ಮಹಾರಾಜ ಟ್ರೋಫಿ ಕ್ರಿಕೆಟ್: ಶರತ್ ಅಬ್ಬರದ ಶತಕ ಬೆಂಗಳೂರು: ವಿಕೆಟ್‌ಕೀಪರ್ –ಬ್ಯಾಟರ್ ಬಿ.ಆರ್. ಶರತ್ ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಅಬ್ಬರದ ಶತಕ ಬಾರಿಸಿದರು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಶರತ್ (ಅಜೇಯ 111; 61ಎ) ಆಟದಿಂದ ಮಂಗಳೂರು ಡ್ರ್ಯಾಗನ್ಸ್‌ ತಂಡವು 5 ವಿಕೆಟ್‌ಗಳಿಂದ ಮೈಸೂರು ವಾರಿಯರ್ಸ್ ವಿರುದ್ಧ ಗೆದ್ದಿತು. ಮಂಗಳೂರಿಗೆ ಇದು ಮೊದಲ ಜಯ. ಸೋಮವಾರದ ಪಂದ್ಯದಲ್ಲಿ ಸೋತಿತ್ತು. ಟಾಸ್ ಗೆದ್ದ ಮಂಗಳೂರು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೈಸೂರು ತಂಡದ ನಾಯಕ ಕರುಣ್ ನಾಯರ್ (77; 39ಎ, 4X9, 6X2) ಅಮೋಘ ಅರ್ಧಶತಕದ ಬಲದಿಂದ 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 201 ರನ್‌ ಗಳಿಸಿತು. ಈ ಕಠಿಣ ಗುರಿಯನ್ನು ಮಂಗಳೂರು ತಂಡವು ಇನಿಂಗ್ಸ್‌ನಲ್ಲಿ ಇನ್ನೂ 7 ಎಸೆತಗಳು ಬಾಕಿಯಿರುವಾಗಲೇ ಮುಟ್ಟಿತು. ಅದಕ್ಕೆ ಕಾರಣವಾಗಿದ್ದು ಶರತ್ ಬ್ಯಾಟಿಂಗ್. ಮೊದಲ ಓವರ್‌ನಲ್ಲಿಯೇ ನವೀನ್ ಎಂ.ಜಿ. ಔಟಾದಾಗ ಕ್ರೀಸ್‌ಗೆ ಬಂದ ಶರತ್, ತಂಡವನ್ನು ಗೆಲುವಿನ ಗಡಿ ಮುಟ್ಟಿಸಿದರು. ಕ್ರೀಸ್‌ನಲ್ಲಿದ್ದ ರೋಹನ್ ಪಾಟೀಲ ಮತ್ತು ಶರತ್ ಸೇರಿ ತಂಡದ ಆತಂಕ ದೂರ ಮಾಡಿದರು. ಕೇವಲ 32 ಎಸೆತಗಳಲ್ಲಿ ಅರ್ಧಶತಕ ಹೊಡೆದ ಶರತ್, ತಾವೆದುರಿಸಿದ 57ನೇ ಎಸೆತದಲ್ಲಿ ನೂರರ ಗಡಿ ಮುಟ್ಟಿದರು. ಎರಡನೇ ವಿಕೆಟ್ ಜೊತೆಯಾಟದಲ್ಲಿ 96 ರನ್‌ ಸೇರಿಸಿದರು. ಒಂಬತ್ತು ಬೌಂಡರಿ ಮತ್ತು ಐದು ಸಿಕ್ಸರ್‌ಗಳನ್ನೂ ಗಳಿಸಿದರು. ಹತ್ತನೇ ಓವರ್‌ನಲ್ಲಿ ರೋಹನ್ (54; 27ಎ, 4X5, 6X3) ವಿಕೆಟ್ ಗಳಿಸಿದ ಎಡಗೈ ಸ್ಪಿನ್ನರ್ ಜೆ. ಸುಚಿತ್ ಸಂಭ್ರಮಿಸಿದರು. ಸಂಕ್ಷಿಪ್ತ ಸ್ಕೋರು: ಮೈಸೂರು ವಾರಿಯರ್ಸ್: 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 201 (ಸಿ.ಎ. ಕಾರ್ತಿಕ್ 29, ಕರುಣ್ ನಾಯರ್ 77, ರಾಹುಲ್ ರಾವತ್ 24, ತುಷಾರ್ ಸಿಂಗ್ 20, ಮನೋಜ್ ಭಾಂಡಗೆ ಔಟಾಗದೆ 26, ಆದಿತ್ಯ ಗೋಯಲ್ 49ಕ್ಕೆ1, ಪ್ರತೀಕ್ ಜೈನ್ 35ಕ್ಕೆ1, ನವೀನ್ ಎಂ.ಜಿ. 42ಕ್ಕೆ1, ಕೆ. ಗೌತಮ್ 30ಕ್ಕೆ1) ಮಂಗಳೂರು ಡ್ರ್ಯಾಗನ್ಸ್: 18.5 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 202 (ರೋಹನ್ ಪಾಟೀಲ 54, ಬಿ.ಆರ್. ಶರತ್ ಔಟಾಗದೆ 111, ಕೆ.ವಿ. ಸಿದ್ಧಾರ್ಥ್ 14, ಎಂ. ವೆಂಕಟೇಶ್ 36ಕ್ಕೆ2, ಜೆ. ಸುಚಿತ್ 37ಕ್ಕೆ2) ಫಲಿತಾಂಶ: ಮಂಗಳೂರು ಡ್ರ್ಯಾಗನ್ಸ್‌ಗೆ 5 ವಿಕೆಟ್‌ಗಳ ಜಯ. ಪಂದ್ಯಶ್ರೇಷ್ಠ: ಬಿ.