ಟಿ20 ಕ್ರಿಕೆಟ್: ವೆಸ್ಟ್‌ ಇಂಡೀಸ್‌ ವಿರುದ್ಧ ಭಾರತಕ್ಕೆ 9 ವಿಕೆಟ್‌ಗಳ ಭರ್ಜರಿ ಜಯ ಲಾಡೆರ್‌ಹಿಲ್, ಅಮೆರಿಕ (ಪಿಟಿಐ): ಯಶಸ್ವಿ ಜೈಸ್ವಾಲ್‌ ಮತ್ತು ಶುಭಮಲ್‌ ಗಿಲ್‌ ಅವರ ಬಿರುಸಿನ ಅರ್ಧಶತಕಗಳ ನೆರವಿನಿಂದ ಭಾರತ ತಂಡ, ವೆಸ್ಟ್‌ ಇಂಡೀಸ್‌ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿ 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಶನಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವಿಂಡೀಸ್‌ ತಂಡ 8 ವಿಕೆಟ್‌ಗಳಿಗೆ 178 ರನ್ ಗಳಿಸಿದರೆ, ಹಾರ್ದಿಕ್‌ ಪಾಂಡ್ಯ ಬಳಗ ಇನ್ನೂ ಮೂರು ಓವರ್‌ಗಳು ಇರುವಂತೆಯೇ 1 ವಿಕೆಟ್‌ ಕಳೆದುಕೊಂಡು ಗೆಲುವಿನ ಗಡಿ ದಾಟಿತು. ಈ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ2–2 ರಲ್ಲಿ ಸಮಬಲ ಸಾಧಿಸಿತು. ಸರಣಿಯ ಐದನೇ ಹಾಗೂ ನಿರ್ಣಾಯಕ ಪಂದ್ಯ ಭಾನುವಾರ ಇದೇ ಕ್ರೀಡಾಂಗಣದಲ್ಲಿ ನಡೆಯಲಿದೆ. ಸವಾಲಿನ ಗುರಿ ಬೆನ್ನಟ್ಟಿದ ಭಾರತ ತಂಡಕ್ಕೆ ಜೈಸ್ವಾಲ್‌ (ಔಟಾಗದೆ 84, 51 ಎ., 4X11, 6X3) ಮತ್ತು ಗಿಲ್‌ (77 ರನ್, 47 ಎ., 4X3, 6X5) ಮೊದಲ ವಿಕೆಟ್‌ಗೆ 15.3 ಓವರ್‌ಗಳಲ್ಲಿ 165 ರನ್‌ ಸೇರಿಸಿ ಗೆಲುವಿನ ಹಾದಿ ಸುಗಮಗೊಳಿಸಿದರು. ವಿಂಡೀಸ್‌ ತಂಡದ ವೇಗ ಮತ್ತು ಸ್ಪಿನ್‌ ದಾಳಿಯನ್ನು ಇವರು ಸಮರ್ಥವಾಗಿ ಎದುರಿಸಿ ನಿಂತರು. ಟಿ20 ಕ್ರಿಕೆಟ್‌ನಲ್ಲಿ ಭಾರತದ ಪರ ಮೊದಲ ವಿಕೆಟ್‌ ದಾಖಲಾದ ಅತಿದೊಡ್ಡ ಜತೆಯಾಟದ ದಾಖಲೆಯನ್ನು ಇವರು ಸರಿಗಟ್ಟಿದರು. ಕೆ.ಎಲ್‌.ರಾಹುಲ್‌ ಮತ್ತು ರೋಹಿತ್‌ ಶರ್ಮಾ ಅವರು 2017 ರಲ್ಲಿ ಇಂದೋರ್‌ನಲ್ಲಿ ಶ್ರೀಲಂಕಾ ವಿರುದ್ಧ ಮೊದಲ ವಿಕೆಟ್‌ಗೆ 165 ರನ್‌ ಸೇರಿಸಿದ್ದರು. ಗಿಲ್‌ ಔಟಾದ ಬಳಿಕ ತಿಲಕ್‌ ವರ್ಮಾ (ಔಟಾಗದೆ 7) ಅವರೊಂದಿಗೆ ಸೇರಿಕೊಂಡು ಯುವ ಆಟಗಾರ ಜೈಸ್ವಾಲ್‌, ಭಾರತ ತಂಡವನ್ನು ಜಯದತ್ತ ಮುನ್ನಡೆಸಿದರು. ಹೆಟ್ಮೆಯರ್‌ ಆಸರೆ: ಇದಕ್ಕೂ ಮುನ್ನ ಟಾಸ್ ಗೆದ್ದ ವೆಸ್ಟ್ ಇಂಡೀಸ್ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಹೆಟ್ಮೆಯರ್ (61; 39ಎ, 4X3, 6X4) ಮತ್ತು ಶೈ ಹೋಪ್ (45; 29ಎ, 4X3, 6X2) ಅವರ ಆಟದಿಂದ ಸವಾಲಿನ ಮೊತ್ತ ಪೇರಿಸಿತು. ಭಾರತದ ಎಡಗೈ ವೇಗಿ ಆರ್ಷದೀಪ್ ಸಿಂಗ್ (38ಕ್ಕೆ3) ಮತ್ತು ಸ್ಪಿನ್ನರ್ ಕುಲದೀಪ್ ಯಾದವ್ (26ಕ್ಕೆ2) ಪರಿಣಾಮಕಾರಿ ದಾಳಿಯ ಮುಂದೆ ಸಣ್ಣ ಮೊತ್ತಕ್ಕೆ ಕುಸಿಯುವ ಆತಂಕವನ್ನು ಆತಿಥೇಯ ತಂಡವು ಅನುಭವಿಸಿತ್ತು. 