ ಗುಣಮಟ್ಟದ ಸ್ಪಿನ್ ಎದುರಿಸಲು ಆಟಗಾರರು ಪರದಾಡಿದರು. ಜೊತೆಗೆ ಆ ತಂಡದಲ್ಲಿ ಆ್ಯಡಂ ಜಂಪಾ ಬಿಟ್ಟರೆ ನುರಿತ ಸ್ಪಿನ್ನರ್ ಇರಲಿಲ್ಲ. ಮ್ಯಾಕ್ಸ್‌ವೆಲ್‌ ಅವರ ಪಾರ್ಟ್‌ಟೈಂ ಸ್ಪಿನ್‌ ಪರಿಣಾಮಕಾರಿಯಾಗಲಿಲ್ಲ. ಇದೆಲ್ಲರ ಜೊತೆಗೆ ಸುರಕ್ಷಿತ ಫೀಲ್ಡರ್‌ ಎನಿಸಿದ ಮಿಚೆಲ್ ಮಾರ್ಷ್‌, ಕೊಹ್ಲಿ ಬ್ಯಾಟಿನಿಂದ ಚಿಮ್ಮಿದ ಕ್ಯಾಚ್‌ ನೆಲಕ್ಕೆ ಚೆಲ್ಲಿ ಎಡವಟ್ಟು ಮಾಡಿದ್ದು ಪಂದ್ಯದ ಗತಿಯನ್ನು ತಿರುಗಿಸಿತು. ಮಂಡಿನೋವಿನಿಂದ ಚೇತರಿಸಿಕೊಂಡಿರುವ ಸ್ಟೊಯಿನಿಸ್‌, ಕ್ಯಾಮೆರಾನ್ ಗ್ರೀನ್ ಜಾಗದಲ್ಲಿ ಆಡಬಹುದು. ತಂಡಕ್ಕೆ ಹಲವು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿರುವ ಅವರಿಗೆ ಈ ಕ್ರೀಡಾಂಗಣ ಪರಿಚಿತ. ಐಪಿಎಲ್‌ನಲ್ಲಿ ಅವರು ಇಲ್ಲಿನ ಲಖನೌ ಸೂಪರ್‌ಜೈಂಟ್ಸ್‌ಗೆ ಆಡಿದ್ದಾರೆ. ಇದೂ ಅವರಿಗೆ ನೆರವಾಗಬಹುದು. ಬೌಲಿಂಗ್‌ನಲ್ಲೂ ಅವರು ಕಮಿನ್ಸ್‌, ಹ್ಯಾಜಲ್‌ವುಡ್‌, ಸ್ಟಾರ್ಕ್‌ ಅವರಿಗೆ ಹೆಗಲು ನೀಡಬಲ್ಲರು. ಇನ್ನೊಂದೆಡೆ, ದಕ್ಷಿಣ ಆಫ್ರಿಕಾ, ಮೂವರ ಶತಕದೊಡನೆ ಮೊದಲ ಪಂದ್ಯದ ಅಮೋಘ ಗೆಲುವಿನಿಂದ ಉಮೇದಿನಲ್ಲಿದೆ. ಯಾವುದೇ ದಾಳಿಯನ್ನು ಪುಡಿಗಟ್ಟಬಲ್ಲ ಕ್ವಿಂಟನ್‌ ಡಿಕಾಕ್ ಈ ಮೂವರಲ್ಲಿ ಒಬ್ಬರಾಗಿದ್ದಾರೆ. ಅವರೂ, ಐಪಿಎಲ್‌ನಲ್ಲಿ ಲಖನೌ ತಂಡಕ್ಕೆ ಆಡುವವರು. ಅವರಿಗೂ ಇದು ಪರಿಚಿತ ತಾಣವೇ. ರಸಿ ವಾನ್‌ ಡರ್‌ಡಸೆ ಮತ್ತು ಏಡನ್ ಮರ್ಕರಂ ಕೂಡ ಅಪಾಯಕಾರಿ ಎಂಬುದು ಮೊದಲ ಪಂದ್ಯದಲ್ಲಿ ಸಾಬೀತಾಗಿದೆ. ನಾಯಕ ತೆಂಬಾ ಬವುಮಾ, ಆಕ್ರಮಣಕಾರಿ ಆಟಗಾರ ಡೇವಿಡ್‌ ಮಿಲ್ಲರ್‌, ಹೆನ್ರಿಕ್ ಕ್ಲಾಸೆನ್ ಹೀಗೆ ತಂಡದ ಬ್ಯಾಟಿಂಗ್ ಸರದಿ ಆಳವಾಗಿದೆ. ಟೀಕೆಗಳ ನಂತರ ಲಖನೌ ಕ್ರೀಡಾಂಗಣದ ಮಂದಗತಿಯ ಪಿಚ್‌ ಮರುನಿರ್ಮಾಣ ಮಾಡಲಾಗಿದೆ. ಇದು ಹೇಗೆ ವರ್ತಿಸಬಹುದೆಂಬುದು ನಿಗೂಢ. ಸ್ಪಿನ್‌ಗೆ ನೆರವಾದರೆ ದಕ್ಷಿಣ ಆಫ್ರಿಕನ್ನರು ತಬ್ರೇಜ್‌ ಸಂಶಿ ಅವರನ್ನು