ಆರ್. ಶರತ್. ಶಿವಮೊಗ್ಗ ಲಯನ್ಸ್: 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 201 (ರೋಹನ್ ಕದಂ 70, ನಿಹಾಲ್ ಉಲ್ಲಾಳ 40, ಅಭಿನವ್ ಮನೋಹರ್ 31, ಕ್ರಾಂತಿಕುಮಾರ್ 25, ಟಿ. ಪ್ರದೀಪ್ 45ಕ್ಕೆ2, ಎಲ್‌.ಆರ್. ಕುಮಾರ್ 38ಕ್ಕೆ2) ಬೆಂಗಳೂರು ಬ್ಲಾಸ್ಟರ್ಸ್: 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 165 (ಜೆಸ್ವಂತ್ ಆಚಾರ್ಯ 29, ಪವನ್ ದೇಶಪಾಂಡೆ 32, ಶುಭಾಂಗ್ ಹೆಗಡೆ 22, ಆಶಿಶ್ ಮಹೇಶ್ ಔಟಾಗದೆ 30, ಲೋಚನ್ ಅಪ್ಪಣ್ಣ 17, ಎಲ್.ಆರ್. ಕುಮಾರ್ ಔಟಾಗದೆ 16, ಶ್ರೇಯಸ್ ಗೋಪಾಲ್ 11ಕ್ಕೆ1, ವಿ. ಕೌಶಿಕ್ 23ಕ್ಕೆ1) ಫಲಿತಾಂಶ: ಶಿವಮೊಗ್ಗ ಲಯನ್ಸ್‌ಗೆ 36 ರನ್‌ಗಳ ಜಯ. ಪಂದ್ಯಶ್ರೇಷ್ಠ: ರೋಹನ್ ಕದಂ. ಇಂದಿನ ಪಂದ್ಯಗಳು ಬೆಂಗಳೂರು ಬ್ಲಾಸ್ಟರ್ಸ್–ಹುಬ್ಬಳ್ಳಿ ಟೈಗರ್ಸ್ (ಮಧ್ಯಾಹ್ನ 1) ಮೈಸೂರು ವಾರಿಯರ್ಸ್–ಗುಲ್ಬರ್ಗ ಮಿಸ್ಟಿಕ್ಸ್ (ಸಂಜೆ 5.30) ನೇರಪ್ರಸಾರ : ಸ್ಟಾರ್ ಸ್ಪೋರ್ಟ್ಸ್ ಕನ್ನಡ, ಫ್ಯಾನ್‌ಕೋಡ್ ಆ್ಯಪ್ - - ರೋಹನ್ ನಿಹಾಲ್ ಆಟಕ್ಕೆ ಜಯ ರೋಹನ್ ಕದಂ ಮತ್ತು ನಿಹಾಲ್ ಉಲ್ಲಾಳ ಅವರ ಆರಂಭಿಕ ಜೊತೆಯಾಟದ ನೆರವಿನಿಂದ ಶಿವಮೊಗ್ಗ ಲಯನ್ಸ್‌ ತಂಡವು 36 ರನ್‌ಗಳಿಂದ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ ಜಯಸಿತು. ತಂಡಕ್ಕೆ ಇದು ಸತತ ಎರಡನೇ ಗೆಲುವು. ದಿನದ ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದ ಬೆಂಗಳೂರು ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಶಿವಮೊಗ್ಗ ತಂಡದ ಆರಂಭಿಕ ಜೋಡಿ ರೋಹನ್ (70; 47ಎ) ಮತ್ತು ನಿಹಾಲ್ (40; 17ಎ) ಮೊದಲ ವಿಕೆಟ್ ಜೊತೆಯಾಟದಲ್ಲಿ 65 ರನ್ ಸೇರಿಸಿದರು. ಈ ಅಡಿಪಾಯದ ಮೇಲೆ ತಂಡವು 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 201 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಬೆಂಗಳೂರು ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 165 ರನ್‌ ಗಳಿಸಲಷ್ಟೇ ಶಕ್ತವಾಯಿತು. ತಂಡದ ಆರಂಭಿಕ ಬ್ಯಾಟರ್‌ಗಳಾದ ಭುವನ್ ರಾಜು ಮತ್ತು ಮಯಂಕ್ ಅಗರವಾಲ್ ಅವರಿಬ್ಬರೂ ಸೊನ್ನೆ ಸುತ್ತಿದರು. ಮೊದಲ ಓವರ್‌ನ ಮೂರನೇ ಎಸೆತದಲ್ಲಿ ಮಯಂಕ್ ರನೌಟ್ ಆದರು. ಎರಡನೇ ಓವರ್ ಬೌಲಿಂಗ್ ಮಾಡಿದ ಕೌಶಿಕ್‌ಗೆ ಕೌಶಿಕ್ ಬೌಲಿಂಗ್‌ನಲ್ಲಿ ಭುವನ್ ವಿಕೆಟ್ ಒಪ್ಪಿಸಿದರು. ಇದರಿಂದ ಒತ್ತಡಕ್ಕೊಳಗಾದ ತಂಡವನ್ನು ಸೋಲಿನತ್ತ ತಳ್ಳುವಲ್ಲಿ ಶಿವಮೊಗ್ಗದ ಬೌಲರ್‌ಗಳು ಯಶಸ್ವಿಯಾದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.