57 ರನ್‌ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡಿತ್ತು. ಆದರೆ ಈ ಭೀತಿಯನ್ನು ಐದನೇ ಕ್ರಮಾಂಕದ ಬ್ಯಾಟರ್ ಹೆಟ್ಮೆಯರ್ ಅವರು ದೂರಗೊಳಿಸಿದರು. ಹೋಪ್ ಜೊತೆಗೂಡಿದ ಅವರು ಐದನೇ ವಿಕೆಟ್‌ಗೆ 49 ರನ್ ಸೇರಿಸಿದರು. ಇದರಿಂದಾಗಿ ತಂಡವು ನೂರರ ಗಡಿ ದಾಟಲು ಸಾಧ್ಯವಾಯಿತು. ಹೋಪ್ ಅವರ ವಿಕೆಟ್ ಗಳಿಸಿದ ಸ್ಪಿನ್ನರ್ ಯಜುವೇಂದ್ರ ಚಾಹಲ್ ಜೊತೆಯಾಟವನ್ನು ಮುರಿದರು. ನಂತರ ಬಂದ ಬ್ಯಾಟರ್‌ಗಳಲ್ಲಿ ಯಾರೂ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲುವ ಗೋಜಿಗೆ ಹೋಗಲಿಲ್ಲ. ಆದರೆ, ಶಿಮ್ರಾನ್ ಮಾತ್ರ ಬ್ಯಾಟ್ ಬೀಸಿದರು. ಎಷ್ಟು ಸಾಧ್ಯವೋ ಅಷ್ಟು ರನ್‌ ಬಾಚುವ ತಂತ್ರ ಅನುಸರಿಸಿದರು. ನಾಲ್ಕು ಸಿಕ್ಸರ್‌ಗಳು ಮತ್ತು ಮೂರು ಬೌಂಡರಿಗಳನ್ನು ಸಿಡಿಸಿದರು. 156ರ ಸ್ಟ್ರೈಕ್‌ರೇಟ್‌ನಲ್ಲಿ ರನ್‌ ಗಳಿಸಿದರು. ಆವರ ಆಟಕ್ಕೆ ಕೊನೆಯ ಓವರ್‌ನಲ್ಲಿ ಆರ್ಷದೀಪ್ ತಡೆಯೊಡ್ಡಿದರು. ಕೊನೆಯ ಹಂತದಲ್ಲಿ ಒಡಿಯನ್ ಸ್ಮಿತ್ (ಅಜೇಯ 15; 12ಎ) ಕೂಡ ಉತ್ತಮವಾಗಿ ಬ್ಯಾಟಿಂಗ್ ಮಾಡಿದರು. ಇನಿಂಗ್ಸ್‌ ಆರಂಭದಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಿದರೂ ಕೊನೆಯ ಹಂತದ ಓವರ್‌ಗಳಲ್ಲಿ ರನ್‌ ಬಿಟ್ಟು ಕೊಡುವ ಭಾರತ ತಂಡದ ಬೌಲರ್‌ಗಳ ದೌರ್ಬಲ್ಯ ಈ ಪಂದ್ಯದಲ್ಲಿಯೂ ಎದ್ದು ಕಂಡಿತು. ಸಂಕ್ಷಿಪ್ತ ಸ್ಕೋರು: ವೆಸ್ಟ್ ಇಂಡೀಸ್: 20 ಓವರ್‌ಗಳಲ್ಲಿ 8ಕ್ಕೆ178 (ಶೈ ಹೋಪ್ 45, ಶಿಮ್ರಾನ್ ಹೆಟ್ಮೆಯರ್ 61, ಒಡಿಯನ್ ಸ್ಮಿತ್ ಔಟಾಗದೆ 15, ಆರ್ಷದೀಪ್ ಸಿಂಗ್ 38ಕ್ಕೆ3, ಕುಲದೀಪ್ ಯಾದವ್ 26ಕ್ಕೆ2) ಭಾರತ: 17 ಓವರ್‌ಗಳಲ್ಲಿ 1 ವಿಕೆಟ್‌ಗೆ 179 (ಯಶಸ್ವಿ ಜೈಸ್ವಾಲ್‌ ಔಟಾಗದೆ 84, ಶುಭಮನ್‌ ಗಿಲ್‌ 77, ತಿಲಕ್‌ ವರ್ಮಾ ಔಟಾಗದೆ 7) ಫಲಿತಾಂಶ: ಭಾರತಕ್ಕೆ 9 ವಿಕೆಟ್‌ ಗೆಲುವು ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.