ಆಡಿಸಬೇಕಾದ ಪ್ರಲೋಭನೆಗೆ ಒಳಗಾಗಬಹುದು. ಎಡಗೈ ಸ್ಪಿನ್ನರ್ ಕೇಶವ ಮಹಾರಾಜ್ ತಂಡದ ಕಾಯಂ ಸ್ಪಿನ್ನರ್. ಆದರೆ ವೇಗದ ಬೌಲಿಂಗ್ ವಿಭಾಗ ಅಷ್ಟೇನೂ ಬಲಿಷ್ಠವಾಗಿಲ್ಲ. ಆ್ಯನ್ರಿಚ್‌ ನಾಕಿಯಾ ಅವರ ಅನುಪಸ್ಥಿತಿಯಲ್ಲಿ ಅನುಭವಿ ಕಗಿಸೊ ರಬಾಡಾ ಅವರು ಲುಂಗಿ ಗಿಡಿ ಮತ್ತು ಮಾರ್ಕೊ ಜಾನ್ಸೆನ್ ಅವರೊಂದಿಗೆ ಉತ್ತಮ ಪ್ರದರ್ಶನ ನೀಡಬೇಕಾದ ಒತ್ತಡದಲ್ಲಿದ್ದಾರೆ. ಮೊದಲ ಪಂದ್ಯದಲ್ಲಿ ಗೆದ್ದ ರೀತಿ ಮತ್ತು ಕಳೆದ ತಿಂಗಳು ಏಕದಿನ ಸರಣಿಯಲ್ಲಿ ಇದೇ ಎದುರಾಳಿ ಎದುರು 0–2 ಹಿನ್ನಡೆಯಿಂದ ಪುಟಿದೆದ್ದು 3–2ರಿಂದ ಸಾಧಿಸಿದ ಗೆಲುವು– ಈ ಅಂಶಗಳು ಗುರುವಾರದ ಪಂದ್ಯಕ್ಕೆ ದಕ್ಷಿಣ ಆಫ್ರಿಕಾದ ಮನೋಬಲ ಹೆಚ್ಚಿಸಬಲ್ಲವು. ಆದರೆ ಆಸ್ಟ್ರೇಲಿಯಾ ಛಲದ ಆಟಕ್ಕೆ ಹೆಸರಾಗಿದ್ದು, ಯಾವುದೇ ಹಂತದಲ್ಲಿ ಪುಟಿದೇಳಬಲ್ಲ ಸಾಮರ್ಥ್ಯ ಹೊಂದಿದೆ. ಪಂದ್ಯ ಆರಂಭ: ಮಧ್ಯಾಹ್ನ 2.00 ತಂಡಗಳು ಇಂತಿವೆ ದಕ್ಷಿಣ ಆಫ್ರಿಕಾ: ತೆಂಬಾ ಬವುಮಾ (ನಾಯಕ) ಜೆರಾಲ್ಡ್‌ ಕೊಯಟ್ಜಿ ಕ್ವಿಂಟನ್‌ ಡಿ ಕಾಕ್‌ ರೀಜಾ ಹೆಂಡ್ರಿಕ್ಸ್‌ ಮಾರ್ಕೊ ಜಾನ್ಸೆನ್ ಹೆನ್ರಿಚ್‌ ಕ್ಲಾಸೆನ್ ಕೇಶವ ಮಹಾರಾಜ್ ಏಡನ್‌ ಮರ್ಕರಂ ಡೇವಿಡ್‌ ಮಿಲ್ಲರ್‌ ಲುಂಗಿ ಗಿಡಿ ಆ್ಯಂಡಿಲೊ ಪಿಶುವಾಯೊ ಕಗಿಸೊ ರಬಾಡ ತಬ್ರೇಜ್ ಶಂಶಿ ರಸಿ ವಾನ್‌ಡರ್‌ ಡಸೆ ಲಿಝಾಡ್‌ ವಿಲಿಯಮ್ಸ್‌. ಆಸ್ಟ್ರೇಲಿಯಾ: ಪ್ಯಾಟ್‌ ಕಮಿನ್ಸ್‌ (ನಾಯಕ) ಸ್ಟೀವ್‌ ಸ್ಮಿತ್‌ ಅಲೆಕ್ಸ್‌ ಕ್ಯಾರಿ ಜೋಶ್‌ ಇಂಗ್ಲಿಷ್‌ ಸೀನ್ ಅಬೋಟ್ ಆ್ಯಷ್ಟನ್ ಅಗರ್ ಕ್ಯಾಮೆರಾನ್ ಗ್ರೀನ್‌ ಜೋಶ್‌ ಹೇಜಲ್‌ವುಡ್‌ ಟ್ರಾವಿಡ್‌ ಹೆಡ್‌್ ಮಿಚೆಲ್ ಮಾರ್ಷ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌ ಮಾರ್ಕಸ್‌ ಸ್ಟೊಯಿನಿಸ್‌ ಡೇವಿಡ್‌ ಮಿಲ್ಲರ್‌ ಆ್ಯಡಂ ಜಂಪಾ ಮತ್ತು ಮಿಚೆಲ್‌ ಸ್ಟಾರ್ಕ್‌. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.