ಭಾರತ ವಿರುದ್ಧ ಏಕದಿನ ಸರಣಿ ಆಡುವ ವಿಶ್ವಾಸ: ಆಸ್ಟ್ರೇಲಿಯಾದ ಪ್ಯಾಟ್‌ ಕಮಿನ್ಸ್‌ ಸಿಡ್ನಿ: ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ನಾಯಕ ಪ್ಯಾಟ್‌ ಕಮಿನ್ಸ್‌ ಅವರು ಸೆಪ್ಟೆಂಬರ್‌ ಅಂತ್ಯದಲ್ಲಿ ನಡೆಯುವ ಭಾರತ ವಿರುದ್ಧದ ಮೂರು ಏಕದಿನ ಪಂದ್ಯಗಳ ಸರಣಿಗೆ ವಾಪಸಾಗುವ ವಿಶ್ವಾಸವನ್ನು ಮಂಗಳವಾರ ವ್ಯಕ್ತಪಡಿಸಿದ್ದಾರೆ. ಜುಲೈ 27ರಿಂದ 31ರವರೆಗೆ ನಡೆದ ಆ್ಯಷಸ್‌ ಸರಣಿಯ ಐದನೇ ಪಂದ್ಯದ ವೇಳೆ ವೇಗದ ಬೌಲರ್ ಆಗಿರುವ ಕಮಿನ್ಸ್‌ ಅವರ ಎಡಗೈ ಮಣಿಕಟ್ಟಿಗೆ ಗಾಯವಾಗಿತ್ತು. ಹೀಗಾಗಿ, ಅವರಿಗೆ ಆರು ವಾರಗಳ ವಿಶ್ರಾಂತಿಗೆ ಸಲಹೆ ನೀಡಲಾಗಿದೆ. ಹೀಗಾಗಿ, ಸೆ.7ರಿಂದ 17ರ ನಡುವೆ ನಡೆಯುವ ದಕ್ಷಿಣ ಆಫ್ರಿಕಾ ವಿರುದ್ಧದ ಐದು ಏಕದಿನ ಸರಣಿಗೆ ಅವರು ಅಲಭ್ಯರಾಗಿದ್ದಾರೆ. ಸೆ.22, 24 ಮತ್ತು 27ರಂದು ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಮೂರು ಏಕದಿನ ಪಂದ್ಯಗಳು ನಿಗದಿಯಾಗಿದ್ದು, ಆ ಸರಣಿಯಲ್ಲಿ ತಂಡವನ್ನು ಮುನ್ನಡೆಸುವ ವಿಶ್ವಾಸದಲ್ಲಿದ್ದಾರೆ. ‘ಇನ್ನು ಕೆಲ ವಾರಗಳಲ್ಲಿ ನಾನು ಸಂಪೂರ್ಣವಾಗಿ ಚೇತರಿಸಿಕೊಳ್ಳಲಿದ್ದೇನೆ. ವಿಶ್ವಕಪ್‌ಗೆ ಮುನ್ನ ನಡೆಯುವ ಭಾರತ ವಿರುದ್ಧದ ಏಕದಿನ ಸರಣಿ ಹಾಗೂ ಭಾರತದಲ್ಲಿ ನಡೆಯುವ ಏಕದಿನ ವಿಶ್ವಕಪ್‌ ಟೂರ್ನಿಯ ಆಡಲು ಎದುರು ನೋಡುತ್ತಿದ್ದೇನೆ’ ಎಂದು ಕಮಿನ್ಸ್‌ ಹೇಳಿದ್ದಾರೆ. ‘ವಿಶ್ವಕಪ್‌ ಟೂರ್ನಿಯ ಬಳಿಕ ಏಕದಿನ ಪಂದ್ಯಗಳಲ್ಲಿ ನಾಯಕನಾಗಿ ತಮ್ಮ ಸಾಧನೆಯ ಮೌಲ್ಯಮಾಪನ ಮಾಡಲಾಗುವುದು. ಆಸ್ಟ್ರೇಲಿಯಾ ಟಿ20 ತಂಡಕ್ಕೆ ನಾಯಕನಾಗಿ ನೇಮಕಗೊಂಡಿರುವ ಮಿಚೆಲ್ ಮಾರ್ಷ್ ಅವರು ಏಕದಿನ ತಂಡಕ್ಕೂ ನಾಯಕರಾಗಲು ಸಮರ್ಥರು’ ಎಂದು ತಿಳಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.