ಮಹಾರಾಜ ಟ್ರೋಫಿ ಕ್ರಿಕೆಟ್‌: ಮೈಸೂರು ವಾರಿಯರ್ಸ್‌ಗೆ ಜಯ ಬೆಂಗಳೂರು: ನಾಯಕ ಕರುಣ್‌ ನಾಯರ್‌ ಅವರ ಬಿರುಸಿನ ಅರ್ಧಶತಕದ ನೆರವಿನಿಂದ ಮೈಸೂರು ವಾರಿಯರ್ಸ್‌ ತಂಡ, ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ 12 ರನ್‌ಗಳಿಂದ ಶಿವಮೊಗ್ಗ ಲಯನ್ಸ್‌ ತಂಡವನ್ನು ಮಣಿಸಿತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ವಾರಿಯರ್ಸ್‌, ನಿಗದಿತ ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 190 ರನ್‌ ಗಳಿಸಿತು. ಕರುಣ್‌ 33 ಎಸೆತಗಳಲ್ಲಿ 60 ರನ್‌ ಗಳಿಸಿದರು. ಅವರು 9 ಬೌಂಡರಿ ಹಾಗೂ ಒಂದು ಸಿಕ್ಸರ್‌ ಹೊಡೆದರು. ಸಿ.ಎ.ಕಾರ್ತಿಕ್‌ (46) ಮತ್ತು ಕರುಣ್‌ ಎರಡನೇ ವಿಕೆಟ್‌ಗೆ 90 ರನ್‌ ಸೇರಿಸಿದ್ದರಿಂದ ತಂಡ ಸವಾಲಿನ ಮೊತ್ತ ಪೇರಿಸಿತು. ಗುರಿ ಬೆನ್ನಟ್ಟಿದ ಲಯನ್ಸ್‌ 9 ವಿಕೆಟ್‌ಗಳಿಗೆ 178 ರನ್‌ ಗಳಿಸಲಷ್ಟೇ ಶಕ್ತವಾಯಿತು. ವಾರಿಯನ್ಸ್‌ ತಂಡದ ಎಂ.ವೆಂಕಟೇಶ್ (18ಕ್ಕೆ 3) ಪರಿಣಾಮಕಾರಿ ದಾಳಿ ನಡೆಸಿದರು. ಸತತ ಮೂರು ಗೆಲುವು ಪಡೆದಿದ್ದ ಲಯನ್ಸ್‌ಗೆ ಎದುರಾದ ಮೊದಲ ಸೋಲು ಇದು. ದಿನದ ಎರಡನೇ ಪಂದ್ಯದಲ್ಲಿ ಮಂಗಳೂರು ಡ್ರಾಗನ್ಸ್‌ ತಂಡ 23 ರನ್‌ಗಳಿಂದ ಬೆಂಗಳೂರು ಬ್ಲಾಸ್ಟರ್ಸ್‌ ವಿರುದ್ಧ ಗೆದ್ದಿತು. ಡ್ರಾಗನ್ಸ್‌ ತಂಡದ ಕೆ.ಸಿದ್ದಾರ್ಥ್‌ (ಔಟಾಗದೆ 100, 64 ಎ., 4X9, 6X4) ಶತಕ ಗಳಿಸಿದ ಮಿಂಚಿದರು. ಸಂಕ್ಷಿಪ್ತ ಸ್ಕೋರ್‌: ಮೈಸೂರು ವಾರಿಯರ್ಸ್ 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 190 (ಸಿ.ಎ.ಕಾರ್ತಿಕ್ 46, ಕರುಣ್‌ ನಾಯರ್ 60, ಮನೋಜ್‌ ಭಾಂಡಗೆ 29, ವಾಸುಕಿ ಕೌಶಿಕ್‌ 34ಕ್ಕೆ 2, ಕ್ರಾಂತಿ ಕುಮಾರ್‌ 35ಕ್ಕೆ 2) ಶಿವಮೊಗ್ಗ ಲಯನ್ಸ್ 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 178 (ರೋಹನ್‌ ಕದಂ 31, ರೋಹನ್‌ ನವೀನ್‌ 28, ಅಭಿನವ್‌ ಮನೋಹರ್‌ 26, ಎಸ್‌.ಶಿವರಾಜ್‌ ಔಟಾಗದೆ 29, ಎಂ.ವೆಂಕಟೇಶ್ 18ಕ್ಕೆ 3, ಸಿ.ಎ.ಕಾರ್ತಿಕ್ 28ಕ್ಕೆ 2) ಫಲಿತಾಂಶ: ಮೈಸೂರು ವಾರಿಯರ್ಸ್‌ಗೆ 12 ರನ್‌ ಗೆಲುವು ಮಂಗಳೂರು ಡ್ರಾಗನ್ಸ್‌ 20 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 194 (ಕೆ.ಸಿದ್ದಾರ್ಥ್‌ ಔಟಾಗದೆ 100, ಬಿ.ಯು.ಶಿವಕುಮಾರ್‌ 40, ಅನಿರುದ್ಧ ಜೋಶಿ ಔಟಾಗದೆ 31, ರಿಷಿ ಬೋಪಣ್ಣ 40ಕ್ಕೆ 1) ಬೆಂಗಳೂರು ಬ್ಲಾಸ್ಟರ್ಸ್ 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 171 (ಡಿ.ನಿಶ್ಚಲ್‌ 61, ಶುಭಾಂಗ್‌ ಹೆಗ್ಡೆ 45, ಆದಿತ್ಯ ಗೋಯಲ್‌ 35ಕ್ಕೆ 3, ಸಂಕಲ್ಪ್‌ 20ಕ್ಕೆ 2) ಫಲಿತಾಂಶ: ಮಂಗಳೂರು ಡ್ರಾಗನ್ಸ್‌ಗೆ 23 ರನ್‌ ಗೆಲುವು ಇಂದಿನ ಪಂದ್ಯಗಳು ಬೆಂಗಳೂರು ಬ್ಲಾಸ್ಟರ್ಸ್– ಮೈಸೂರು ವಾರಿಯರ್ಸ್ (ಮಧ್ಯಾಹ್ನ 1 ರಿಂದ) ಹುಬ್ಬಳ್ಳಿ ಟೈಗರ್ಸ್– ಶಿವಮೊಗ್ಗ ಲಯನ್ಸ್ (ಸಂಜೆ 5.30 ರಿಂದ) ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌ ಕನ್ನಡ, ಫ್ಯಾನ್‌ಕೋಡ್‌ ಆ್ಯಪ್ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.